More

    ಅಂಚೆ ಕಚೇರಿಗೆ ಮತ್ತೊಮ್ಮೆ ಬೀಗ!

    ಶಿರಹಟ್ಟಿ: ಪಟ್ಟಣದ ಅಂಚೆ ಇಲಾಖೆ ಕಚೇರಿಗೆ ಮತ್ತೊಮ್ಮೆ ಬೀಗ ಜಡಿಯಲಾಗಿದ್ದು ಎಲ್ಲ ವ್ಯವಹಾರಗಳು ಸ್ಥಗಿತಗೊಂಡಿವೆ.

    ಇಂಟರ್​ನೆಟ್ ಕೈಕೊಟ್ಟಿದ್ದರಿಂದ ಅಸಹಾಯಕರಾದ ಸ್ಬಿಬಂದಿ ‘ಸಾರ್ವಜನಿಕರು ಸಹಕರಿಸಿ’ ಎಂದು ನಾಮ ಫಲಕ ನೇತು ಹಾಕಿ ಕಚೇರಿಯನ್ನೇ ಬಂದ್ ಮಾಡಿದ್ದಾರೆ. ಹೀಗಾಗಿ ಪಿಂಚಣಿ ಪಡೆಯುತ್ತಿರುವ ವೃದ್ಧರು, ವಿಧವೆಯರು ಸೇರಿದಂತೆ ಅಂಚೆ ಕಚೇರಿಯ ಸೇವೆಯನ್ನೇ ಅವಲಂಬಿಸಿದವರು ಸಮಸ್ಯೆ ಅನುಭವಿಸುವಂತಾಗಿದೆ.

    ಒಂದು ವಾರದ ಹಿಂದೆ ಕಚೇರಿಯಲ್ಲಿ ಇಂಟರ್​ನೆಟ್ ಮೋಡೆಮ್ ಸುಟ್ಟು ಹೋಗಿದೆ. ಹೀಗಾಗಿ ಕಚೇರಿಯ ದೈನಂದಿನ ಕಾರ್ಯಗಳು ಸ್ಥಗಿತಗೊಂಡಿವೆ. ಅಂಚೆ ಕಚೇರಿ ಬಿಎಸ್​ಎನ್​ಎಲ್ ಸಂಪರ್ಕ ಹೊಂದಿದೆ. ಅದು ಕಡಿತಗೊಂಡಾಗ ಪರ್ಯಾಯವಾಗಿ ಡೊಂಗಲ್ ಸರ್ವರ್ ಬಳಸಿ ಕಚೇರಿ ಕೆಲಸ ಮಾಡಲಾಗುತ್ತಿತ್ತು. ಆದರೆ, 6 ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಡೊಂಗಲ್ ಅನ್ನು ಬೇರೆ ಊರಿನ ಅಂಚೆ ಕಚೇರಿಗೆ ಸ್ಥಳಾಂತರಿಸಿದ್ದರಿಂದ ಈ ಕಚೇರಿಗೆ ಸಮಸ್ಯೆಯಾಗಿದೆ.

    ಇದೇ ಮೊದಲಲ್ಲ: ಇಂಟರ್ನೆಟ್ (ಸರ್ವರ್) ಸಮಸ್ಯೆ ಎದುರಾದಾಗ ಕಚೇರಿಗೆ ಬೀಗ ಹಾಕಿದ್ದು ಇದೇ ಮೊದಲಲ್ಲ. ಮೇ ತಿಂಗಳಲ್ಲಿ ಒಂದು ವಾರ, ಜೂನ್​ನಲ್ಲಿ 10 ದಿನ ಹಾಗೂ ಈಗ ಬೀಗ ಜಡಿದು ಒಂದು ವಾರವಾಗಿದೆ ಎನ್ನುತ್ತಾರೆ ಕಚೇರಿಯ ಪ್ರಭಾರಿ ಅಧಿಕಾರಿ.

    8 ಹಳ್ಳಿ ಶಾಖೆಗಳ ವ್ಯವಹಾರ ಸ್ಥಗಿತ: ಶಿರಹಟ್ಟಿ ಅಂಚೆ ಕಚೇರಿ ವ್ಯಾಪ್ತಿಗೆ ಬೆಳ್ಳಟ್ಟಿ, ಕಡಕೋಳ, ಮಾಚೇನಹಳ್ಳಿ, ಹರಿಪುರ, ಯಲಿಶಿರುಂಜ, ಸೊರಟೂರ, ಅತ್ತಿಕಟ್ಟಿ ಸೇರಿದಂತೆ 8 ಗ್ರಾಮಗಳ ಶಾಖೆಗಳಿವೆ. ಇವುಗಳಿಗೆ ಇಲ್ಲಿಂದಲೇ ಹಣಕಾಸು ವರ್ಗಾವಣೆ ಮಾಡಲಾಗುತ್ತದೆ. ಅದರಲ್ಲೂ ವೃದ್ಧ್ದಾಪ್ಯ, ವಿಧವಾ, ಅಂಗವಿಕಲರ ವೇತನದ ಜೊತೆಗೆ ಉಳಿತಾಯ ಯೋಜನೆ, ಮನಿ ಆರ್ಡರ್ ಹಾಗೂ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರು ಚಲನ್ ತುಂಬುವುದು ಸೇರಿ ಹತ್ತಾರು ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗಿದೆ. ಬ್ಯಾಂಕಿನಲ್ಲಿ ಹತ್ತಾರು ಸಮಸ್ಯೆಗಳಿಂದ ಬಸವಳಿದ ಜನರು ಅದರ ಸಹವಾಸ ಬೇಡ ಎಂದು ಅಂಚೆ ಕಚೇರಿಯ ಮೊರೆ ಹೋದರೆ ಇಲ್ಲಿಯೂ ಅದೇ ಪಾಡು. ಒಂದೆರಡು ದಿನಗಳಲ್ಲಿ ಸಮಸ್ಯೆ ಸರಿಹೋಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಸ್ಥಳಿಯ ಕಚೇರಿ ಪೋಸ್ಟ್ ಮಾಸ್ತರ್ ಅವರನ್ನು ಕೇಳಿದರೆ ‘ನಮ್ಮ ಬಳಿ ಏನೂ ಇಲ್ಲ. ಮೇಲಧಿಕಾರಿಗಳು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಉತ್ತರ ನೀಡುತ್ತಾರೆ.

    ಬಿಎಸ್​ಎನ್​ಎಲ್ ಇಂಟರ್ನೆಟ್ ಮೋಡೆಮ್ ಸುಟ್ಟು ಹೋದ ದಿನವೇ ಮೇಲಾಧಿಕಾರಿಗೆ ತಿಳಿಸಿ ಶೀಘ್ರವೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕೋರಲಾಗಿದೆ. ವಾರ ಕಳೆಯುತ್ತ ಬಂದರೂ ‘ವ್ಯವಸ್ಥೆ ಮಾಡಲಾಗುವುದು’ ಎಂಬ ಭರವಸೆ ಮಾತ್ರ ಸಿಗುತ್ತಿದೆ ಹೊರತು ಕೆಲಸವಾಗುತ್ತಿಲ್ಲ. ತಿಂಗಳ ಕೊನೆ ಸಮೀಪಿಸುತ್ತ ಬಂದಿದ್ದರಿಂದ ವಿಮಾ ಕಂತು, ಉಳಿತಾಯ ಖಾತೆ, ಇ-ಪೇಮೆಂಟ್ ಸರ್ವಿಸ್ ನಿಭಾಯಿಸುವುದು ಕಷ್ಟವಾಗಿದೆ.
    | ವೆಂಕಟೇಶ ಹಾತಲಗೇರಿ, ಕಚೇರಿ ಪ್ರಭಾರಿ ಅಧಿಕಾರಿ

    ಡೊಂಗಲ್ ಸರ್ವಿಸ್​ಗೆ ಬೇಕಾದ ಉಪಕರಣ ನಮ್ಮ ಬಳಿ ಇದ್ದಿದ್ದರೆ ಇಷ್ಟು ದಿನ ಬೇಕಾಗಿರಲಿಲ್ಲ. ಆದರೆ, ಸದರಿ ಉಪಕರಣ ಬೇರೆಡೆಯಿಂದ ತರಿಸುವುದರ ಜತೆಗೆ ಟೆಕ್ನಿಷಿಯನ್ ಅಗತ್ಯವಿದ್ದು, ಎಲ್ಲ ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು.
    | ಬಾಗವಾನ್, ಸಹಾಯಕ ಅಂಚೆ ಅಧೀಕ್ಷಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts