More

    ಅಭಿವೃದ್ಧಿ ಕಾಣದ ಸೂರ್ಯನಗರ : ಬಡಾವಣೆ ನಿರ್ಮಿಸಿ ಹದಿನಾರು ವರ್ಷಗಳಾದರೂ ಮೂಲಸೌಕರ್ಯ ಕೊರತೆ

    ನವೀನ್ ಚಂದ್ರಶೆಟ್ಟಿ ಆನೇಕಲ್
    ಸೂರ್ಯನಗರ ನಿರ್ಮಿಸಿ 16 ವರ್ಷಗಳಾದರೂ ಮೂರನೇ ಹಂತದಲ್ಲಿ ಕುಡಿಯುವ ನೀರು, ರಸ್ತೆ, ಬೀದಿದೀಪ ಸೌಕರ್ಯ ಕಲ್ಪಿಸದಿರುವುದರಿಂದ ನಗರ ನಿರ್ಜನ ಪ್ರದೇಶದಂತಾಗಿದೆ.
    ರಾಜ್ಯ ಗೃಹ ಮಂಡಳಿಯು 2006ರಲ್ಲಿ ಅತ್ತಿಬೆಲೆ ಸಮೀಪದ ಜಿಗಳ, ಆದಿಗೊಂಡನಹಳ್ಳಿ, ಯಡವನಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಗಳಿಂದ ಒಟ್ಟು 968 ಎಕರೆ ಜಮೀನನ್ನು ಭೂಸ್ವಾದೀನಪಡಿಸಿಕೊಂಡು ಸೂರ್ಯಸಿಟಿಯ ಮೂರನೇ ಹಂತ ನಿರ್ಮಿಸಿತ್ತು. 2014ರಲ್ಲಿ 600ಕ್ಕೂ ಹೆಚ್ಚು ಕುಟುಂಬಗಳಿಗೆ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿತ್ತು. ಆದರೆ ಆ ನಂತರ ಇತ್ತ ಕಡೆ ತಲೆ ಹಾಕದ ಗೃಹ ಮಂಡಳಿ ಇಲ್ಲಿಯವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಮುಂದಾಗಿಲ್ಲ. ಬಡಾವಣೆ ನಿರ್ಮಾಣವಾಗಿ 16 ವರ್ಷ ಕಳೆಯುತ್ತಿದ್ದರೂ ಸೌಲಭ್ಯ ಮರೀಚಿಕೆಯಾಗಿದೆ. ನಿವೇಶನ ಖರೀದಿಸಿದವರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.


    ವಿದ್ಯುತ್ ಉಪಕರಣಗಳು ಹಾಳಾಗಿವೆ: ಬಡಾವಣೆಗೆ ಪ್ರತ್ಯೇಕ ವಿದ್ಯುತ್ ಸಂಪರ್ಕ ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆಯಾದರೂ ಮನೆಗಳಿಗೆ ಸಂಪರ್ಕ ಕಲ್ಪಿಸುವಾಗ ಕಳಪೆ ಉಪಕರಣ ಬಳಸಿರುವುದರಿಂದ ಬಹುತೇಕ ಹಾಳಾಗಿವೆ. ಇದರಿಂದ ಆಗಾಗ್ಗೆ ವಿದ್ಯುತ್ ವ್ಯತ್ಯದ ಸಮಸ್ಯೆ ಎದುರಿಸುವಂತಾಗಿದೆ.
    ಮನೆಯೊಂದಕ್ಕೆ ತಿಂಗಳಿಗೆ ಮೂರು ಟ್ಯಾಂಕ್ ನೀರು: ಬಡಾವಣೆಗೆ ಕಾವೇರಿ ನೀರು ಪೂರೈಕೆ ಸಂಬಂಧಿಸಿದಂತೆ ಅನುಮತಿ ಹಾಗೂ ಅನುದಾನ ಮಂಜೂರಾದರೂ ಕಾವೇರಿ ನೀರು ಮಾತ್ರ ಬಡಾವಣೆಗೆ ಹರಿಯಲೇ ಇಲ್ಲ. ನೀರು ಸಂಸ್ಕರಣೆಗೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿದ್ದರೂ ಉದ್ಘಾಟನೆಯಾಗಿಲ್ಲ. ಬಡಾವಣೆ ನಿರ್ಮಾಣವಾದ ದಿನಗಳಿಂದ ಇಲ್ಲಿಯವರೆಗೂ ದಿನ ನಿತ್ಯದ ಬಳಕೆಗಾಗಿ ಮನೆಯೊಂದಕ್ಕೆ ತಿಂಗಳಿಗೆ ಮೂರು ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕ್ ಮೂಲಕ ನೀರು ಪೂರೈಸಲು ಮುತುವರ್ಜಿ ವಹಿಸುವ ಅಧಿಕಾರಿಗಳು ಕಾವೇರಿ ನೀರು ಪೂರೈಸಲು ಕ್ರಮ ಕೈಗೊಂಡರೆ ಮಂಡಳಿಯ ಹಣವೂ ಉಳಿಯಲಿದೆ, ಸಾರ್ವಜನಿಕರಿಗೂ ಕಿರಿಕಿರಿ ತಪ್ಪಲಿದೆ.

    ಜೂಜು ಅಡ್ಡೆಯಾದ ಬಡಾವಣೆ: ಕುಡುಕರು, ಅಪರಿಚಿತರು ಬಡಾವಣೆಯನ್ನು ಜೂಜು ಅಡ್ದೆ ಮಾಡಿಕೊಂಡಿದ್ದಾರೆ. ವಾಸವಿಲ್ಲದ ಮನೆಗಳ ಆವರಣದಲ್ಲಿ ಕೆಲವರು ಅನೈತಿಕ ಚಟುವಟಿಗೆಗಳನ್ನೂ ನಡೆಸುತ್ತಿದ್ದಾರೆ. ಇದರಿಂದ ಬಡಾವಣೆಯಲ್ಲಿರುವ ಕುಟುಂಬಗಳು ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

    ನಿವೇಶನಗಳಲ್ಲಿ ವ್ಯವಸಾಯ: ಬಡಾವಣೆಯಲ್ಲಿ ನಾಲ್ಕು ಬ್ಲಾಕ್‌ಗಳಿದ್ದು, 10 ಸಾವಿರ ನಿವೇಶನಗಳಿವೆ. ಈ ಪೈಕಿ 660 ಮನೆಗಳು ನಿರ್ಮಾಣವಾಗಿವೆ. ಬಡಾವಣೆಯಲ್ಲಿ ಸಮರ್ಪಕ ಮೂಲ ಸೌಕರ್ಯಗಳಿಲ್ಲದ ಕಾರಣ ಹೆಚ್ಚಿನ ಮಂದಿ ಮನೆ ಕಟ್ಟಿಸಲು ಆಸಕ್ತಿ ತೋರುತ್ತಿಲ್ಲ. ಬಹುತೇಕ ಪ್ರದೇಶ ಖಾಲಿ ಉಳಿದಿರುವುದರಿಂದ ಸುತ್ತಮುತ್ತಲ ಗ್ರಾಮಗಳ ರೈತರು ದನ ಮೇಯಿಸಲು ಬಳಸಿಕೊಳ್ಳುತ್ತಿದ್ದಾರೆ. ಕೆಲ ಸೈಟ್‌ಗಳಲ್ಲಿ ವ್ಯವಸಾಯವನ್ನೂ ಮಾಡಲಾಗುತ್ತಿದೆ.

    ಎಲ್ಲೆಂದರಲ್ಲಿ ಕಸದ ರಾಶಿ: ಬಡಾವಣೆಯು ನೆರಳೂರು, ಬಿದರಗುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿಯೂ ವಿಸ್ತರಿಸಿಕೊಂಡಿದ್ದು, ಸಮನ್ವಯತೆ ಕೊರತೆಯಿಂದ ಗ್ರಾಪಂ ವ್ಯಾಪ್ತಿಯ ಕಸವನ್ನು ಬಡಾವಣೆಯಲ್ಲೇ ಸುರಿಯಲಾಗುತ್ತಿದೆ. ಜತೆಗೆ ಅಲ್ಲಲ್ಲಿ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಇಡೀ ಪರಿಸರ ದುರ್ನಾತ ಬೀರುತ್ತಿದೆ. ಸಾಂಕ್ರಾಮಿಕ ಭೀತಿಯಲ್ಲೇ ಬಡಾವಣೆಯಲ್ಲಿರುವ ಬೆರಳೆಣಿಕೆಯಷ್ಟು ಜನ ವಾಸಿಸುವಂತಾಗಿದೆ.

    ಕಾವೇರಿ ನೀರು ಪೂರೈಕೆಗೆ ಪೈನ್‌ಲೈನ್ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ಸಮಸ್ಯೆ ಉಂಟಾಗಿದೆ. ಬಡಾವಣೆಗೆ ಅವಶ್ಯವಿರುವ ಮೂಲಸೌಕರ್ಯ ಕೊರತೆ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುವುದು.
    ಹೆಸರು ಹೇಳಲು ಇಚ್ಛಿಸದ ಅಧಿಕಾರಿ

    ಬಡಾವಣೆ ಅಭಿವೃದ್ಧಿಗೆ ಗೃಹ ಮಂಡಳಿ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗದಿದ್ದರೆ ಭೂಮಿಯನ್ನು ಸ್ವಾಧೀನಪಡಿಕೊಂಡು ಯಾವ ಪುರುಷಾರ್ಥಕ್ಕೆ ಬಡಾವಣೆ ನಿರ್ಮಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ವಸತಿ ಸಚಿವ ವಿ.ಸೋಮಣ್ಣ ಅವರು ಇಲ್ಲಿಯ ಅಧಿಕಾರಿಗಳ ಸಭೆ ಕರೆದು ಕ್ರಮ ತೆಗೆದುಕೊಳ್ಳಬೇಕು.
    ಶಶಿಕುಮಾರ್ ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts