More

    ಅಡುಗೆ ಕೊಠಡಿಯಲ್ಲೇ ಪಾಠ!

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಅಡುಗೆ ಮನೆಯಲ್ಲಿ ಕೂತು ಮಕ್ಕಳ ಪಾಠ.. ಗೋದಾಮಿನಲ್ಲಿ ಊಟ. ಬಯಲೇ ಮೂತ್ರಾಲಯ.. ಅಕ್ಕಪಕ್ಕದವರು ಅವಕಾಶ ಕೊಟ್ಟರೆ ಪಾಯಿಖಾನೆ.. ಶಾಲೆ ಬೆನ್ನಿಗೆ ಕಿಂಡಿ ಅಣೆಕಟ್ಟು ಹಿನ್ನೀರು…
    ಬೈಂದೂರು ತಾಲೂಕು ಕೆರ್ಗಾಲು ನಂದನವನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಿತ್ರಣವಿದು. ಕಳೆದ ಮಳೆಗಾಲದಲ್ಲಿ ನಂದನವನ ಪ್ರಾಥಮಿಕ ಶಾಲೆಯ ಮೂರು ಕೊಠಡಿ ಕುಸಿದಿದ್ದು, ಅಂದಿನಿಂದ ವಿದ್ಯಾರ್ಥಿಗಳಿಗೆ ಬಿಸಿಯೂಟದ ಕೊಠಡಿಯೇ ತರಗತಿ. ಸಾಮಗ್ರಿಗಳನ್ನು ಇಡುತ್ತಿದ್ದ ಕೊಠಡಿ ಅಡುಗೆ ಮನೆಯಾಗಿದೆ. ಒಂದರಿಂದ ಐದನೇ ತರಗತಿವರೆಗಿನ ಮಕ್ಕಳು ಒಂದೇ ಕೊಠಡಿಯಲ್ಲಿ ಪಾಠ ಕೇಳುವ ಸ್ಥಿತಿ. ಗೋದಾಮಿನಲ್ಲಿ ಅಡುಗೆ ಕೆಲಸ ಮುಗಿಸಿ, ಸ್ಟವ್ ಆರಿಸಿದ ನಂತರ ಮಕ್ಕಳು ಅಲ್ಲಿ ಓದುವುದು ಬರೆಯುವುದು ಮಾಡುತ್ತಾರೆ. ಸ್ವಲ್ಪವೇ ಜಾಗದಲ್ಲಿ ಪಾಠ, ಶಾಲೆ ಪಕ್ಕದ ತೆಂಗಿನ ತೋಟವೇ ಆಟದ ಮೈದಾನ, ಶೌಚಕ್ಕೆ ಬಯಲು. ಶಾಲೆಯ 25 ಮಕ್ಕಳಲ್ಲಿ 10 ಹೆಮ್ಮಕ್ಕಳಿದ್ದು, ಮೂವರು ಶಿಕ್ಷಕರಿಯರಿದ್ದು, ಶೌಚಗೃಹವಿಲ್ಲದೆ ಸಂಕಷ್ಟಪಡುತ್ತಿದ್ದಾರೆ. ಶಾಲೆ ಬಿದ್ದ ನಂತರ ಶಾಲೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ಕೊಟ್ಟಿದ್ದರೂ ವ್ಯವಸ್ಥೆ ಸುಧಾರಿಸಿಲ್ಲ. ಮಲೆನಾಡು ಅಭಿವೃದ್ಧಿ ಯೋಜನೆಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಒಂದು ಕೊಠಡಿ ಮಂಜೂರಾಗಿದ್ದು, ನಿರ್ಮಿತಿ ಕೇಂದ್ರದ ಮೂಲಕ ನಿರ್ಮಾಣ ಆಗಲಿ ಎಂಬುದು ಭರವಸೆ. ಕುಸಿದ ಮೂರು ಕೊಠಡಿ ಮರು ನಿರ್ಮಾಣ ಮಾಡಿ ಶಾಲೆ ಉಳಿಸಲು ಸಹಕಾರ ನೀಡಬೇಕು ಎನ್ನುವುದು ಸ್ಥಳೀಯರ ಒತ್ತಾಯ. ಇಲ್ಲದಿದ್ದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಲ್ಲದೆ ಶಾಲೆಯೇ ಮುಚ್ಚಿಹೋಗುವ ಅಪಾಯವಿದೆ.

    ಮನವಿಗೆ ಸಿಕ್ಕಿಲ್ಲ ಸ್ಪಂದನೆ: 1914ರಲ್ಲಿ ಊರವರು ದಾನಪತ್ರದ ಮೂಲಕ ಶಾಲೆಗೆ 25 ಸೆಂಟ್ಸ್ ಬಿಟ್ಟುಕೊಟ್ಟು ಶಾಲೆ ಆರಂಭಿಸಿದರು. ನಂದನವನ, ಕರ್ಕಿಕಳಿ, ಮಡಿಕಲ್ ಪರಿಸರದ 300ಕ್ಕೂ ಅಧಿಕ ಮೀನುಗಾರಿಕಾ ವೃತ್ತಿ ಅವಲಂಬಿತ ಕುಟುಂಬದ ಮಕ್ಕಳಿಗೆ ಅಕ್ಷರ ಜ್ಞಾನ ನೀಡಲಾರಂಭಿಸಿತು. ಆರಂಭದಲ್ಲಿ ಉಪ್ಪುಂದ, ಮಡಿಕಲ್, ನಂದನವನ ಪರಿಸರದ 400ಕ್ಕೂ ಹೆಚ್ಚು ಮಕ್ಕಳಿದ್ದರು. ಇಲ್ಲಿ ಕಲಿತ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್ ಆಗಿದ್ದಷ್ಟೇ ಅಲ್ಲದೆ ವಿದೇಶದಲ್ಲಿ ಉನ್ನತ ಹುದ್ದೆ ಅಲಂಕರಿಸಿದವರೂ ಇದ್ದಾರೆ.

    ನಂದನವನ ಶಾಲೆಗೆ ಕಟ್ಟಡವಿಲ್ಲದೆ ತರಗತಿ ಕಷ್ಟವಾಗಿದೆ. ಪ್ರತಿವರ್ಷ ಶಾಲೆಯಲ್ಲಿ ಹಾಜರಾತಿ ಹೆಚ್ಚುತ್ತಿದ್ದು, ಪ್ರಸಕ್ತ ವರ್ಷ ಏಳು ಮಕ್ಕಳು ಸೇರಿದ್ದಾರೆ. ಕಟ್ಟಡ ಆಗದಿದ್ದರೆ ಶಾಲೆಗೆ ಸೇರಿಸಲು ಪಾಲಕರು ಹಿಂದೇಟು ಹಾಕಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲಿದೆ. ಶಿಕ್ಷಣ ಇಲಾಖೆ ಎಚ್ಚೆತ್ತು ಮೂರು ಕೊಠಡಿ ನಿಮಾಣ ಮಾಡಿದರೆ ಶತಮಾನ ಕಂಡ ಶಾಲೆ ಉಳಿಯುತ್ತದೆ. ಗ್ರಾಮ ಪಂಚಾಯಿತಿ ಮೋಟಾರ್ ಅಳವಡಿಸಿ, ಟ್ಯಾಂಕ್ ಮೂಲಕ ಮಕ್ಕಳಿಗೆ ನೀರು ಪೂರೈಕೆ ಮಾಡಬೇಕು.
    ವೆಂಕಟೇಶ ಪೂಜಾರಿ, ಸಂಘಟನಾ ಕಾರ‌್ಯದರ್ಶಿ, ಹಳೇ ವಿದ್ಯಾರ್ಥಿ ಸಂಘ ನಂದನವನ ಶಾಲೆ

    ಬೈಂದೂರು ಶಾಸಕರು ತಮ್ಮ ನಿಧಿಯಿಂದ ಒಂದು ಕೊಠಡಿ ಮಂಜೂರು ಮಾಡಿದ್ದು, ಮಲೆನಾಡು ಅಭಿವೃದ್ಧಿ ಅನುದಾನದಲ್ಲಿ ಕೊಠಡಿ ನಿರ್ಮಿಸಲಾಗುತ್ತದೆ. ಸದ್ಯ ಮೂರು ಕೊಠಡಿ ಕೂಡ ಅಗತ್ಯವಿದೆ. ಶೌಚಗೃಹವೂ ಆಗಬೇಕಿದೆ. ಹಳೇ ವಿದ್ಯಾರ್ಥಿ ಸಂಘ ಶಾಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಆಂಗ್ಲ ಭಾಷಾ ಶಿಕ್ಷಕಿ ನೇಮಿಸಿ ಅವರ ಸಂಬಳ ಕೂಡ ಭರಿಸುತ್ತಿದೆ. ಮಳೆಗಾಲ ಬರುವುದರೊಳಗೆ ಶಾಲಾ ಕಟ್ಟಡ ನಿರ್ಮಿಸಿಕೊಟ್ಟರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಹಾಜರಾತಿ ಮತ್ತಷ್ಟು ಹೆಚ್ಚಲಿದೆ.
    ಲಕ್ಷ್ಮಣ ಮೊಗವೀರ, ಪ್ರಧಾನ ಕಾರ‌್ಯದರ್ಶಿ, ಹಳೇ ವಿದ್ಯಾರ್ಥಿ ಸಂಘ, ನಂದನವನ ಸಕಿಪ್ರಾ ಶಾಲೆ

    ಕಳೆದ ವರ್ಷ ಭಾರಿ ಮಳೆಗೆ ಮೂರು ಕೊಠಡಿ, ಪೀಠೋಪಕರಣ ಸೇರಿದಂತೆ ಎಲ್ಲವೂ ಸಂಪೂರ್ಣ ನೆಲಸಮವಾಗಿದೆ. ಆ ಸಂದರ್ಭ ಎಲ್ಲ ಅಧಿಕಾರಿಗಳು ಜನಪ್ರತಿನಿಧಿಗಳು ಬಂದು ಹೋದರು. ಆದರೂ ಶಾಲೆಯ ಮರು ನಿರ್ಮಾಣ ಆಗಿಲ್ಲ. ಮುಂದಿನ ಮಳೆಗಾಲ ಹತ್ತಿರವಾಗುತ್ತಿದ್ದು, ಮತ್ತೆ ಭಯ ಆವರಿಸುತ್ತಿದೆ. ಕನಿಷ್ಠ 2 ತರಗತಿ ಕೋಣೆ, 1 ಆಫೀಸ್ ರೂಂ, 1 ಶೌಚಗೃಹ, ಪೀಠೋಪಕರಣಗಳ ತುರ್ತು ಅಗತ್ಯವಿದೆ.
    ಶಾರದಾ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷೆ, ನಂದನವನ ಶಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts