More

    ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ ಅವ್ಯಾಹತ

    ಧಾರವಾಡ: ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ತಲುಪಬೇಕಾದ ಅಕ್ಕಿಯನ್ನು ಜಿಲ್ಲೆಯಿಂದ ಬೇರೆಡೆಗೆ ಅಕ್ರಮವಾಗಿ ಸಾಗಿಸುವಿಕೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪಡಿತರ ಅಂಗಡಿಗಳ ಮೂಲಕ ವಿತರಣೆಯಾಗಬೇಕಾದ ಅಕ್ಕಿ ಉಳ್ಳವರ ಪಾಲಾಗುತ್ತಿದ್ದರೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದಕ್ಕೆ ಇತ್ತೀಚಿನ ಪ್ರಕರಣ ಉದಾಹರಣೆಯಾಗಿದೆ.

    ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯ ಶ್ರೀ ಬಾಲಾಜಿ ಟ್ರೇಡಿಂಗ್ ಕಂಪನಿ ರಸೀದಿಯೊಂದಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 220 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಇತ್ತೀಚೆಗೆ ಜಪ್ತಿ ಮಾಡಲಾಗಿದೆ. ಹುಬ್ಬಳ್ಳಿಯಿಂದ ಮಹಾರಾಷ್ಟ್ರಕ್ಕೆ ಫುಡ್ ಇಂಡಸ್ಟ್ರೀಸ್ ಒಂದಕ್ಕೆ ಲಾರಿಯಲ್ಲಿ ಸಾಗಿಸುತ್ತಿದ್ದ ಅಕ್ಕಿಯನ್ನು ತಾಲೂಕಿನ ನರೇಂದ್ರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಪ್ತಿ ಮಾಡಲಾಗಿತ್ತು. ಇದು ಜಿಲ್ಲೆಯ ಮೊದಲ ಪ್ರಕರಣವೇನಲ್ಲ. ಮೇಲಿಂದ ಮೇಲೆ ಅಕ್ರಮ ಸಾಗಣೆ ಪ್ರಕರಣಗಳು ಪತ್ತೆಯಾಗುತ್ತಿದ್ದರೂ ಸಂಪೂರ್ಣ ತಡೆಗೆ ಇಲಾಖೆ ವಿಫಲವಾಗಿದೆ. ಪಡಿತರ ಅಂಗಡಿಗಳ ಮೂಲಕ ಬಡವರಿಗೆ ವಿತರಿಸಲು ಸರ್ಕಾರದಿಂದ ಪ್ರತಿ ತಿಂಗಳು ಹುಬ್ಬಳ್ಳಿಯ ಭಾರತೀಯ ಆಹಾರ ನಿಗಮಕ್ಕೆ (ಎಫ್​ಸಿಐ) ಗೋದಾಮಿಗೆ ಬರುತ್ತದೆ. ಆಯಾ ತಿಂಗಳ ಬೇಡಿಕೆಗೆ ಅನುಗುಣವಾಗಿ ನಿರ್ದಿಷ್ಟ ಪ್ರಮಾಣದ ಅಕ್ಕಿಯನ್ನು ಆಯಾ ತಾಲೂಕು ಗೋದಾಮುಗಳಿಗೆ ಕಳುಹಿಸಲಾಗುತ್ತದೆ. ಪಡಿತರ ಅಂಗಡಿಗಳಿಗೆ ತಲುಪಬೇಕಾದ ಉಚಿತ ಅಕ್ಕಿ ಉಳ್ಳವರ ಪಾಲಾಗುವುದು ಹೇಗೆ ಎಂಬುದು ಯಕ್ಷಪ್ರಶ್ನೆ.

    ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯವೈಖರಿ- ದಂಡವಿಲ್ಲ, ದಾಳಿ ಇಲ್ಲ ಎಂಬಂತಾಗಿದೆ. ಪಡಿತರ ಅಕ್ರಮಗಳ ಕುರಿತು ದೂರುಗಳು ಬಂದರೂ ಕ್ಯಾರೇ ಎನ್ನುವವರಿಲ್ಲ ಎನ್ನಲಾಗುತ್ತದೆ. ಕಾಟಾಚಾರಕ್ಕೊಮ್ಮೆ ದಾಳಿ ನಡೆಯುವುದನ್ನು ಬಿಟ್ಟರೆ ಅಧಿಕಾರಿಗಳ ದಿಢೀರ್ ಕ್ರಮ ದೂರದ ಮಾತು. ಕೆಲ ಪೆಟ್ರೋಲ್ ಬಂಕ್​ಗಳಲ್ಲಿ ತೈಲೋತ್ಪನ್ನಗಳ ಕಲಬೆರಕೆ, ಅಳತೆಯಲ್ಲಿ ಮೋಸದ ದೂರುಗಳು ಕೇಳಿಬಂದರೂ ಕ್ರಮವಿಲ್ಲದಿರುವುದು ದುರಂತ.

    ದಾಳಿ ನಡೆದೇ ಇಲ್ಲ: ಹುಬ್ಬಳ್ಳಿ ಅಮರಗೋಳದ ಶ್ರೀ ಬಾಲಾಜಿ ಟ್ರೇಡಿಂಗ್ ಕಂಪನಿಯಿಂದ ಅಕ್ಕಿ ಸಾಗಿಸಲಾಗುತ್ತಿರುವುದು ಸೋಮವಾರ ಸಂಜೆ ದಾಳಿ ನಡೆದಾಗಲೇ ಖಚಿತವಾಗಿದೆ. ಈ ವಿಷಯ ಜಿಲ್ಲಾ ಆಹಾರ ಇಲಾಖೆ ಹಿರಿಯ ಅಧಿಕಾರಿಗಳಿಗೂ ಗೊತ್ತಾಗಿದೆ. ಆದರೆ, ಕೂಡಲೆ ಬಾಲಾಜಿ ಟ್ರೇಡಿಂಗ್ ಕಂಪನಿ ಗೋದಾಮಿನ ಮೇಲೆ ದಾಳಿ ಮಾಡಿ, ಮತ್ತಿಷ್ಟು ಪಡಿತರ ಅಕ್ಕಿ ದಾಸ್ತಾನಿದೆಯೆ ಎಂಬ ತಪಾಸಣೆಗೆ ಅವರು ಕ್ರಮ ಕೈಗೊಂಡಿಲ್ಲ. ಹೀಗಾಗಿ, ಪಡಿತರ ಅಕ್ಕಿಯ ಈ ಪ್ರಕರಣ ಸದ್ಯಕ್ಕೆ 220 ಕ್ವಿಂಟಾಲ್​ಗೆ ಸೀಮಿತವಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯಕ್ಕೆ ಅಕ್ಕಿ ಚೀಲಗಳು ಸಹ ಪೊಲೀಸ್ ವಶದಲ್ಲೇ ಇವೆ. ಮಂಗಳವಾರ ಎಫ್​ಐಆರ್ ದಾಖಲಾಗಿದೆ. ಸದ್ಯದಲ್ಲೇ ಪೊಲೀಸ್ ತನಿಖೆ ಚುರುಕುಗೊಳ್ಳುವ ನಿರೀಕ್ಷೆ ಇದೆ.

    ಉಚಿತ ಅಕ್ಕಿ ದುರುಪಯೋಗ: ಕರೊನಾ ಲಾಕ್​ಡೌನ್​ನಿಂದಾಗಿ ಸರ್ಕಾರ ಬಿಪಿಎಲ್ ಹಾಗೂ ಅಂತ್ಯೋದಯ ಚೀಟಿಯ ಸದಸ್ಯರಿಗೆ ತಲಾ 10 ಕೆಜಿಯಂತೆ ಉಚಿತ ಅಕ್ಕಿ ವಿತರಿಸಿದೆ. 2 ತಿಂಗಳ ಅಕ್ಕಿಯನ್ನು ಒಮ್ಮೆಲೇ ವಿತರಿಸಿದೆ. 4-5 ಸದಸ್ಯರಿರುವ ಕುಟುಂಬಗಳು (2 ತಿಂಗಳಿಗೆ) 80-100 ಕೆಜಿ ಅಕ್ಕಿ ಪಡೆದರೆ, ಬಳಸಿ ಮೀರುವ ಅಕ್ಕಿಯನ್ನು ಮಾರಾಟ ಮಾಡುವುದಿದೆ. ಉತ್ತರ ಕರ್ನಾಟಕ ಭಾಗದ ಆಹಾರದಲ್ಲಿ ಜೋಳ, ಗೋಧಿಗೆ ಹೆಚ್ಚಿನ ಆದ್ಯತೆ ಇರುವುದರಿಂದ ಹಲವಾರು ಕುಟುಂಬಗಳು ಪ್ರತಿ ತಿಂಗಳು ಅರ್ಧಕ್ಕರ್ಧ ಅಕ್ಕಿ ಮಾರಾಟ ಮಾಡುತ್ತಾರೆ. ಗ್ರಾಮೀಣ ಪ್ರದೇಶಗಳ ಜನ ನಗರದ ಸೂಪರ್ ಮಾರುಕಟ್ಟೆ, ನೆಹರೂ ಮಾರುಕಟ್ಟೆಯ ಕೆಲ ಕಿರಾಣಿ ಅಂಗಡಿಗಳಿಗೆ ಕೆಜಿಗೆ 12 ರೂ.ಗಳಂತೆ ಮಾರಾಟ ಮಾಡುತ್ತಾರೆ ಎನ್ನಲಾಗಿದೆ. ಅಕ್ಕಿ ಖದೀದಿಸುವ ವ್ಯಾಪಾರಸ್ಥರು ನೂರಾರು ಕ್ವಿಂಟಾಲ್ ಸಂಗ್ರಹವಾದ ನಂತರ ಹೊರರಾಜ್ಯಗಳಿಗೆ ರವಾನಿಸುತ್ತಿದ್ದಾರೆ. ಇಂಥ ಅಂಗಡಿಗಳ ಮೇಲೆ ಇಲಾಖೆ ಆಗಾಗ ಕ್ರಮ ಕೈಗೊಂಡರೆ ಮಾರಾಟ ದಂಧೆ ಕೊಂಚ ತಗ್ಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts