More

    ಅಭಿವೃದ್ಧಿ ಕಾಮಗಾರಿಯಲ್ಲಿ ನಿರ್ಲಕ್ಷ್ಯ ಬೇಡ

    ಗದಗ: ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಅವರು ಹೇಳಿದರು.

    ಜಿಲ್ಲೆಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ನಂತರ ಮಾತನಾಡಿದ ಅವರು, ಈಗಾಗಲೇ ಸರ್ಕಾರದಿಂದ ಅನುಮೋದನೆ ದೊರೆತು, ಅನುದಾನ ಬಿಡುಗಡೆಯಾದರೂ ಕೆಲವು ಕಾಮಗಾರಿಗಳು ಮುಗಿದಿಲ್ಲ. ಇಂತಹ ಕಾಮಗಾರಿಗಳನ್ನು ಯಾವುದೇ ಕಾರಣ ಹೇಳದೆ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಕಟ್ಟು ನಿಟ್ಟಾಗಿ ಸೂಚನೆ ನೀಡಲಾಗಿದೆ ಎಂದರು.

    ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಯುಜಿಡಿ ಯೋಜನೆ ಜಾರಿಯಾಗಬೇಕು. ಕೈಗೊಳ್ಳಬೇಕಾದಂತಹ ಯುಜಿಡಿ ಕಾಮಗಾರಿಗಳ ಪ್ರಸ್ತಾವನೆಗಳನ್ನು ಶೀಘ್ರ ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಲಾಗಿದೆ. ಅಲ್ಲದೇ, ಎಲ್ಲ ಪಟ್ಟಣಗಳಿಗೆ ನಿರಂತರ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲು ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದೆ. ಈ ಪ್ರಸ್ತಾವನೆಗೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.

    ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲಾಗುವ ನೂತನ ಬಡಾವಣೆಗಳಲ್ಲಿ ಶೇ.5 ರಷ್ಟು ಮಾಧ್ಯಮ ಪ್ರತಿನಿಧಿಗಳಿಗೆ ಮೀಸಲಿಡಲು ಸರ್ಕಾರ ನಿರ್ಧರಿಸಿದೆ. ಸದ್ಯದಲ್ಲೇ ಈ ಕುರಿತು ಆದೇಶ ಹೊರಬೀಳಲಿದೆ ಇದರಿಂದ ಪತ್ರಕರ್ತರಿಗೆ ಸಹ ನಿವೇಶನ ಸಿಗಲಿದೆ ಎಂದರು.

    ಜಿಲ್ಲಾ ಕೇಂದ್ರದಲ್ಲಿ ನಿರ್ವಣವಾಗಿರುವ ಅತ್ಯಾಧುನಿಕ ಸೌಲಭ್ಯಗಳುಳ್ಳ ಗೌರವ ಘಟಕವನ್ನು ಸೂಕ್ತವಾಗಿ ನಿರ್ವಹಿಸುವುದರ ಜೊತೆಗೆ ವೈಯಕ್ತಿಕ ಶುಚಿತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಘಟಕದ ಸದುಪಯೋಗವಾಗುವಂತೆ ನೋಡಿಕೊಳ್ಳಲು ಅಧಿಕಾರಿಗಳು ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವರು ಬಸವರಾಜ ಅವರು ತಿಳಿಸಿದರು.

    ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಳಕಪ್ಪ ಬಂಡಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹಾಜರಿದ್ದರು.

    ಮಹಿಳಾ ಆಯೋಗದ ಅಧ್ಯಕ್ಷೆ ನಾಳೆ ನಗರಕ್ಕೆ

    ಗದಗ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಸೆ.9 ಮತ್ತು 10 ರಂದು ಗದಗ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸೆ.9 ರಂದು ಬೆಳಗ್ಗೆ 10.30 ರಿಂದ 11.30 ರವರೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನೊಂದ ಮಹಿಳೆಯರ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಉಪ್ಪು ತಿಂದವರು ನೀರು ಕುಡಿಯಲೇಬೇಕು!

    ಗದಗ: ಡ್ರಗ್ಸ್ ಮಾಫಿಯಾದಲ್ಲಿ ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿದ್ದರೂ ಬಿಡುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಹೇಳಿದರು. ಗದಗ ನಗರದ ಪ್ರವಾಸಿಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದಲ್ಲಿ ಯಾವುದೇ ರಂಗದವರಿದ್ದರೂ ಕಠಿಣ ಕ್ರಮ ಜರುಗಿಸುತ್ತೇವೆ. ನಟಿ ರಾಗಿಣಿ ಪ್ರಕರಣದಲ್ಲಿ ಯಾವ ನಾಯಕರ ಕೈವಾಡವಿದೆ ಎಂಬುದು ಗೊತ್ತಿಲ್ಲ. ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದರು.

    ಬಿಎಸ್​ವೈ ಪುತ್ರರ ಹಸ್ತಕ್ಷೇಪವಿಲ್ಲ: ರಾಜ್ಯ ಸರ್ಕಾರದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರರು ಯಾವುದೇ ರೀತಿಯ ಹಸ್ತಕ್ಷೇಪ ಮಾಡುತ್ತಿಲ್ಲ ಎಂದರು. ಮುಖ್ಯಮಂತ್ರಿಗೆ ಸಾಕಷ್ಟು ಅನುಭವವಿದ್ದು, ಮಕ್ಕಳಿಂದ ಹೇಳಿಸಿಕೊಂಡು ಕೆಲಸ ಮಾಡುವ ಅವಶ್ಯಕತೆ ಬಂದಿಲ್ಲ ಎಂದರು. ಏಳೆಂಟು ತಿಂಗಳಿನಿಂದ ನಾನು ಸಚಿವನಾಗೆ ಕೆಲಸ ಮಾಡುತ್ತಿದ್ದೇನೆ. ನಾನು ಹಾಗೂ ನಮ್ಮ ಶಾಸಕರು ಕೆಲಸ ಮಾಡುತ್ತಿದ್ದೇವೆ ಅಂತಹ ವಾತಾವರಣ ನಮ್ಮಲ್ಲಿ ಇಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts