More

    ಕೆಡಿಪಿ ಸಭೆಗೆ ಬಂದು ಅಹವಾಲು ಹೇಳಿದ ನಾಗರಿಕರು

    ಕುಂದಗೋಳ: ತ್ರೈಮಾಸಿಕ ಕೆಡಿಪಿ ಸಭೆಗೆ ನಾಗರಿಕರು ಪ್ರವೇಶಿಸಿ, ತಮ್ಮ ಸಮಸ್ಯೆ ಕುರಿತು ಏರಿದ ಧ್ವನಿಯಲ್ಲಿ ಮಾತನಾಡಿ, ಮನವಿ ಸಲ್ಲಿಸಿದ ಪ್ರಸಂಗ ಪಟ್ಟಣದ ತಾಪಂ ಸಭಾಭವನದಲ್ಲಿ ಸೋಮವಾರ ಜರುಗಿತು.

    ಸಭೆ ಆರಂಭವಾದ ಕೆಲ ಹೊತ್ತಿನಲ್ಲಿ ಕರವೇ ತಾಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ ತಮ್ಮ ಕಾರ್ಯಕರ್ತರೊಂದಿಗೆ ಒಳಬಂದು, ಬರಗಾಲ ಘೋಷಿಸಿ ಎರಡ್ಮೂರು ತಿಂಗಳು ಆಗುತ್ತ ಬಂದಿದೆ. ಆದರೆ, ಇದುವರೆಗೂ ತಾಲೂಕಿನಲ್ಲಿ ಬರಗಾಲ ಕಾಮಗಾರಿ ಆರಂಭಿಸಿಲ್ಲ. ಕೂಲಿ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಬರ ಪರಿಹಾರ ಕಾಮಗಾರಿಗಳನ್ನು ಕೂಡಲೆ ಆರಂಭಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಶಾಸಕರಿಗೆ ಮನವಿ ಸಲ್ಲಿಸಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವರಿಗೂ ದಾಖಲೆಯೊಂದಿಗೆ ಸಮಸ್ಯೆ ಗಮನಕ್ಕೆ ತರುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

    ರೈತ ಮುಖಂಡ ಪರಮೇಶ್ವರ ನಾಯ್ಕರ ಅವರು ಸಭೆಗೆ ಬಂದು ಸಂಶಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಲಂಚ ತೆಗೆದುಕೊಂಡಿದ್ದಾರೆ ಎಂದು ಶಾಸಕರಿಗೆ ದೂರಿದರು. ಅಲ್ಲದೆ, ಪಶುಪತಿಹಾಳ-ಯರೇಬೂದಿಹಾಳ, ಗುಡಗೇರಿ-ಸಂಶಿ ರಸ್ತೆ ಹಾಳಾಗಿದ್ದು, ರೈತರು ಸಂಚರಿಸದಂತಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು.

    ಮಾದಿಗ ಸಮಾಜದ ಮುಖಂಡ ಈರಪ್ಪ ನಾಗಣ್ಣವರ ಮಾತನಾಡಿ, ಸಂಶಿ ಗ್ರಾಮದಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ರುದ್ರಭೂಮಿಯಲ್ಲಿ ಮಾದಿಗ ಸಮಾಜದವರಿಗೆ ಶವ ಸಂಸ್ಕಾರ ಮಾಡಲು ಅವಕಾಶ ನೀಡುತ್ತಿಲ್ಲ. ಅವಕಾಶ ಕೊಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಆಗ ಸಮಾಜ ಕಲ್ಯಾಣಾಧಿಕಾರಿ ಮೀನಾಕ್ಷಿ ಗುದಗಿ ಸಮಜಾಯಿಷಿ ನೀಡಲು ಮುಂದಾದಾಗ ತಡೆದ ಈರಪ್ಪ, ಸುಮ್ಮನೆ ಇರಿ., 6-7 ತಿಂಗಳಿಂದ ನಿಮಗೆ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ನಮ್ಮ ಸಮಾಜದವರು ಯಾರಾದರೂ ಸತ್ತರೆ ಈ ಬಾರಿ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮುಂದೆ ಶವ ಇಟ್ಟು ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.

    ಕೆಡಿಪಿ ಸಭೆಗೆ ಸಾರ್ವಜನಿಕರು ನುಗ್ಗಿದ್ದರಿಂದ ಅಭಿವೃದ್ಧಿ ವಿಷಯ, ಬರಗಾಲ ಕಾಮಗಾರಿ ಚರ್ಚೆ ಬದಲು ಶಾಸಕರು ಸಾರ್ವಜನಿಕರಿಂದ ಮನವಿಗಳನ್ನು ಪಡೆದು, ಅಹವಾಲು ಆಲಿಸಿದರು.

    ವಿವಿಧ ಇಲಾಖೆಗಳ ವರದಿ ಮಂಡನೆ

    ಹೊಸ ಪಡಿತರ ಚೀಟಿಗಾಗಿ 1581 ಅರ್ಜಿ ಬಂದಿವೆ. ಈಗಾಗಲೆ 261 ಕಾರ್ಡ್‌ಗಳು ತಿರಸ್ಕೃತಗೊಂಡಿವೆ. 604 ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ಬಸವರಾಜ ಹೊಸಮನಿ ಮಾಹಿತಿ ನೀಡಿದರು. ಆಗ ಶಾಸಕ ಎಂ.ಆರ್. ಪಾಟೀಲ, ಮಧ್ಯವರ್ತಿಗಳಿಲ್ಲದೆ ಅರ್ಹ ಫಲಾನುಭವಿಗಳಿಗೆ ಕಾರ್ಡ್ ವಿತರಿಸಬೇಕು ಎಂದು ತಾಕೀತು ಮಾಡಿದರು.
    ಅಬಕಾರಿ ಇಲಾಖೆ ವರದಿ ಮಂಡನೆ ವೇಳೆ ಬರದ್ವಾಡ ಗ್ರಾಮದ ಪಿಡಿಒ ನದಾಫ ಅವರು, ಸರ್ಕಾರಿ ಶಾಲೆಗಳ ಆವರಣದಲ್ಲಿ ಮದ್ಯ ಕುಡಿದು ಬಾಟಲಿಗಳನ್ನು ಬಿಸಾಡುತ್ತಿದ್ದಾರೆ ಎಂದು ಪ್ರಸ್ತಾಪಿಸಿದರು. ಆಗ ಶಾಸಕರು ಮಧ್ಯ ಪ್ರವೇಶಿಸಿ, ಯರಗುಪ್ಪಿ ಗ್ರಾಮದ ಶಾಲೆಗಳ ಆವರಣದಲ್ಲಿ ಮದ್ಯದ ಬಾಟಲಿಗಳು ಕಾಣುತ್ತಿವೆ. ಇದು ಪುನರಾವರ್ತನೆಯಾಗದಂತೆ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತಾಕೀತು ಮಾಡಿದರು.

    ಸಾರಿಗೆ ಸಂಸ್ಥೆಯ ಅಧಿಕಾರಿ ವೆಂಕರಡ್ಡಿ ಇಟಗಿ ಅವರು ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರಿಗೆ ಕೆಲ ಯುವಕರು ಚುಡಾಯಿಸುತ್ತಿದ್ದಾರೆ. ಕಳವು ಪ್ರಕರಣ ಹೆಚ್ಚಿದ್ದು, ಭದ್ರತೆ ಇಲ್ಲದಂತಾಗಿದೆ ಎಂದು ತಿಳಿಸಿದರು. ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು. ಸಿಸಿ ಕ್ಯಾಮರಾ ಅಳವಡಿಕೆಗೂ ಆದೇಶಿಸಿದರು. ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳದಂತೆ ಸಾರ್ವಜನಿಕರ ಸಹಕಾರದೊಂದಿಗೆ ಕೆಲಸ ಮಾಡಿ. ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಆಗದಂತೆ ಕ್ರಮ, ಬರಗಾಲ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಶಾಸಕ ಎಂ.ಆರ್. ಪಾಟೀಲ ಸೂಚಿಸಿದರು.

    ವಿವಿಧ ಇಲಾಖೆ ಅಧಿಕಾರಿಗಳು ವರದಿ ಮಂಡಿಸಿದರು. ಸಭೆಯಲ್ಲಿ ತಾಪಂ ಇಒ ಮಹೇಶ ಕುರಿಯವರ, ತಹಸೀಲ್ದಾರ್ ಅಶೋಕ ಶಿಗ್ಗಾಂವ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts