More

    ಅಕಾಲಿಕ ಮಳೆಯಿಂದ ರೈತರಿಗೆ ಆಪತ್ತು

    ಶಿರಸಿ: ಅಕಾಲಿಕ ಮಳೆಗೆ ತಾಲೂಕಿನ ವಿವಿಧೆಡೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಅಪಾರ ಹಾನಿಯುಂಟಾಗಿದೆ. ಇದರಿಂದ ರೈತರು ಚಿಂತಿತರಾಗಿದ್ದಾರೆ.

    ಕಳೆದ 3 ದಿನಗಳಿಂದ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಭತ್ತ, ಶುಂಠಿ, ಅಡಕೆ ಬೆಳೆಗಾರರು ಹೈರಾಣಾಗಿದ್ದಾರೆ. ಬನವಾಸಿ ಹೋಬಳಿಯ ಅಂಡಗಿ, ಬದನಗೋಡ, ದಾಸನಕೊಪ್ಪ, ಸಂತೊಳ್ಳಿ, ಹೆಬ್ಬತ್ತಿ ಭಾಗದಲ್ಲಿ ಭತ್ತಕ್ಕೆ ಹೆಚ್ಚಿನ ಹಾನಿಯಾಗಿದೆ. ಬಹುತೇಕ ಗದ್ದೆಗಳಲ್ಲಿ ಭತ್ತದ ಬಣವೆ ಒಟ್ಟಿದ್ದು, ಮಳೆಯಿಂದಾಗಿ ನೆನೆದುಹೋಗಿವೆ. ಒಣ ಹಾಕಿದ ಶುಂಠಿ ರಾಶಿಗಳು ಒದ್ದೆಯಾಗಿ ಹಾಳಾಗುತ್ತಿವೆ. ಮೋಡ ಕವಿದ ವಾತಾವರಣದಿಂದಾಗಿ ಫಸಲು ಒಣಗಿಸಲು ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ. ಪಶ್ಚಿಮ ಭಾಗದಲ್ಲಿ ಪ್ರಸ್ತುತ ಅಡಕೆ ಕೊಯ್ಲು ಆರಂಭವಾಗಿದ್ದು, ಬೆಳೆಗಾರರು ಮಳೆಯಿಂದ ತೊಂದರೆಗೆ ಸಿಲುಕಿದ್ದಾರೆ. ಒಣ ಹಾಕಿರುವ ಕೆಂಪಡಕೆಗೆ ಫಂಗಸ್ ಬರುತ್ತಿದ್ದು, ಡ್ರೈಯರ್ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. ಬುಧವಾರ ರಾತ್ರಿ ಸುರಿದ ಮಳೆಗೆ ಹೆಬ್ಬತ್ತಿಯ ಕೆರೆ ನೀರು ಜಮೀನುಗಳಿಗೆ ನುಗ್ಗಿದ ಪರಿಣಾಮ ಸ್ಥಳೀಯರಾದ ಆನಂದ ಗೌಡ ಎಂಬುವವರಿಗೆ ಸೇರಿದ ಗೋಟು ಅಡಕೆ ಕೊಚ್ಚಿಕೊಂಡು ಹೋಗಿದೆ. ಪ್ರಸ್ತುತ ಮಳೆಯಿಂದ ಹಾನಿಯಾದ ಬೆಳೆಗಳ ಸರ್ವೆಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಮುಂದಾಗಿದೆ.

    ಅಡಕೆ ಕೊಯ್ಲಿಗೆ ಅಡ್ಡಿ
    ಯಲ್ಲಾಪುರ:
    ತಾಲೂಕಿನಲ್ಲಿ ಕಳೆದ 3-4 ದಿನಗಳಿಂದ ಅಕಾಲಿಕ ಮಳೆ ಸುರಿಯುತ್ತಿದ್ದು, ರೈತರನ್ನು ಕಂಗೆಡಿಸಿದೆ. ಅಕಾಲಿಕ ಮಳೆಯಿಂದ ಬೆಳೆಗಳಿಗೆ ಹಾನಿ ಉಂಟಾಗುವ ಆತಂಕದಲ್ಲಿ ರೈತರಿದ್ದಾರೆ.

    ಗ್ರಾಮೀಣ ಭಾಗಗಳಲ್ಲಿ ಭತ್ತ ಹಾಗೂ ಅಡಕೆ ಕೊಯ್ಲು ಕಾರ್ಯ ಪ್ರಗತಿಯಲ್ಲಿದ್ದು, ಮಳೆ ಇದಕ್ಕೆ ಅಡ್ಡಿಯಾಗಿದೆ. ಕಿರವತ್ತಿ, ಮದನೂರು ಭಾಗದಲ್ಲಿ ಭತ್ತ ಕೊಯ್ಲು ಮಾಡಲಾಗಿದ್ದು, ಮಳೆಯಿಂದ ತೆನೆಗಳು ಉದುರುತ್ತಿವೆ. ಮಂಚಿಕೇರಿ, ಆನಗೋಡ, ದೇಹಳ್ಳಿ, ನಂದೊಳ್ಳಿ, ಮಾಗೋಡ, ಇಡಗುಂದಿ, ವಜ್ರಳ್ಳಿ ಮುಂತಾದೆಡೆ ಅಡಕೆ ಕೊಯ್ಲಿಗೆ ಹಾಗೂ ಸುಲಿಯಲು ಮಳೆ ಅಡ್ಡಿಪಡಿಸಿದ್ದು, ಒಣಗಿಸಿಟ್ಟ ಅಡಕೆ ಮಳೆಯ ನೀರಿನಲ್ಲಿ ನೆನೆದು ಹಾನಿ ಉಂಟಾಗುತ್ತಿದೆ. ಅಡಕೆ ಮಳೆಯಲ್ಲಿ ನೆನೆದು ಹಾಳಾದಲ್ಲಿ ಮಾರುಕಟ್ಟೆಯಲ್ಲಿ ದರ ಸಿಗದೇ ಇನ್ನಷ್ಟು ಸಂಕಷ್ಟ ಅನುಭವಿಸುವಂತಾಗಬಹುದೆಂಬ ಚಿಂತೆ ರೈತರನ್ನು ಕಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts