More

    ಭದ್ರಾವತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಶೂನ್ಯ: ಶಾರದಾ ಅಪ್ಪಾಜಿ

    ಭದ್ರಾವತಿ: ತಾಲೂಕಿನಲ್ಲಿ ಸರ್ಕಾರದಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರ ಮಕ್ಕಳು ಹಾಗೂ ಸಹೋದರರು ಚಾಲನೆ ನೀಡುತ್ತಿದ್ದು ಸರ್ಕಾರದ ಶಿಷ್ಟಾಚಾರ ಉಲ್ಲಂಘಿಸಲಾಗುತ್ತಿದೆ. ಇದರ ವಿರುದ್ಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಹೇಳಿದರು.
    ಸಾರ್ವಜನಿಕರ ಹಾಗೂ ಊರಿನ ಸಮಸ್ಯೆಗಳು ನೂರಾರಿವೆ. ಚುನಾವಣೆಯಲ್ಲಿ ಗೆದ್ದ ನಂತರ ಶಾಸಕ ಬಿ.ಕೆ.ಸಂಗಮೇಶ್ವರ್ ಇದುವರೆಗೂ ಯಾರ ಕಣ್ಣಿಗೂ ಕಾಣದೆ ಕಣ್ಮರೆಯಾಗಿದ್ದಾರೆ. ಶಾಸಕರು ಊರಿನಲ್ಲಿ ಇದ್ದಾರೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಮಕ್ಕಳು ರಾಜಕಾರಣ ಮಾಡಲಿ ಎಂದು ಅವರನ್ನು ಜನ ಗೆಲ್ಲಿಸಲಿಲ್ಲ. ರಾಜಕಾರಣ ಮಾಡುವ ಶಕ್ತಿ ಇದ್ದರೆ ರಾಜಕಾರಣ ಮಾಡಲಿ ಇಲ್ಲ ರಾಜೀನಾಮೆ ಕೊಟ್ಟು ತೆರಳಲಿ. ಶ್ರೀಮಂತ ಮಕ್ಕಳು ರಾಜಕಾರಣ ಮಾಡುತ್ತಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಸರ್ಕಾರದ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿಪೂಜೆ, ಉದ್ಘಾಟನೆ ಹಾಗೂ ಅಧಿಕಾರಿಗಳ ಸಭೆಯಲ್ಲಿ ಶಾಸಕರ ಸಹೋದರರು ಹಾಗೂ ಅವರ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಅವರ ಮನೆಯನ್ನೇ ತಾಲೂಕು ಕಚೇರಿ, ನಗರಸಭೆ ಕಚೇರಿಗಳನ್ನು ಒಳಗೊಂಡಂತೆ ಎಲ್ಲ ಸರ್ಕಾರಿ ಕಚೇರಿಗಳನ್ನಾಗಿಸಿಕೊಂಡಿದ್ದಾರೆ. ಅಧಿಕಾರಿಗಳನ್ನು ಮನೆಗೆ ಕರೆಸಿಕೊಂಡು ಸಭೆ ನಡೆಸುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಮನೆಗೆ ಕರೆಸಿಕೊಂಡು ವಿತರಿಸುತ್ತಿದ್ದಾರೆ. ಹೀಗೆಯೇ ಮುಂದುವರಿದಲ್ಲಿ ಶಾಸಕರು ಹಾಗೂ ತಾಲೂಕು ಅಧಿಕಾರಿಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ದೂರಿದರು.
    ಕೆಎಂಎಫ್ ಮಾಜಿ ಅಧ್ಯಕ್ಷ ಡಿ.ಆನಂದ್ ಮಾತನಾಡಿ, ಬರುವ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಶಿಮುಲ್ ಚುನಾವಣೆಯಲ್ಲಿ ನಾನು ಭಾಗಿಯಾಗಬಾರದೆಂದು ಕಾಂಗ್ರೆಸ್ ಮುಖಂಡ ಎಸ್.ಕುಮಾರ್ ವಿನಾಕಾರಣ ನನ್ನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದಾರೆ ಎಂದರು.
    ಮುಖಂಡ ರವಿಕುಮಾರ್ ಮಾತನಾಡಿ, ಜನರ ಸೇವೆ ಮಾಡುತ್ತಾರೆ ಎಂದು ನಂಬಿ ಜನರು ಸಂಗಮೇಶ್ವರ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರು. ಆದರೆ ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯದೆ ಗಾಂಜಾ ಮಾರಾಟ ಸುಗಮವಾಗಿ ಸಾಗಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದ ಜನತೆ ಕಷ್ಟದ ದಿನಗಳನ್ನು ನೋಡಬೇಕಾಗುತ್ತದೆ ಎಂದರು.
    ಜೆಡಿಎಸ್ ಅಧ್ಯಕ್ಷ ಕರುಣಾಮೂರ್ತಿ, ಮುಖಂಡರಾದ ಎಂ.ರಾಜು, ಮಧುಸೂದನ್, ಜೆ.ಪಿ.ಯೋಗೇಶ್, ಧರ್ಮೇಗೌಡ, ಭಾಗ್ಯಮ್ಮ, ರೇಖಾ ಪ್ರಕಾಶ್, ಉಮೇಶ್, ಸವಿತಾ, ಉದಯಕುಮಾರ್, ಸುಬ್ಬಣ್ಣ, ರಾಮಕೃಷ್ಣ ಇತರರಿದ್ದರು.

    ಭರವಸೆಗಳೆಲ್ಲ ಹುಸಿ
    ಬಿ.ಎಚ್.ರಸ್ತೆ ಹೊಸಸೇತುವೆ ಕಾಮಗಾರಿ ಅರ್ಧಕ್ಕೆ ನಿಂತುಹೋಗಿದೆ. ಕೋರ್ಟ್ ರಸ್ತೆ ಕಾಮಗಾರಿ ಹಾಳಾಗಿದ್ದು ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿಲ್ಲ. ಕ್ಷೇತ್ರದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 6 ತಿಂಗಳಲ್ಲಿ ಎಂಪಿಎಂ ಕಾರ್ಖಾನೆ ಪುನರಾರಂಭಿಸುವ ಭರವಸೆಯ ಮಾತುಗಳು ಹುಸಿಯಾಗಿವೆ. ಇಷ್ಟೆಲ್ಲ ಸಮಸ್ಯೆಗಳನ್ನು ಸರಿಪಡಿಸುವ ಜವಾಬ್ದಾರಿ ಹೊತ್ತಿರುವ ಶಾಸಕರು ಕ್ಷೇತ್ರದಲ್ಲೆಲ್ಲೂ ಕಾಣಿಸಿಕೊಳ್ಳದಿರುವುದು ನಿಜಕ್ಕೂ ವಿಪರ್ಯಾಸ ಎಂದು ಶಾರದಾ ಅಪ್ಪಾಜಿ ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts