More

    ಕೋಚ್ ಆಗ್ತಾರಾ ಯುವರಾಜ್; ಹೇಗಿರುತ್ತೆ ತರಬೇತಿ?

    ನವದೆಹಲಿ: ಯುವರಾಜ್ ಸಿಂಗ್ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಭಾರತ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಅವರ ಪಾತ್ರ ಪ್ರಮುಖವಾದುದು. ಲಾಕ್‌ಡೌನ್ ಸಮಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಟೀಕಾಕಾರರೂ ಆಗಿ ಮಾರ್ಪಟ್ಟಿರುವ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ಕೋಚಿಂಗ್‌ನತ್ತ ಆಸಕ್ತಿ ವಹಿಸಿದಂತಿದೆ. ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಮಾತನಾಡುವ ವೇಳೆ, ನಾನು ಕೋಚ್ ಆದರೆ ಯಾವ ರೀತಿ ತರಬೇತಿ ನೀಡುತ್ತೇನೆ ಎಂಬ ಬಗ್ಗೆ ಅವರು ಸಂಕ್ಷಿಪ್ತವಾಗಿ ವಿವರಿಸಿರುವುದೇ ಇದಕ್ಕೆ ಪುಷ್ಠಿ.

    ಕ್ರಿಕೆಟಿಗರಿಗೆ ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ತರಬೇತಿ ನೀಡಬೇಕೆಂದು ಯುವರಾಜ್ ಅಭಿಪ್ರಾಯಪಟ್ಟಿದ್ದಾರೆ. ‘ಒಂದು ವೇಳೆ ನಾನು ಕೋಚ್ ಆಗಿದ್ದರೆ, ಜಸ್‌ಪ್ರೀತ್ ಬುಮ್ರಾಗೆ ರಾತ್ರಿ 9 ಗಂಟೆಗೆ ಗುಡ್‌ನೈಟ್ ಹೇಳುತ್ತಿದ್ದೆ ಮತ್ತು ಹಾರ್ದಿಕ್ ಪಾಂಡ್ಯರನ್ನು ರಾತ್ರಿ 10 ಗಂಟೆಗೆ ಡ್ರಿಂಕ್ಸ್‌ಗೆ ಕರೆದುಕೊಂಡು ಹೋಗುತ್ತಿದ್ದೆ… ಈ ರೀತಿಯಾಗಿ ವಿಭಿನ್ನ ವ್ಯಕ್ತಿತ್ವದ ಆಟಗಾರರೊಂದಿಗೆ ನಡೆದುಕೊಳ್ಳಬೇಕಾಗುತ್ತದೆ’ ಎಂದು ಯುವರಾಜ್ ವಿವರಿಸಿದ್ದಾರೆ.

    ಇದನ್ನೂ ಓದಿ: ವಾರ್ನರ್ ಟಿಕ್‌ಟಾಕ್‌ಗೆ ಅಭಿಮಾನಿಗಳು ಫಿದಾ!

    ಪರ-ವಿರೋಧ
    ಕೋಚ್ ಆದರೆ ಹೇಗೆ ನಡೆದುಕೊಳ್ಳುತ್ತೇನೆಂಬ ಯುವಿ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದಕ್ಕಾಗಿಯೇ ಅವರೆಂದೂ ನಾಯಕರಾಗಲಿಲ್ಲ, ಮುಂದೆಂದೂ ಕೋಚ್ ಕೂಡ ಆಗುವುದಿಲ್ಲ ಎಂಬ ಟೀಕೆಗಳು ಕೇಳಿಬಂದಿವೆ. ಇನ್ನು ಕೆಲವರು ರವಿಶಾಸಿ ಈಗಾಗಲೆ ಈ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಈ ಮಾತನ್ನು ಮೊದಲಿಗೆ ಯುವಿ ತಂದೆ ಯೋಗರಾಜ್ ಸಿಂಗ್‌ಗೆ ಹೇಳಬೇಕಿತ್ತು ಎಂದಿದ್ದಾರೆ. ಯಾಕೆಂದರೆ, ಯುವಿ 14ನೇ ವಯಸ್ಸಿನವರಾಗಿದ್ದಾಗ, ಬೆಳಗ್ಗೆ ಸೂರ್ಯ ಉದಯಿಸುವುದರಿಂದ ಸಂಜೆ ಸೂರ್ಯ ಮುಳುಗುವವರೆಗೂ ಅಭ್ಯಾಸ ಮಾಡಿಸುವುದನ್ನು ನೋಡಿದಾಗ, ‘ಸೇನೆಗೆ ಸೇರಿಸಲು ತರಬೇತಿ ನೀಡುತ್ತಿದ್ದೀಯಾ?’ ಎಂದೂ ಕೆಲವರು ಪ್ರಶ್ನಿಸುತ್ತಿದ್ದರು ಎಂದಿದ್ದಾರೆ.

    ಇದನ್ನೂ ಓದಿ: ಕ್ರಿಕೆಟ್‌ನಲ್ಲೂ ಇದ್ದಾರೆ ಫೆಡರರ್, ನಡಾಲ್!

    ರಾಥೋಡ್ ಸಾಮರ್ಥ್ಯ ಪ್ರಶ್ನಿಸಿದ ಯುವಿ!
    ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರ ಕಾರ್ಯನಿರ್ವಹಣೆಯ ಸಾಮರ್ಥ್ಯದ ಬಗ್ಗೆ ಯುವರಾಜ್ ಅನುಮಾನ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದಿರುವ ರಾಥೋಡ್, ಟಿ20 ತಲೆಮಾರಿನ ಬ್ಯಾಟ್ಸ್‌ಮನ್‌ಗಳಿಗೆ ಯಾವ ರೀತಿ ಮಾರ್ಗದರ್ಶನ ನೀಡಬಲ್ಲರು ಎಂದವರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಪಂಜಾಬ್‌ನವರೇ ಆಗಿರುವ ರಾಥೋಡ್ ರಾಜ್ಯ ತಂಡದಲ್ಲಿ ತಮಗೆ ಸೀನಿಯರ್ ಆಟಗಾರ ಮತ್ತು ಸ್ನೇಹಿತರೂ ಆಗಿದ್ದಾರೆ. ಆದರೆ ಟಿ20 ಆಟಗಾರರಿಗೆ ತರಬೇತಿ ನೀಡಬಲ್ಲಷ್ಟು ಅನುಭವ ಅವರಿಗಿಲ್ಲ ಎಂದು ಯುವರಾಜ್ ಹೇಳಿದ್ದಾರೆ. ಕಳೆದ ವರ್ಷ ಸಂಜಯ್ ಬಂಗಾರ್ ಉತ್ತರಾಧಿಕಾರಿಯಾಗಿ ನೇಮಕಗೊಂಡ ರಾಥೋಡ್, 1996ರಿಂದ 1997ರ ನಡುವೆ ಭಾರತ ಪರ 6 ಟೆಸ್ಟ್ ಮತ್ತು 7 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದಾರೆ.

    ಇದನ್ನೂ ಓದಿ: ಬಿಸಿಸಿಐಗೆ 4 ಸಾವಿರ ಕೋಟಿ ರೂಪಾಯಿ ನಷ್ಟ?

    ರವಿಶಾಸಿ ಬಗ್ಗೆಯೂ ಕಿಡಿ
    ಭಾರತ ತಂಡದ ಮುಖ್ಯ ಕೋಚ್ ರವಿಶಾಸಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ 38 ವರ್ಷದ ಯುವಿ, ‘ಆಟಗಾರರಿಗೆ ಸಲಹೆಗಳನ್ನು ನೀಡುವ ಕೆಲಸವನ್ನು ರವಿಶಾಸಿ ನಿರ್ವಹಿಸುತ್ತಿದ್ದಾರೆಯೇ ಎಂಬುದು ಗೊತ್ತಿಲ್ಲ. ಮೈದಾನಕ್ಕೆ ಇಳಿದು ನಿಮ್ಮ ಸ್ವಾಭಾವಿಕ ಆಟವನ್ನು ಆಡಿ ಎಂದು ಸೆಹ್ವಾಗ್‌ರಂಥ ಆಟಗಾರರಿಗೆ ಹೇಳಿದರೆ ಯಶಸ್ಸು ಗಳಿಸಬಹುದು. ಆದರೆ ಪೂಜಾರರಂಥ ಆಟಗಾರರಿಗೆ ಅದು ಸಾಧ್ಯವಾಗದು. ಈ ಅಂಶವನ್ನು ತರಬೇತಿ ಸಿಬ್ಬಂದಿ ಅರ್ಥಮಾಡಿಕೊಳ್ಳಬೇಕಾಗಿದೆ’ ಎಂದಿದ್ದಾರೆ.

    ಪಾಂಡ್ಯ ಅತಿವೇಗದ ಅರ್ಧಶತಕ ಸಿಡಿಸಬಲ್ಲ
    ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ (12 ಎಸೆತ) ಸಿಡಿಸಿದ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿದ್ದು, ಈ ದಾಖಲೆ ಮುರಿಯಬಲ್ಲ ಸಾಮರ್ಥ್ಯ ಹಾರ್ದಿಕ್ ಪಾಂಡ್ಯಗೆ ಇದೆ ಎಂದಿದ್ದಾರೆ. ಪಾಂಡ್ಯ ಅತ್ಯುತ್ತಮ ಆಲ್ರೌಂಡರ್ ಆಗಿ ರೂಪುಗೊಳ್ಳುವ ಹಾದಿಯಲ್ಲಿದ್ದಾರೆ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ ಎಂದು ಯುವರಾಜ್ ತಿಳಿಸಿದ್ದಾರೆ.

    ಇದನ್ನೂ ಓದಿ: ಆಸೀಸ್-ಕಿವೀಸ್ ಸರಣಿಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭ?

    ನನ್ನ ಮನೆಗೆ ಕಲ್ಲೆಸೆದಿದ್ದರು
    ಶ್ರೀಲಂಕಾ ವಿರುದ್ಧದ 2014ರ ಟಿ20 ವಿಶ್ವಕಪ್ ೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ಬಳಿಕ ಯುವಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. 21 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿದ್ದ ಯುವಿಯೇ ಸೋಲಿಗೆ ಕಾರಣ ಎಂದು ದೂರಲಾಗಿತ್ತು. ಆ ವೇಳೆ ಚಂಡೀಗಢದ ತಮ್ಮ ಮನೆಗೆ ಕಲ್ಲು ಎಸೆಯಲಾಗಿತ್ತು ಎಂದು ಯುವರಾಜ್ ಬಹಿರಂಗಪಡಿಸಿದ್ದಾರೆ. ‘ೈನಲ್ ಸೋಲಿನ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳುತ್ತೇನೆ. ನನಗೆ ಆಗ ಚೆಂಡನ್ನು ಸರಿಯಾಗಿ ಬಾರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಆ ಪಂದ್ಯದಲ್ಲಿ ಲಂಕನ್ನರೂ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಇತರ ಬ್ಯಾಟ್ಸ್‌ಮನ್‌ಗಳೂ ಪರದಾಡಿದ್ದರು. ಆದರೆ ಅಭಿಮಾನಿಗಳು ಮತ್ತು ಮಾಧ್ಯಮಗಳು ನನ್ನನ್ನು ಮಾತ್ರ ವಿಲನ್ ಮಾಡಿದರು’ ಎಂದು ಬೇಸರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts