More

    ಅನಗತ್ಯ ಬೀದಿಗಿಳಿದರೆ ವಾಹನ ಜಪ್ತಿ

    ಬೆಳಗಾವಿ: ಲಾಕ್‌ಡೌನ್ ಮಧ್ಯೆಯೂ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿರುವವರ ವಾಹನಗಳ ತಪಾಸಣೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಶುಕ್ರವಾರ ಬೆಳಗ್ಗೆಯೇ ಸಿಬ್ಬಂದಿಯೊಂದಿಗೆ ರಾಣಿ ಚನ್ನಮ್ಮ ವೃತ್ತದಲ್ಲಿ ಕಾರ್ಯಾಚರಣೆ ಕೈಗೊಂಡ ಡಿಸಿಪಿ ಡಾ.ವಿಕ್ರಂ ಆಮ್ಟೆ, ಅನಗತ್ಯವಾಗಿ ಸಂಚರಿಸುತ್ತಿದ್ದ 57 ಜನರ ಬೈಕ್‌ಗಳನ್ನು ಜಪ್ತಿ ಮಾಡಿದರು.

    ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ 394 ಸವಾರರಿಗೆ ದಂಡ ವಿಧಿಸಿದರು. ಅಲ್ಲದೆ, ಮೂವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿದರು. ತಂದೆಯ ಗುರುತಿನ ಚೀಟಿಯೊಂದಿಗೆ ರಸ್ತೆಗಿಳಿದಿದ್ದ ವಲಯ ಅರಣ್ಯಾಧಿಕಾರಿ ಪುತ್ರನ ಬೈಕ್ ಸೀಜ್ ಮಾಡಿದರು. ಆಟೋರಿಕ್ಷಾ ಮೇಲೆ ‘ಕೋವಿಡ್ ಎಮರ್ಜೆನ್ಸಿ’ ಎಂಬ ಬೋರ್ಡ್ ಅಂಟಿಸಿಕೊಂಡಿದ್ದ ಚಾಲಕನನ್ನೂ ತರಾಟೆಗೆ ತೆಗೆದುಕೊಂಡರು.

    ಸ್ಟ್ರಾಂಗ್ ಲಾಕ್‌ಡೌನ್: ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಆಮ್ಟೆ, ಕರೊನಾ ಸೋಂಕು ತಡೆಯಲು ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದರೂ ಬಹಳ ಜನರು ಅನಗತ್ಯವಾಗಿ ಸಂಚರಿಸುತ್ತಿದ್ದಾರೆ. ಅಂತಹವರ ವಾಹನಗಳನ್ನು ಸೀಜ್ ಮಾಡಿ, ಶಿಸ್ತು ಕ್ರಮ ಜರುಗಿಸುತ್ತೇವೆ ಎಂದರು. ಅಗತ್ಯ ವಸ್ತು ಖರೀದಿಗೆ ಬೆಳಗ್ಗೆ 6ರಿಂದ 10ರ ವರೆಗೆ ಅವಕಾಶ ನೀಡಲಾಗಿದೆ. ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್ ಇದೆ. ಈ ವೇಳೆ ವಾಹನಗಳು ರಸ್ತೆಗಿಳಿದರೆ ಸೀಜ್ ಮಾಡುವ ಜತೆಗೆ ಕಠಿಣ ಕ್ರಮ ಜರುಗಿಸುತ್ತೇವೆ. ನಿಯಮ ಬಾಹಿರವಾಗಿ ಅಂಗಡಿ ತೆರೆಯುವ ಮಾಲೀಕರ ವಿರುದ್ಧ ನಿತ್ಯವೂ ಪ್ರಕರಣ ದಾಖಲಾಗುತ್ತಿವೆ. ವೀಕೆಂಡ್ ಕರ್ಫ್ಯೂ ವೇಳೆ ಬೆಳಗ್ಗೆ 10ರ ವರೆಗೆ ನ್ಯಾಯಬೆಲೆ ಅಂಗಡಿ ತೆರೆದಿರುತ್ತದೆ. ಅಲ್ಲದೆ, ಹಾಲು ಹಾಗೂ ದಿನಪತ್ರಿಕೆ ಹಾಕಲು, ಔಷಧ ಅಂಗಡಿ ತೆರೆಯಲು ಅನುಮತಿ ಇದೆ ಎಂದು ತಿಳಿಸಿದರು.

    ಮಧ್ಯವರ್ತಿಗಳ ಮೊರೆ ಹೋಗಬೇಡಿ

    ಬೆಳಗಾವಿ: ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಸರ್ಕಾರ ವಿವಿಧ ವಲಯಕ್ಕೆ ಆರ್ಥಿಕ ನೆರವು ಘೋಷಣೆ ಮಾಡಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಹೀಗಾಗಿ ಯಾರೂ ಕೂಡ ಮಧ್ಯವರ್ತಿಗಳ ಮೊರೆ ಹೋಗಬಾರದು ಎಂದು ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಅರ್ಹ ಕಾರ್ಮಿಕರಿಗೆ 3 ಸಾವಿರ ರೂ., ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನೋಂದಾಯಿತ ಮೆಕಾನಿಕ್, ಟೇಲರ್, ಅಕ್ಕಸಾಲಿಗರು, ಅಗಸರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಮನೆ ಕೆಲಸದವರು, ಹಮಾಲರು, ಭಟ್ಟಿ ಕಾರ್ಮಿಕರು, ಚಿಂದಿ ಆಯುವವರಿಗೆ ಸರ್ಕಾರದಿಂದ 2 ಸಾವಿರ ರೂ. ನೆರವು ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts