More

    ಅನಧಿಕೃತ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ

    ಬೆಳಗಾವಿ: ನಗರದ ಸ್ವಚ್ಛತೆ, ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಕೈಗೊಂಡಿರುವ ಮಹಾನಗರ ಪಾಲಿಕೆಯು ಗುರುವಾರ ಬೆಳಗ್ಗೆ ಜೆಸಿಬಿ ಮೂಲಕ ಕಟ್ಟಡಗಳನ್ನು ತೆರವುಗೊಳಿಸಿ, ಮಾಲೀಕರಿಗೆ ಬಿಸಿ ಮುಟ್ಟಿಸಿದೆ.ನಾಲ್ಕೈದು ವರ್ಷಗಳಿಂದ ಹಳೇ ಪಿಬಿ ರಸ್ತೆ, ಕಪಿಲೇಶ್ವರ, ಖಡೇಬಜಾರ ಸೇರಿದಂತೆ ವಿವಿಧ ಕಡೆ ರಸ್ತೆಗಳನ್ನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿಕೊಂಡಿರುವವರಿಗೆ ಸ್ವಯಂ ತೆರವು ಮಾಡಿಕೊಳ್ಳುವಂತೆ ಪಾಲಿಕೆ ನಿರಂತರ ನೋಟಿಸ್ ನೀಡುತ್ತ ಬಂದಿತ್ತು. ನೋಟೀಸ್‌ಗೆ ಸ್ಪಂದಿಸದ ಅನಧಿಕೃತ ಕಟ್ಟಡಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿದ್ದಾರೆ.

    ನಗರದ ಕಪಿಲೇಶ್ವರ ಮೇಲ್ಸೇತುವೆ ಪಕ್ಕದ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಕೆಲವರು ಕಟ್ಟಡ ನಿರ್ಮಿಸಿಕೊಂಡಿದ್ದರು. ಪಾಲಿಕೆಯಿಂದ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ಕಟ್ಟಡ ಮಾಲೀಕರು ಮಾತ್ರ ಒತ್ತುವರಿ ಮಾಡಿಕೊಂಡಿರುವ ಸ್ಥಳ ತೆರವು ಮಾಡಿರಲಿಲ್ಲ. ಇದರಿಂದ ಸ್ಥಳೀಯ ನಿವಾಸಿಗಳು, ವ್ಯಾಪಾರಿ ಗಳು, ವಾಹನ ಸವಾರರು, ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದರು. ಅಲ್ಲದೆ, ಸಾರ್ವಜನಿಕರು ಸಹ ದೂರು ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಆ ಮಾರ್ಗದ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.

    ನಗರದ ಹಳೇ ಪಿಬಿ ರಸ್ತೆಯ ರೈಲ್ವೆ ಮೇಲ್ಸೇತುವೆ ಪಕ್ಕದ ರಸ್ತೆಯನ್ನು ಕೆಲ ವ್ಯಾಪಾರಿಗಳು ಸಂಪೂರ್ಣ ಒತ್ತುವರಿ ಮಾಡಿಕೊಂಡು ರಸ್ತೆ ಸಂಚಾರ ಬಂದ್ ಮಾಡಿದ್ದಾರೆ. ಕೆಲ ಕಟ್ಟಡಗಳ ಮಾಲೀಕರು ನ್ಯಾಯಾಲಯದ ತಡೆಯಾಜ್ಞೆ ಹೆಸರಿನಲ್ಲಿ ತೆರವುಗೊಳಿಸಲು ಅಡ್ಡಿ ಪಡಿಸುತ್ತಿದ್ದಾರೆ. ಅಲ್ಲದೆ, ಕಟ್ಟಡದ ಮುಂದಿನ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳ ತೆರವುಗೊಳಿಸಿ ಬಿಸಿ ಮುಟ್ಟಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ, ಶಾಸಕರು, ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts