More

    ಅಪೌಷ್ಟಿಕತೆ ನಿವಾರಣೆಗೆ ಒತ್ತು ಕೊಡಿ

    ಯಾದಗಿರಿ: ಮಕ್ಕಳಿಗೆ ಕಾಡುತ್ತಿರುವ ಅಪೌಷ್ಟಿಕ ಸಮಸ್ಯೆ ನಿವಾರಣೆ ಮತ್ತು ಕಡಿಮೆ ತೂಕದ ಮಕ್ಕಳ ಆರೋಗ್ಯದ ಕಡೆ ಜಿಲ್ಲಾಡಳಿತ ಹೆಚ್ಚಿನ ಗಮನಹರಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ವಿಮಾನಯಾನ ರಾಜ್ಯ ಸಚಿವ ಜನರಲ್ ವಿಜಯಕುಮಾರ್ ಸಿಂಗ್ (ವಿ.ಕೆ.ಸಿಂಗ್) ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನೀತಿ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನೀತಿ ಆಯೋಗ ಯಾದಗಿರಿಯನ್ನು ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಗುರುತಿಸಿದೆ. ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯಕ್ಕೆ ಸರ್ಕಾರ ಹೆಚ್ಚಿನ ಒತ್ತು ಕೊಡುತ್ತಿದೆ ಎಂದು ತಿಳಿಸಿದರು.

    ತಾಯಿ-ಮಕ್ಕಳ ಮರಣ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಾಗಿದ್ದು ಒಳ್ಳೆಯ ಬೆಳವಣಿಗೆ. ಅಂಗನವಾಡಿ ಕಟ್ಟಡ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಲವರ್ಧನೆ ಅಗತ್ಯವಿದೆ. ಇದರಿಂದ ಸರ್ಕಾರದ ಯೋಜನೆಗಳು ಪಂಚಾಯಿತಿ ಮಟ್ಟಕ್ಕೆ ತಲುಪಲು ಸಾಧ್ಯ. ಮಕ್ಕಳು ಶಾಲೆಗೆ ಬರುವಂತೆ ಕಟ್ಟಡ ಮತ್ತು ಅಲ್ಲಿನ ಪರಿಸರ ಆಕರ್ಷಕವಾಗಿರುವಂತೆ ನೋಡಿಕೊಳ್ಳಬೇಕು. ಗುಣಮಟ್ಟದ ಕಲಿಕೆಗೆ ಆದ್ಯತೆ ನೀಡಬೇಕು. ಕುಡಿಯುವ ನೀರು, ಶೌಚಗೃಹ, ಆಟದ ಮೈದಾನ ಹೀಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಬೇಕು ಎಂದರು.

    ಅಂತರ್ಜಲ ಮಟ್ಟ ಹೆಚ್ಚಿಸಲು ಜಿಲ್ಲೆಯ ಜಲಮೂಲಗಳನ್ನು ಸಂರಕ್ಷಿಸಬೇಕು. ಯಾದಗಿರಿ ವೈದ್ಯಕೀಯ ಕಾಲೇಜು ಮುನ್ನವೇ ಸಿಬ್ಬಂದಿ ನೇಮಿಸಿ ಜನತೆಗೆ ಆರೋಗ್ಯ ಸೇವೆ ಒದಗಿಸಬೇಕು. ಜಿಲ್ಲೆಯ ಶಿಕ್ಷಕರ ಕೊರತೆ ನೀಗಿಸಲು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಡಿ ಆನ್ಲೈನ್ ಶಿಕ್ಷಕರ ಬಳಸಿಕೊಳ್ಳಬೇಕು ಎಂದು ಹೇಳಿದರು.

    ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್. ವಿವಿಧ ಯೋಜನೆಗಳ ಮಾಹಿತಿ ನೀಡಿದರು. ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ವೆಂಕಟರಡ್ಡಿ ಮುದ್ನಾಳ್, ನರಸಿಂಹ ನಾಯಕ (ರಾಜುಗೌಡ), ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜಿಪಂ ಸಿಇಒ ಅಮರೇಶ ನಾಯ್ಕ್, ಅಪರ ಡಿಸಿ ಶಂಕರಗೌಡ ಸೋಮನಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts