More

    ಅನ್ಯಾಯಕ್ಕೊಳಗಾದವರಿಂದ ಮಾಹಿತಿ ಸಂಗ್ರಹ

    ಹೊನ್ನಾವರ: ಜಲವಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಮತ್ತು ಕೆಲ ಸಿಬ್ಬಂದಿ ಪೋರ್ಜರಿ ಸಹಿ ಮಾಡಿ ವಂಚಿಸಿರುವ ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅನ್ಯಾಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಸದಸ್ಯರಿಗೆ ಪೊಲೀಸರು ನೋಟಿಸ್ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

    ಜಲವಳ್ಳಿ ವಿಎಸ್​ಎಸ್​ನಲ್ಲಿ ಬೆಳೆ ಸಾಲ ಪಡೆಯದ ಸದಸ್ಯರ ಹೆಸರಿನಲ್ಲಿ ಅವರಿಗೆ ತಿಳಿಯದಂತೆ ಸಾಲ ಮಂಜೂರು ಮಾಡಿಕೊಂಡು ಸಹಿಯನ್ನು ಪೋರ್ಜರಿ ಮಾಡಿ ಹಣ ವಿತ್​ಡ್ರಾ ಮಾಡಿಕೊಂಡು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎನ್ನುವ ಆರೋಪ ವರ್ಷದ ಹಿಂದೆ ಕೇಳಿ ಬಂದಿತ್ತು.

    ಪ್ರಕರಣ ಬೆಳಕಿಗೆ ಬಂದ ನಂತರ ಸಹಕಾರ ಇಲಾಖೆ ಸಹಾಯಕ ನಿಬಂಧಕರಿಂದ ತನಿಖೆ ಆರಂಭವಾಗಿ ವರ್ಷ ಕಳೆದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತಹ ಯಾವುದೇ ಬೆಳವಣಿಗೆ ನಡೆದಿರಲಿಲ್ಲ.

    ಮಾಹಿತಿ ಸಂಗ್ರಹಣೆಗಾಗಿ ಅನ್ಯಾಯಕ್ಕೆ ಒಳಗಾದ ಸದಸ್ಯರಿಗೆ ಕಳೆದ ಸೋಮವಾರ ಪೊಲೀಸರಿಂದ ನೋಟೀಸ್ ಜಾರಿಯಾಗಿದ್ದು ವಿಚಾರಣೆಯಿಂದ ಪ್ರಕರಣಕ್ಕೆ ಮರುಜೀವ ಬಂದಂತಾಗಿದೆ.

    ಪೊಲೀಸ್ ಠಾಣೆಗೆ ದೂರು: ಈ ನಡುವೆ 2019 ಡಿಸೆಂಬರ್ 24ರಂದು ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿದ್ದ ಹನ್ಮಂತ ರಾಮ ಗೌಡ ಎಂಬುವವರು ಹೊನ್ನಾವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

    ಶ್ರೀಧರ ರಾಮಕೃಷ್ಣ ಶೆಟ್ಟಿ, ಚಂದ್ರಕಾಂತ ಸುಬ್ರಾಯ ನಾಯ್ಕ, ನಾಗಪ್ಪ ತಿಮ್ಮಪ್ಪ ಗೌಡ ವಿರುದ್ಧ ದೂರು ನೀಡಲಾಗಿದೆ. ಈ ಮೂವರು ಜಲವಳ್ಳಿ ವಿ.ಎಸ್.ಎಸ್.ನಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ 2018-19 ನೇ ಸಾಲಿನಲ್ಲಿ ರೈತರಿಗೆ ಮಂಜೂರಾದ ಬೆಳೆಸಾಲದ ಹಣದಲ್ಲಿ 53 ಸದಸ್ಯರಿಗೆ ಮಂಜೂರಾದ ಬೆಳೆ ಸಾಲದ ಹಣವನ್ನು ನಗದಾಗಿ ವಿತರಿಸದೇ ಅಥವಾ ಅವರು ಹೊಂದಿರುವ ಖಾತೆಗೂ ವರ್ಗಾಯಿಸದೇ ಸದಸ್ಯರು ಹೊಂದಿದ್ದ ಚೆಕ್​ನ ಮೇಲೆ ಫೋರ್ಜರಿ ಸಹಿ ಮಾಡಿ ಸುಮಾರು 24.18 ಲಕ್ಷ ರೂ. ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

    ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಪಿಐ ಶ್ರೀಧರ ಎಸ್.ಆರ್. ಅವರು ವಂಚನೆಗೆ ಒಳಗಾದವರು ಎಂದು ಹೆಸರಿಸಲಾದ ರೈತರಿಗೆ ಸೂಕ್ತ ಮಾಹಿತಿ ಮತ್ತು ದಾಖಲೆಯನ್ನು ಸಲ್ಲಿಸುವಂತೆ ನೊಟೀಸ್ ನೀಡಿ ವಿಚಾರಣೆಯನ್ನು ಆರಂಭಿಸಿದ್ದಾರೆ.

    ನಮ್ಮ ತಂದೆಯ ಹೆಸರಿನಲ್ಲಿ 91 ಸಾವಿರ ರೂ. ಬೆಳೆ ಸಾಲ ಮಂಜೂರಿಯಾಗಿ ಸಂಘದವರೇ ಡ್ರಾ ಮಾಡಿರುವುದು ಕಂಡು ಬಂದಿದೆ. ಹಣ ಪಡೆಯುವ ವೋಚರ್​ಗಳಲ್ಲಿ ಸಹಿ ಇರಲಿಲ್ಲ. ಚೆಕ್ ಮೇಲೆ ತಂದೆಯ ಸಹಿಯನ್ನು ಪೋರ್ಜರಿ ಮಾಡಿದ್ದರು. ನಮ್ಮಂತೆಯೇ ಮತ್ತೆ 52 ಮಂದಿಗೂ ಇದೇ ರೀತಿ ಅನ್ಯಾಯವಾಗಿರುವುದು ನಂತರ ಬೆಳಕಿಗೆ ಬಂದು ಆ ಬಗ್ಗೆ ತನಿಖೆ ನಡೆಯುತ್ತಿದೆ.

    | ಶ್ರೀಧರ ನಾರಾಯಣ ನಾಯ್ಕ ಜಲವಳ್ಳಿ, ರೈತ

    • ಕಳೆದೊಂದು ವರ್ಷದ ಪೊಲೀಸ್ ತನಿಖೆ ಹಾದಿ
    • ಕೆಡಿಸಿಸಿ ಬ್ಯಾಂಕ್​ನಿಂದ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹ
    • ದೂರುದಾರರು ಹಾಗೂ ಆರೋಪಿಗಳ ವಿಚಾರಣೆ
    • ಫೋರೆನ್ಸಿಕ್ ಲ್ಯಾಬ್​ನಲ್ಲಿ ಚೆಕ್​ನ ಮೇಲಿನ ಸಹಿ ಪರಿಶೀಲನೆ
    • ಕರೊನಾ ಕಾರಣದಿಂದ ತನಿಖೆಯಲ್ಲಿ ಅಲ್ಪ ಮಟ್ಟಿನ ವಿಳಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts