More

    ಅಗತ್ಯ ವಸ್ತುಗಳ ಸಾಗಾಟಕ್ಕಿಲ್ಲ ನಿರ್ಬಂಧ

    ಹಾವೇರಿ: ದಿನಸಿ, ತರಕಾರಿ ಸೇರಿ ಯಾವುದೇ ತರದ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ನಿರ್ಬಂಧವಿಲ್ಲ. ಆದರೆ, ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ನಿರ್ಬಂಧವಿದೆ. ದಿನಸಿ, ತರಕಾರಿಗಳನ್ನು ಹೊರರಾಜ್ಯ ಹಾಗೂ ಹೊರ ಜಿಲ್ಲೆಯಿಂದ ತರಿಸಿಕೊಳ್ಳಲು ಹಾಗೂ ತೆಗೆದುಕೊಂಡು ಹೋಗಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಸೋಮವಾರ ಸಂಜೆ ಜಿಲ್ಲೆಯ ವಿವಿಧ ತಾಲೂಕುಗಳ ಅಧಿಕಾರಿಗಳು ಹಾಗೂ ವರ್ತಕರೊಂದಿಗೆ ಆಹಾರ ಸಾಮಗ್ರಿ ವಿತರಣೆ ಕುರಿತು ವಿಡಿಯೋ ಕಾನ್ಪರೆನ್ಸ್ ಮೂಲಕ ವರ್ತಕರ ಸಮಸ್ಯೆ ಆಲಿಸಿದ ಅವರು, ‘ಜಿಲ್ಲೆಯಿಂದ ಹೊರಗಡೆ ಸಾಮಾಗ್ರಿಗಳ ಸಾಗಾಣಿಕೆಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಜಿಲ್ಲೆಯ ಒಳಗೆ ಅಗತ್ಯ ವಸ್ತುಗಳ ಸಾಗಾಣಿಕೆಗೆ ವಾಹನಗಳಿಗೆ ಆಯಾ ತಾಲೂಕು ತಹಸೀಲ್ದಾರ್​ಗಳಿಂದ ಪರವಾನಗಿ ಪಡೆಯಬೇಕು. ವರ್ತಕರಿಗೆ ಯಾವುದೇ ಅನಾನುಕೂಲವಾಗದಂತೆ ಕ್ರಮವಹಿಸಲಾಗುವುದು’ ಎಂದು ತಿಳಿಸಿದರು.

    ಹೆದ್ದಾರಿಯಲ್ಲಿ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಸರಕು ಸಾಗಾಣಿಕೆಗೆ ಅವಕಾಶ ಕಲ್ಪಿಸಲಾಗಿದೆ. ವಾಹನಗಳು ಸರಾಗವಾಗಿ ಸಾಗಲು ಸರ್ಕಾರ ಅನುಮತಿ ನೀಡಿದೆ. ದಾವಣಗೆರೆ, ಹುಬ್ಬಳ್ಳಿ ಸೇರಿ ಜಿಲ್ಲೆಗೆ ಅಗತ್ಯ ಸಾಮಗ್ರಿಗಳನ್ನು ತರಿಸಿಕೊಳ್ಳಬಹುದು. ದಿನಸಿಗಳ ಕೊರತೆಯಾಗದಂತೆ ದಾಸ್ತಾನಿಗೆ ಜಿಲ್ಲಾಡಳಿತ ಮುಕ್ತ ಅವಕಾಶ ಕಲ್ಪಿಸುತ್ತದೆ ಎಂದು ವರ್ತಕರಿಗೆ ತಿಳಿಸಿದರು.

    ದಿನಸಿ ಮಾರಾಟ ಮಾಡಲು ಜಿಲ್ಲಾಡಳಿತ ಯಾವುದೇ ಸಮಯ ನಿಗದಿಪಡಿಸಿಲ್ಲ. ಜನರಿಗೆ ತೊಂದರೆಯಾಗದಂತೆ ದಿನದ 24 ತಾಸು ಅಂಗಡಿಗಳನ್ನು ತೆರೆದು ಮಾರಾಟ ಮಾಡಬಹುದು. ಡೋರ್ ಟು ಡೋರ್ ಡಿಲೆವರಿಗೂ ಅವಕಾಶ ನೀಡಲಾಗುವುದು. ಗ್ರಾಹಕರು ದೂರವಾಣಿ ಕರೆ ಮಾಡಿದರೆ ಅವರ ಮನೆಗೆ ದಿನಬಳಕೆ ಸಾಮಗ್ರಿ ತಲುಪಿಸುವ ವ್ಯವಸ್ಥೆ ಕೈಗೊಂಡರೆ ಉತ್ತಮ. ಆದರೆ, ಎಂಆರ್​ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು. ಪ್ರತಿ ಕಿರಾಣಿ ಅಂಗಡಿಯ ಮುಂದೆ ಸಾಮಗ್ರಿಗಳ ದರಪಟ್ಟಿ ಪ್ರಕಟಿಸಬೇಕು’ ಎಂದು ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ. ದಿಲೀಪ್ ಶಶಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಿಕೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿರೇಂದ್ರ ಕುಂದಗೋಳ, ತಹಸೀಲ್ದಾರ್ ಶಂಕರ ಜಿ.ಎಸ್., ಉಪಸ್ಥಿತರಿದ್ದರು.

    ಕೃಷಿ ಚಟುವಟಿಕೆಗೆ ಅಡೆತಡೆಯಿಲ್ಲ: ತರಕಾರಿ ಮಾರಾಟ, ಎಲೆ, ಶುಂಠಿ ಸೇರಿ ಕೃಷಿ ಉತ್ಪನ್ನಗಳನ್ನು ಹೊರ ಜಿಲ್ಲೆಗೆ ಸಾಗಾಣಿಕೆ ಮಾಡುವುದಾದರೆ ಅವಕಾಶ ಕಲ್ಪಿಸಲಾಗುವುದು. ಕೃಷಿ ಚಟುವಟಿಕೆಗೆ ಯಾವುದೇ ಅಡೆತಡೆಯಿಲ್ಲ. ಆಹಾರ ಧಾನ್ಯಗಳಿಗೆ ಯಾವುದೇ ಕೊರತೆಯಾಗದಂತೆ ಕ್ರಮವಹಿಸಿ ಸ್ಥಳೀಯವಾಗಿ ತಾಂತ್ರಿಕ ಸಮಸ್ಯೆಗಳನ್ನು ತಹಸೀಲ್ದಾರ್ ಮಟ್ಟದಲ್ಲಿ ಬಗೆಹರಿಸಿ ಜನರಿಗೆ ಆಹಾರ, ತರಕಾರಿ, ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts