ಶಿಗ್ಗಾಂವಿ: ಪಟ್ಟಣದಲ್ಲಿ ಆಯಕಟ್ಟಿನ ಹಾಗೂ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ನಾಗರಿಕರ ಸುರಕ್ಷತೆ ಬಗ್ಗೆ ಆತಂಕ ಮೂಡಿರುವ ಜತೆಗೆ ಅಪರಾಧ ಪ್ರಕರಣ ಪತ್ತೆಗೂ ಕಷ್ಟವಾಗುತ್ತಿದೆ.
ಮೂರ್ನಾಲ್ಕು ವರ್ಷಗಳ ಹಿಂದೆ ಸ್ಥಳೀಯ ವ್ಯಾಪಾರಸ್ಥರು ಸೇರಿ ಪಟ್ಟಣದಲ್ಲಿ ತಮ್ಮ ಪ್ರದೇಶಗಳ ಸುರಕ್ಷತೆ ದೃಷ್ಟಿಯಿಂದ ವಂತಿಕೆ ರೂಪದಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿ, ಸಿಸಿ ಕ್ಯಾಮರಾಗಳನ್ನು ಪ್ರಮುಖ ವ್ಯಾಪಾರ ಮತ್ತು ಜನನಿಬಿಡ ಸ್ಥಳಗಳಾದ ಚನ್ನಮ್ಮನ ಸರ್ಕಲ್, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣದ ಹತ್ತಿರ ಅಳವಡಿಸಿದ್ದರು. ಇವುಗಳ ನಿರ್ವಹಣೆ ಜವಾಬ್ದಾರಿಯನ್ನು ಸ್ಥಳೀಯ ಪುರಸಭೆ ಮತ್ತು ಪೊಲೀಸ್ ಠಾಣೆಗೆ ವಹಿಸಲಾಗಿತ್ತು.
ಸಿಸಿ ಕ್ಯಾಮರಾ ಅಳವಡಿಸಿದ ಪ್ರಾರಂಭದ 2 – 3 ತಿಂಗಳವರೆಗೆ ನಿರ್ವಹಣೆ ಉತ್ತಮವಾಗಿತ್ತು. ನಂತರದ ದಿನಗಳಲ್ಲಿ ನಿರ್ವಹಣೆ ಇಲ್ಲದೆ ಸಿಸಿ ಕ್ಯಾಮರಾಗಳು ಕಣ್ಮುಚ್ಚಿವೆ. ಕೆಲವೆಡೆ ಕ್ಯಾಮರಾ ಜತೆಗೆ ಕೇಬಲ್‌ಗಳನ್ನೂ ಕಳ್ಳತನ ಮಾಡಲಾಗಿದೆ. ಕೆಟ್ಟು ಹೋಗಿರುವ ಸಿಸಿ ಕ್ಯಾಮರಾಗಳ ದುರಸ್ತಿಗೆ ಪೊಲೀಸ್ ಇಲಾಖೆಯಾಗಲಿ, ಪುರಸಭೆಯಾಗಲಿ ಮುಂದಾಗದಿರುವುದು ಅಚ್ಚರಿ ಮೂಡಿಸಿದೆ.
ಸುಲಲಿತ ವ್ಯಾಪಾರಕ್ಕೆ ಅನುಕೂಲ ಹಾಗೂ ದುಷ್ಕರ್ಮಿಗಳು, ಕಿಡಿಗೇಡಿಗಳ ಚಲನವಲನಗಳ ಮೇಲೆ ನಿಗಾ ಇಡಲು, ಅಪರಾಧ ಕೃತ್ಯ ತಡೆಯಲು ವ್ಯಾಪಾರಸ್ಥರು ಮಾಡಿದ್ದ ಶ್ರಮ ವ್ಯರ್ಥವಾದಂತಾಗಿದೆ. ಆಡಳಿತ ನಡೆಸುವವರ ಬೇಜವಾಬ್ದಾರಿತನ, ನಿರ್ವಹಣೆ ಕೊರತೆಯಿಂದ ಕ್ಯಾಮರಾಗಳು ಕೆಟ್ಟು ಹೋಗಿ ಪಟ್ಟಣದಲ್ಲಿ ಸರಿಯಾದ ಕಣ್ಗಾವಲು ವ್ಯವಸ್ಥೆಯೇ ಇಲ್ಲದಂತಾಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದ್ದು, ಆದಷ್ಟು ಬೇಗ ದುರಸ್ತಿ ಕಾರ್ಯ ನಡೆಸಬೇಕಿದೆ.
ಈ ಹಿಂದೆ ಅಳವಡಿಸಿರುವ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸದಿರುವುದರಿಂದ ಪಟ್ಟಣದಲ್ಲಿ ಸಭೆ ಸಮಾರಂಭ, ವಿಶೇಷ ಕಾರ್ಯಕ್ರಮಗಳಿದ್ದರೆ ಪೊಲೀಸ್ ಇಲಾಖೆ ವತಿಯಿಂದ ಖಾಸಗಿಯವರ ಮೂಲಕ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಜೋಡಿಸುವ ಮೂಲಕ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುವುದು.
ಪರಸಪ್ಪ ನಿರೋಳ್ಳಿ ಪಿಎಸ್‌ಐ ಶಿಗ್ಗಾಂವಿಪಟ್ಟಣದಲ್ಲಿ ಸುಲಲಿತ ವ್ಯಾಪಾರ ಹಾಗೂ ಅಪರಾಧ, ಕಳವು ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಲಕ್ಷಾಂತರ ರೂಪಾಯಿ ಹಣದಲ್ಲಿ ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳು ಕೆಲಸ ಮಾಡುತ್ತಿಲ್ಲ. ಹಲವು ಬಾರಿ ಪುರಸಭೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ. ಸಂಬಂಧಿಸಿದ ಅಧಿಕಾರಗಳು ತುರ್ತಾಗಿ ಸಿಸಿ ಕ್ಯಾಮರಾಗಳನ್ನು ದುರಸ್ತಿಗೊಳಿಸಿ, ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು.
ರಾಜಣ್ಣ ಸಂಶಿ ಸ್ಥಳೀಯ ಕಿರಾಣಿ ವ್ಯಾಪಾರಸ್ಥಪಟ್ಟಣದಲ್ಲಿ ಸಿಸಿ ಕ್ಯಾಮರಾಗಳನ್ನು ಹೊಸದಾಗಿ ಅಳವಡಿಸಲು ಈಗಾಗಲೇ ಪುರಸಭೆಯ 10 ಲಕ್ಷ ರೂಪಾಯಿ ಅನುದಾನದ ಪ್ರಸ್ತಾವನೆ ಪಡೆದು ಟೆಂಡರ್ ಆಗಿದೆ. ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ಪತ್ರ ಕೊಟ್ಟು ಒಂದು ವಾರದಲ್ಲಿ ಕ್ಯಾಮರಾಗಳನ್ನು ಜೋಡಿಸುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.
ಎಂ.ಕೆ. ಮುಗಳಿ ಪುರಸಭೆ ಮುಖ್ಯಾಧಿಕಾರಿ, ಶಿಗ್ಗಾಂವಿ