More

    ಅರಣ್ಯ ಇಲಾಖೆಗೆ ಅಕೇಶಿಯಾ ವ್ಯಾಮೋಹ

    ಸುಭಾಸ ಧೂಪದಹೊಂಡ ಕಾರವಾರ: ಜಿಲ್ಲೆಯಲ್ಲಿ ಅಕೇಶಿಯಾ ವಿರುದ್ಧ ಮತ್ತೆ ಕೂಗು ಎದ್ದಿದೆ. ಮಳೆಗಾಲ ಪ್ರಾರಂಭವಾದ ತಕ್ಷಣ ಅರಣ್ಯ ಇಲಾಖೆಯು ವಿವಿಧೆಡೆ ಗಿಡಗಳ ನಾಟಿ ಆರಂಭಿಸಿದೆ. ಆದರೆ, ಸರ್ಕಾರವು ಭಾಗಶಃ ನಿರ್ಬಂಧಿಸಿರುವ ಅಕೇಶಿಯಾ ಏಕಜಾತಿಯ ನೆಡುತೋಪಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದು, ಇದಕ್ಕೆ ಜಿಲ್ಲೆಯ ವಿವಿಧೆಡೆ ಸಾರ್ವಜನಿಕರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.

    ಭಟ್ಕಳ, ಗೋಕರ್ಣ ಹಾಗೂ ಶಿರಸಿಯಲ್ಲಿ ಜನರು ಈಗಾಗಲೇ ಅಕೇಶಿಯಾ ನಾಟಿ ವಿರೋಧಿಸಿ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇತರೆ ಗಿಡಗಳು ಸುಲಭವಾಗಿ ಬೆಳೆಯಬಹುದಾದ ಪ್ರದೇಶದಲ್ಲೂ ಅರಣ್ಯ ಇಲಾಖೆ ಅಕೇಶಿಯಾ ವನ ನಿರ್ವಣಕ್ಕೆ ಮುಂದಾಗಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

    300 ಹೆಕ್ಟೇರ್ ನಾಟಿ: ಹಳಿಯಾಳ ವಿಭಾಗದಲ್ಲಿ 4.59, ಹೊನ್ನಾವರದಲ್ಲಿ 402.07, ಕಾರವಾರದಲ್ಲಿ 45.44, ಶಿರಸಿಯಲ್ಲಿ 159.52, ಯಲ್ಲಾಪುರದಲ್ಲಿ 3.51 ಸೇರಿ 615.13 ಹೆಕ್ಟೇರ್​ನಷ್ಟು ಅಕೇಶಿಯಾ ಪ್ಲಾಂಟೇಶನ್ ಅರಣ್ಯ ಭೂಮಿಯಲ್ಲಿದೆ.

    ಮತ್ತೆ ಈ ಬಾರಿಯೂ ಪ್ರಮುಖವಾಗಿ ಜಿಲ್ಲೆಯ ಹೊನ್ನಾವರ ಹಾಗೂ ಶಿರಸಿ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ 300 ಹೆಕ್ಟೇರ್​ಗೂ ಹೆಚ್ಚಿನ ಪ್ರದೇಶದಲ್ಲಿ 4.8 ಲಕ್ಷಕ್ಕೂ ಅಧಿಕ ಅಕೇಶಿಯಾ ಗಿಡಗಳ ನಾಟಿಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಇದುವರೆಗೆ ಅಕೇಶಿಯಾ ಪ್ಲಾಂಟೇಶನ್ ಇಲ್ಲದ ಪ್ರದೇಶಗಳನ್ನೂ ಹೊಸದಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತಿರುವುದು ಜನರ ಆಕ್ಷೇಪಕ್ಕೆ ಮೂಲ ಕಾರಣ.

    ಗ್ರಾಪಂನಲ್ಲಿ ನಿರ್ಣಯ: ಕುಮಟಾ ತಾಲೂಕಿನ ಹಿರೇಗುತ್ತಿ ವಲಯದ ಜೂಗಾ, ಅಗ್ರಗೋಣ, ಹೊಸ್ಕೇರಿ, ಅಶೋಕೆ ಮತ್ತು ಬೇಲೆಕಾನ, ಸಗಡಗೇರಿ, ಮಾದನಗೇರಿ, ಅಂಬುಕೋಣ, ದೇವಿಗದ್ದೆ ಅರಣ್ಯದಲ್ಲಿ ಅಕೇಶಿಯಾ ಮರಗಳನ್ನು ಕಟಾವು ಮಾಡಲಾಗಿತ್ತು. ಇದರಲ್ಲಿ ಮತ್ತೆ ಅಕೇಶಿಯಾ ಹಾಕಬಾರದು ಎಂದು ಸ್ಥಳೀಯ ಗ್ರಾಪಂಗಳು ನಿರ್ಣಯ ಮಾಡಿದ್ದವು. ಆದರೆ, ಇದಕ್ಕೆ ಬೆಲೆ ಇಲ್ಲದಂತೆ ಮತ್ತೆ ಅಕೇಶಿಯಾ ಗಿಡಗಳನ್ನು ಹಾಕಲಾಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

    ಒಮ್ಮೆ ಕಟಾವು ಮಾಡಿದ ಪ್ರದೇಶದಲ್ಲಿ ಮತ್ತೆ ಅಕೇಶಿಯಾ ಬೆಳೆಸದಂತೆ ನಾವು ಕಳೆದ ಮೂರ್ನಾಲ್ಕು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಆದರೂ ಅರಣ್ಯ ಇಲಾಖೆ ಮಾತ್ರ ಮತ್ತೆ ಅಕೇಶಿಯಾ ಮೋಹ ಬಿಡುತ್ತಿಲ್ಲ ಎನುವುದಾಗಿ ಗೋಕರ್ಣ ಅಗ್ರಗೋಣ ಕರಾವಳಿ ಸಮಾಜ ಸೇವಾ ಸಂಘಟನೆಯ ಬಳಗದ ಸದಸ್ಯರು ಹೇಳುತ್ತಾರೆ.

    ಅರಣ್ಯಾಧಿಕಾರಿಗಳು ಹೇಳುವುದೇನು?: ಶೇ. 25ಕ್ಕಿಂತ ಕಡಿಮೆ ಅರಣ್ಯವಿರುವ, ಲ್ಯಾಟರೈಟ್ ಕಲ್ಲುಗಳಿರುವ ಬೋಳು ಗುಡ್ಡದಲ್ಲಿ ಮಾತ್ರ ಅಕೇಶಿಯಾ ಬೆಳೆಸಬಹುದು ಎಂದು 2011ರ ಅರಣ್ಯ ಇಲಾಖೆಯ ಸುತ್ತೋಲೆಯೊಂದು ಹೇಳುತ್ತದೆ. 2017ರ ಇನ್ನೊಂದು ಸುತ್ತೋಲೆಯಲ್ಲಿ ಹೊಸದಾಗಿ ಯಾವುದೇ ಪ್ರದೇಶದಲ್ಲಿ ಅಕೇಶಿಯಾ ಬೆಳೆಸದಂತೆ ಸೂಚಿಸಲಾಗಿದೆ. ಉತ್ತರ ಕನ್ನಡದ ಗ್ರಾಮೀಣ ಜನ ಕಾಡಿನ ಮೇಲೆ ಅವಲಂಬಿಸಿದ್ದಾರೆ. ನಾವು ಅಲ್ಪಸ್ವಲ್ಪವೂ ಅಕೇಶಿಯಾ ಬೆಳೆಸದಿದ್ದರೆ, ಜನ ಮುಖ್ಯ ಅರಣ್ಯದತ್ತ ಕಟ್ಟಿಗೆಗಾಗಿ ಹೋಗುತ್ತಾರೆ. ಕನಿಷ್ಠ ಉರುವಲು ಕಟ್ಟಿಗೆ, ಬೇಲಿ ಗುಟ್ಟಕ್ಕಾದರೂ ಅಕೇಶಿಯಾ ಬೇಕು ಎಂಬುದು ಅರಣ್ಯಾಧಿಕಾರಿಗಳು ಹೇಳುವ ಮಾತು.

    ಅರಣ್ಯಾಧಿಕಾರಿಗಳು ಹೇಳುವುದೇನು?: ಶೇ. 25ಕ್ಕಿಂತ ಕಡಿಮೆ ಅರಣ್ಯವಿರುವ, ಲ್ಯಾಟರೈಟ್ ಕಲ್ಲುಗಳಿರುವ ಬೋಳು ಗುಡ್ಡದಲ್ಲಿ ಮಾತ್ರ ಅಕೇಶಿಯಾ ಬೆಳೆಸಬಹುದು ಎಂದು 2011ರ ಅರಣ್ಯ ಇಲಾಖೆಯ ಸುತ್ತೋಲೆಯೊಂದು ಹೇಳುತ್ತದೆ. 2017ರ ಇನ್ನೊಂದು ಸುತ್ತೋಲೆಯಲ್ಲಿ ಹೊಸದಾಗಿ ಯಾವುದೇ ಪ್ರದೇಶದಲ್ಲಿ ಅಕೇಶಿಯಾ ಬೆಳೆಸದಂತೆ ಸೂಚಿಸಲಾಗಿದೆ. ಉತ್ತರ ಕನ್ನಡದ ಗ್ರಾಮೀಣ ಜನ ಕಾಡಿನ ಮೇಲೆ ಅವಲಂಬಿಸಿದ್ದಾರೆ. ನಾವು ಅಲ್ಪಸ್ವಲ್ಪವೂ ಅಕೇಶಿಯಾ ಬೆಳೆಸದಿದ್ದರೆ, ಜನ ಮುಖ್ಯ ಅರಣ್ಯದತ್ತ ಕಟ್ಟಿಗೆಗಾಗಿ ಹೋಗುತ್ತಾರೆ. ಕನಿಷ್ಠ ಉರುವಲು ಕಟ್ಟಿಗೆ, ಬೇಲಿ ಗುಟ್ಟಕ್ಕಾದರೂ ಅಕೇಶಿಯಾ ಬೇಕು ಎಂಬುದು ಅರಣ್ಯಾಧಿಕಾರಿಗಳು ಹೇಳುವ ಮಾತು.

    ನಮಗೂ ಅಕೇಶಿಯಾ ಬೆಳೆಸುವ ಆಸಕ್ತಿ ಇಲ್ಲ. ಅದನ್ನು ನಿಧಾನವಾಗಿ ಕಡಿಮೆ ಮಾಡುತ್ತಿದ್ದೇವೆ. ಹೊನ್ನಾವರ ವಿಭಾಗ ವ್ಯಾಪ್ತಿಯಲ್ಲೇ ಈ ಬಾರಿ ಸುಮಾರು 100 ಹೆಕ್ಟೇರ್​ನಷ್ಟು ಅಕೇಶಿಯಾ ಪ್ಲಾಂಟೇಶನ್​ನಲ್ಲಿ ಬೇರೆ ಅರಣ್ಯ ಬೆಳೆಸಲಾಗುತ್ತಿದೆ. ಇನ್ನು ಏನೂ ಬೆಳೆಯದ ಕುಮಟಾ ಮೂರೂರು ಗುಡ್ಡದಂಥ ಲ್ಯಾಟರೈಟ್ ಪ್ರದೇಶದಲ್ಲಿ ಅಕೇಶಿಯಾ ನಾಟಿ ಮಾಡಲಾಗುತ್ತಿದೆ. ಅದರೊಟ್ಟಿಗೆ ಗೇರು ಗಿಡಗಳನ್ನು ಬೆಳೆಸಲಾಗುತ್ತಿದೆ. ಜಿಲ್ಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ವರ್ಷಕ್ಕೆ ಕನಿಷ್ಠ 50 ಸಾವಿರ ಕ್ಯೂಬಿಕ್ ಮೀಟರ್ ಕಟ್ಟಿಗೆ ಬೇಕು. ಅದಕ್ಕೆ ಹಾಗೂ ಇನ್ನಷ್ಟು ಉರುವಲಿಗಾಗಿ ಕೆಲವು ಕಟ್ಟಿಗೆ ಡಿಪೋಗಳನ್ನು ಗುರುತಿಸಲಾಗಿದ್ದು, ಅದಕ್ಕೆ ಜೋಡಿಸಿಕೊಂಡಿರುವ ನೆಡುತೋಪುಗಳಲ್ಲಿ ಮಾತ್ರ ಅಕೇಶಿಯಾ ಬೆಳೆಯಲಾಗುತ್ತಿದೆ. | ಕೆ. ಗಣಪತಿ ಡಿಎಫ್​ಒ, ಹೊನ್ನಾವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts