More

    ಅನಧಿಕೃತ ನೌಕರರನ್ನು ಹೊರಗಟ್ಟಿದ ಶಾಸಕ

    ಅರಕಲಗೂಡು: ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ಶಾಸಕ ಎ.ಟಿ. ರಾಮಸ್ವಾಮಿ ಮಂಗಳವಾರ ದಿಢೀರ್ ಭೇಟಿ ನೀಡಿ ಆದೇಶವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಕೆಲವರನ್ನು ಕಚೇರಿಯಿಂದ ಹೊರ ಕಳುಹಿಸಿದ ಘಟನೆ ನಡೆಯಿತು.

    ಭೇಟಿ ವೇಳೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರನ್ನು ಪ್ರಶ್ನಿಸಿದಾಗ ತಾವು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದರು. ಈ ಕುರಿತು ನೇಮಕಾತಿ ಪತ್ರ ನೀಡುವಂತೆ ಕೇಳಿದಾಗ ಯಾರ ಬಳಿಯೂ ಪತ್ರ ಇರಲಿಲ್ಲ. ಇದರಿಂದ ಕೆರಳಿದ ಶಾಸಕರು, ನೇಮಕಾತಿ ಪತ್ರ ತರುವವರೆಗೂ ನೌಕರರು ಕಚೇರಿಯಿಂದ ಹೊರಹೋಗುವಂತೆ ಸೂಚಿಸಿದರು.

    ತಾವು ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಒಂದು ವರ್ಷದಿಂದ ವೇತನವನ್ನೂ ನೀಡಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಗುತ್ತಿಗೆ ನವೀಕರಣ ನಡೆದಿಲ್ಲ, ಹುದ್ದೆಯಲ್ಲಿ ಮುಂದುವರೆಯುವಂತೆ ಸೂಚಿಸಲಾಗಿದೆ. ಹೀಗಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ನೌಕರರು ಸಮಜಾಯಿಷಿ ನೀಡಿದರು. ಆದರೆ, ಇದಕ್ಕೊಪ್ಪದ ಶಾಸಕರು, ಆದೇಶವಿಲ್ಲದೆ ಸರ್ಕಾರಿ ಕಚೇರಿಯಲ್ಲಿ ಈ ರೀತಿ ಕಾರ್ಯನಿರ್ವಹಣೆ ತಪ್ಪು. ಹೆಚ್ಚು ಕಡಿಮೆಯಾದರೆ ಉತ್ತರದಾಯಿತ್ವ ಯಾರು, ಆದೇಶ ಪತ್ರ ತಂದು ಕೆಲಸ ನಿರ್ವಹಿಸುವಂತೆ ಸೂಚಿಸಿದರು. ಈ ಬಗ್ಗೆ ತೀವ್ರ ಅಸಮಾಧಾನವ್ಯಕ್ತಪಡಿಸಿ ದ್ವಿತೀಯ ದರ್ಜೆ ಸಹಾಯಕ ಗೋಪಾಲ್ ಅವರನ್ನು ತರಾಟೆಗೆ ತೆಗೆದುಕೊಂಡರು.

    ಡಿಸಿಗೆ ಪರಿಸ್ಥಿತಿ ವಿವರಣೆ: ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ದೂರವಾಣಿ ಕರೆ ಮಾಡಿದ ರಾಮಸ್ವಾಮಿ ಪರಿಸ್ಥಿತಿ ವಿವರಿಸಿದರು. ಕಚೇರಿ ಅವ್ಯವಸ್ಥೆ ಕುರಿತು ಜಿಲ್ಲಾ ನೋಂದಣಾಧಿಕಾರಿ ಶ್ರೀನಿಧಿ ಅವರನ್ನು ದೂರವಾಣಿಯಲ್ಲೇ ತರಾಟೆಗೆ ತೆಗೆದುಕೊಂಡರು. ಬಳಿಕ ನೋಂದಣಿ ಇಲಾಖೆ ರಾಜ್ಯಮಟ್ಟದ ಅಧಿಕಾರಿ ಮೋಹನ್‌ರಾಜ್ ಅವರನ್ನು ಸಂಪರ್ಕಿಸಿ ತಾಲೂಕು ಕೆಂದ್ರದ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆ ಬಿಟ್ಟರೆ, ಉಳಿದೆಲ್ಲ ಹುದ್ದೆಗಳೂ ಖಾಲಿ ಇವೆ. ಇನ್ನೊಬ್ಬ ದ್ವಿತೀಯ ದರ್ಜೆ ಸಹಾಯಕರನ್ನು ಪರಭಾರೆ ಕೆಲಸದ ಮೇಲೆ ಕಳುಹಿಸಿದೆ. ಕೂಡಲೇ ಅವರನ್ನು ಕಚೇರಿಗೆ ಮರು ನೇಮಕ ಮಾಡುವಂತೆ ಸೂಚಿಸಿದರು.

    ದೂರು ಬಂದಿದ್ದ ಹಿನ್ನೆಲೆ ಪರಿಶೀಲನೆ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಚೇರಿ ಅವ್ಯವಸ್ಥೆ ಕುರಿತು ಹಾಗೂ ಅನಧಿಕೃತವಾಗಿ ನೌಕರರು ಕಾರ್ಯನಿರ್ವಹಿಸುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಬೆಂಗಳೂರು ಎಸಿಬಿ ಕಚೇರಿಗೂ ದೂರುಗಳು ಹೋಗಿದ್ದವು. ಈ ಹಿನ್ನೆಲೆಯಲ್ಲಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ಹೇಳಿದರು.

    ಕಚೇರಿಯಲ್ಲಿ ಒಬ್ಬರು ಮಾತ್ರ ಅಧಿಕೃತ ಸಿಬ್ಬಂದಿ, ಐವರು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೌಕರರು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಆದೇಶವಿದೆ ಎಂದು ಹೇಳಿದರೂ ಯಾರೊಬ್ಬರ ಬಳಿಯೂ ಆದೇಶ ಪತ್ರ ಇಲ್ಲ. ಈ ಕುರಿತು ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts