More

    ಅತಿಕ್ರಮಣ ಜಮೀನಿನಲ್ಲಿದ್ದ ಬಾಳೆ ಗಿಡಕ್ಕೆ ಕೊಡಲಿ ಏಟು

    ಯಲ್ಲಾಪುರ: ಅರಣ್ಯ ಹಕ್ಕು ಕಾಯ್ದೆಗೆ ವ್ಯತಿರಿಕ್ತವಾಗಿ ಹಾಗೂ ಹೈಕೋರ್ಟ್ ಆದೇಶ ಉಲ್ಲಂಘಿಸಿ ಗುಳ್ಳಾಪುರದಲ್ಲಿ ಅತಿಕ್ರಮಣ ಜಮೀನಿನ ಬಾಳೆಗಿಡಗಳನ್ನು ಕಡಿದು ದೌರ್ಜನ್ಯ ಎಸಗಿದ ಕುರಿತು ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಗುಳ್ಳಾಪುರ ಗ್ರಾಮದ ಅತಿಕ್ರಮಣದಾರ ವೃದ್ಧೆ ಈರಮ್ಮ ಆಚಾರಿ ದೂರು ನೀಡಿದ್ದು, ಅನಾದಿ ಕಾಲ ದಿಂದಲೂ ಗುಳ್ಳಾಪುರ ಗ್ರಾಮದ ಅರಣ್ಯ ಅತಿಕ್ರಮಣದಾರಳಾದ ನಾನು ಸಾಗುವಳಿ ಮಾಡುತ್ತ ಬಂದಿದ್ದೇನೆ. 1973ರಿಂದ ಪಹಣಿ ಪತ್ರಿಕೆಯಲ್ಲಿ ಅತಿಕ್ರಮಣದಾರಳೆಂದು ಉಲ್ಲೇಖವಿದ್ದು, 1980ರಿಂದ ಮನೆ ದಾಖಲೆ ಸಹ ಇದೆ.

    ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ವಿಚಾರಣೆ ಹಂತದಲ್ಲಿದೆ. ಅರಣ್ಯ ಅತಿಕ್ರಮಣದಾರರಿಗೆ ಆತಂಕ ಉಂಟು ಮಾಡಬಾರದೆಂಬ ಹೈಕೋರ್ಟ್ ಆದೇಶ ಇದ್ದಾಗಲೂ, ಗುಳ್ಳಾಪುರ ಇಡಗುಂದಿ ವಲಯಕ್ಕೆ ಸಂಬಂಧಿಸಿದ ಅರಣ್ಯ ಆಧಿಕಾರಿಗಳು ಹಾಗೂ ಸಿಬ್ಬಂದಿ ದೌರ್ಜನ್ಯವೆಸಗಿ 150ಕ್ಕಿಂತ ಹೆಚ್ಚು ಬಾಳೆ ಗಿಡಗಳನ್ನು ಕಡಿದು 10 ಸಾವಿರಕ್ಕೂ ಅಧಿಕ ಹಾನಿ ಮಾಡಿದ್ದಾರೆ. ಸಂಬಂಧಿಸಿದ ಅರಣ್ಯ ಆಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರು ಸಲ್ಲಿಸಿದ್ದಾರೆ.

    ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿರುವ ಇಡಗುಂದಿ ವಲಯ ಅರಣ್ಯಾಧಿಕಾರಿ ಪ್ರಸಾದ ಪೆಡ್ನೆಕರ್, ನಮ್ಮ ಸಿಬ್ಬಂದಿ ದೌರ್ಜನ್ಯವೆಸಗಲಿಲ್ಲ. ಈರಮ್ಮ ಆಚಾರಿ ಎನ್ನುವವರು 2-3 ಕಡೆ ಎಕರೆಗಟ್ಟಲೆ ಅತಿಕ್ರಮಣ ಮಾಡಿರುವುದರಿಂದ ಗ್ರಾಮ ಅರಣ್ಯ ಸಮಿತಿಯಲ್ಲಿ ಅವರ ಅರ್ಜಿ ತಿರಸ್ಕೃತಗೊಂಡಿದೆ. ಇಲಾಖೆಯಿಂದ ಜಿಪಿಎಸ್ ಕೂಡ ಆಗಿಲ್ಲ. ಕೆಲವು ತಿಂಗಳ ಹಿಂದೆ ಇಲ್ಲಿ ಬಾಳೆಗಿಡ ನೆಡಲಾಗಿದೆ. ನಮ್ಮ ಇಲಾಖೆಯ ಜಾಗದ ರಕ್ಷಣೆ ನಮ್ಮ ಕರ್ತವ್ಯ ಎಂದರು.

    ಎ.ರವೀಂದ್ರನಾಥ ನಾಯ್ಕ ಖಂಡನೆ: ಜಿಲ್ಲಾ ಉಸ್ತುವಾರಿ ಸಚಿವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 70 ವರ್ಷದ ಹಿರಿಯರ ಅತಿಕ್ರಮಣ ಜಮೀನಿನ ಮೇಲೆ ಅರಣ್ಯ ಸಿಬ್ಬಂದಿ ದೌರ್ಜನ್ಯ ಖಂಡನಾರ್ಹ. ಅತಿವೃಷ್ಟಿ ಮತ್ತು ಕರೊನಾ ಸಾಂಕ್ರಮಿಕ ರೋಗದ ಭಯಾನಕ ಸಮಯದಲ್ಲಿಯೇ ಅರಣ್ಯ ಇಲಾಖೆ ಸಿಬ್ವಂದಿ ಈ ರೀತಿ ಕಾನೂನು ಬಾಹಿರ ಕೃತ್ಯ ಎಸಗಿರುವುದು ಸರಿಯಲ್ಲ. ದೌರ್ಜನ್ಯದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ. ರವೀಂದ್ರನಾಥ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts