More

    ಅವ್ಯವಸ್ಥೆ ಆಗರವಾಗಿದೆ ಶವಾಗಾರ

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

    ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರವು ನೀರು, ವಿದ್ಯುತ್, ರಸ್ತೆ ಮತ್ತಿತರ ಸೌಕರ್ಯಗಳಿಂದ ವಂಚಿತವಾಗಿದೆ.

    ನರೇಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ 20 ಗ್ರಾಮಗಳಲ್ಲಿ ನಡೆಯುವ ಅಪಘಾತ, ಆತ್ಮಹತ್ಯೆ, ಕೊಲೆ, ಪ್ರಕೃತಿ ವಿಕೋಪ, ಮತ್ತಿತರ ಸಂದರ್ಭಗಳಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಈ ಶವಾಗಾರದಲ್ಲಿ ನಡೆಸಲಾಗುತ್ತದೆ. ಅದರಲ್ಲೂ ಜಿಲ್ಲೆಯ ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಿಂತ ಅತಿ ಹೆಚ್ಚು ಮರಣೋತ್ತರ ಪರೀಕ್ಷೆಗಳು ಇಲ್ಲಿಯೇ ನಡೆಯುತ್ತವೆ.

    ಈ ಶವಾಗಾರದ ಕಟ್ಟಡ ಶಿಥಿಲಗೊಂಡಿದೆ. ಇಲ್ಲಿಗೆ ತೆರಳುವ ರಸ್ತೆ ಕೆಸರುಗದ್ದೆಯಂತಾಗಿದೆ. ರಸ್ತೆಯ ಎರಡೂ ಬದಿ ಜಾಲಿಕಂಟಿಗಳು ಬೆಳೆದಿವೆ. ಕಾಂಪೌಂಡ್​ನ ಅರ್ಧಭಾಗ ಬಿದ್ದಿದೆ. ಶವಾಗಾರ ಕಟ್ಟಡದ ಗೋಡೆಗಳು ಸಂಪೂರ್ಣ ಬಿರುಕು ಬಿಟ್ಟಿವೆ. ಕಿಟಕಿ, ಬಾಗಿಲು ಕಿತ್ತು ಹೋಗಿವೆ. ಮರಣೋತ್ತರ ಪರೀಕ್ಷೆ ಮಾಡುವ ಕಟ್ಟೆ ಸಹ ಕಿತ್ತು ಹೋಗಿದೆ.

    ಮರಣೋತ್ತರ ಪರೀಕ್ಷೆಗೆ ಆಗಮಿಸುವ ಮೃತರ ಸಂಬಂಧಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಮಧ್ಯೆ ಸಾಕಷ್ಟು ವಾಗ್ವಾದಗಳು ಶವಾಗಾರದ ಅವ್ಯವಸ್ಥೆ ಪರಿಣಾಮವಾಗಿ ನಡೆದಿವೆ.

    ರಾತ್ರಿ ಸಮಯದಲ್ಲಿ ಅಪಘಾತ ಸಂಭವಿಸಿ ಮೃತಪಟ್ಟವರನ್ನು ಶವಾಗಾರಕ್ಕೆ ಸಾಗಿಸಲು ಹಸರಸಾಹಸ ಪಡಬೇಕಾದ ಸ್ಥಿತಿಯಿದೆ. ಕಷ್ಟಪಟ್ಟು ಸಾಗಿಸಿದರೂ ರಾತ್ರಿಯಿಡೀ ಶವ ಕಾಯಲೇಬೇಕು. ಇಲ್ಲದಿದ್ದರೆ ಕಿಟಕಿ, ಬಾಗಿಲು, ಕಾಂಪೌಂಡ್ ಕಿತ್ತುಹೋಗಿರುವ ಶವಾಗಾರದಲ್ಲಿಟ್ಟ ಮೃತದೇಹವನ್ನು ನಾಯಿಗಳು ಕಿತ್ತು ತಿನ್ನುತ್ತವೆ. ಹೀಗಾಗಿ, ಮೃತರ ಸಂಬಂಧಿಕರು, ಪೊಲೀಸರು ಶವವನ್ನು ಕಾಯುವುದು ಅನಿವಾರ್ಯವಾಗಿದೆ. ಶವಾಗಾರ ದುಸ್ಥಿತಿಯಲ್ಲಿದ್ದು, ಹೊಸ ಶವಾಗಾರ ನಿರ್ವಿುಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ನರೇಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಮರಣೋತ್ತರ ಪರೀಕ್ಷೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಪಟ್ಟಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸುತ್ತಿರುವ 24 ಹಾಸಿಗೆಗಳ ಆಸ್ಪತ್ರೆಗೆ ಹೊಂದಿಕೊಂಡಂತೆ ಹೊಸದಾಗಿ ಶವಾಗಾರ ನಿರ್ವಿುಸಬೇಕು.

    | ಮೈಲಾರಪ್ಪ ಗೋಡಿ ಜಯ ಕರ್ನಾಟಕ ಸಂಘಟನೆ ಉಪಾಧ್ಯಕ್ಷ, ನರೇಗಲ್ಲ

    ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರ ಸಂಪೂರ್ಣ ಶಿಥಿಲಗೊಂಡಿದೆ. ಈ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.

    | ಡಾ. ಎ.ಡಿ. ಸಾಮುದ್ರಿ ವೈದ್ಯಾಧಿಕಾರಿ, ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts