More

    ಅನಾದಿ ಕಾಲದಿಂದಲೂ ಜಂಗಮರಿಗಿದೆ ಗೌರವಯುತ ಸ್ಥಾನ

    ಮುಂಡಗೋಡ: ವೀರಶೈವ ಲಿಂಗಾಯತ ಸಮಾಜ ದೊಡ್ಡದು. ದೇಶದ ಹಲವಾರು ರಾಜ್ಯಗಳಲ್ಲಿ ವ್ಯಾಪಿಸಿಕೊಂಡಿದೆ. ಅನಾದಿ ಕಾಲದಿಂದಲೂ ಜಂಗಮರಿಗೆ ಗೌರವ ಸ್ಥಾನವಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸಾಮೀಜಿ ಹೇಳಿದರು.

    ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದ ತಾಲೂಕು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

    ಕಲಿಯುಗದಲ್ಲಿ ಶಕ್ತಿ ಸಂಘಟನೆಯಲ್ಲಿದೆ. ಸಂಘಟನೆಯಲ್ಲಿ ಒಗ್ಗಟ್ಟು ಇರಬೇಕು. ಸಮಾಜದ ವಿಘಟನೆಗೆ ಕಾರಣವಾಗಬಾರದು. ವೃತ್ತಿ ಆಧಾರಿತ ಸಂಘಟನೆ ಇರಬೇಕೇ ಹೊರತು ಜಾತಿ ಆಧಾರಿತ ಸಂಘಟನೆ ಆಗಬಾರದು. ಅರ್ಚಕರು ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆಯನ್ನು ಮಾಡಬೇಕು. ಅರ್ಚಕರು ಹಾಗೂ ಭಕ್ತರಲ್ಲಿ ಸಾಮರಸ್ಯ ಇದ್ದರೆ ಬಾಂಧವ್ಯ ಗಟ್ಟಿಯಾಗಿ ಉಳಿಯುತ್ತದೆ. ಅರ್ಚಕರಿಗೆ ಭಕ್ತರು ಔದಾರ್ಯತೆಯಿಂದ ದಾನ ಮಾಡಬೇಕು. ಅನುಕೂಲಸ್ಥರು ಸ್ವಲ್ಪ ಜಾಸ್ತಿ ಮತ್ತು ಅನನುಕೂಲವಿದ್ದವರು ಸ್ವಲ್ಪ ಕಡಿಮೆ ದಾನ ನೀಡಿದರೂ ಅರ್ಚಕರು ಹೊಂದಾಣಿಕೆಯಿಂದ ಇರಬೇಕು. ಧರ್ಮ ಪರಿಪಾಲನೆಯಿಂದ ಪುಣ್ಯ ದೊರಕುತ್ತದೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿ, ಜನನ ಮತ್ತು ಮರಣ ಎರಡೂ ವೇಳೆಯಲ್ಲಿ ಜಂಗಮರು ಬೇಕು. ಶ್ರೀಮಂತಿಕೆ ಶಾಶ್ವತವಲ್ಲ. ಧರ್ಮದ ಆಚರಣೆ ಮಾಡಬೇಕು ಎಂದರು.

    ಹನುಮಾಪುರ ಕಾಳಿಕಾಮಠದ ಸದಾನಂದ ಶಿವಾಚಾರ್ಯ ಶ್ರೀಗಳು, ಹುನಗುಂದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಗೋಕರ್ಣ ಹನ್ನೆರಡುಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಶಿರಸಿ ಬಣ್ಣದಮಠದ ಶಿವಲಿಂಗ ಸ್ವಾಮೀಜಿ, ಅಂಬಿಕಾನಗರದ ಶಿವಾಚಾರ್ಯ ಸ್ವಾಮೀಜಿ, ಬನವಾಸಿ ಹೊಳೆಮಠದ ನಾಗಭೂಷಣ ಸ್ವಾಮೀಜಿ ಆಶೀರ್ವಚನ ನೀಡಿದರು.

    ಸಂಘದ ಅಧ್ಯಕ್ಷ ಪರಮೇಶ್ವರಯ್ಯ ಕಾನಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಂ. ನಾಗರಾಜ ಶಾಸ್ತ್ರಿ, ಶಿವಯೋಗಿಸ್ವಾಮಿ, ಜಿ.ಪಂ. ಸದಸ್ಯ ರವಿಗೌಡ ಪಾಟೀಲ, ಎಲ್.ಟಿ. ಪಾಟೀಲ, ಉಮೇಶ ಬಿಜಾಪುರ, ಸಿ.ಎಸ್. ಗಾಣಿಗೇರ, ಪಿ.ಎಸ್. ಸಂಗೂರಮಠ, ಶಿವು ದೇಸಾಯಿ, ನಾಗಭೂಷಣ ಹಾವಣಗಿ, ಸಿ.ಎಸ್. ಗೌಡರ, ದಾಕ್ಷಾಯಿಣಿ ಸುರಗಿಮಠ, ಎಸ್.ಎಸ್. ಐನಾಪುರ, ನಾಗರಾಜಯ್ಯ ಕೆಂಕೆರೆಮಠ, ಶಂಕ್ರಯ್ಯ ಶಾಸ್ತ್ರಿ, ಬಸಯ್ಯಾ ಹಿರೇಮಠ, ಪರಮೇಶ್ವರ ಹಿರೇಮಠ ಇತರರಿದ್ದರು. ಮಂಜುನಾಥ ಪಾಟೀಲ, ಮಲ್ಲಿಕಾರ್ಜುನಯ್ಯ ಹುಲಿಕಂತಿಮಠ ಹಾಗೂ ನಾಗರಾಜ ಶಾಸ್ತ್ರಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts