More

    ಕ್ರಿಕೆಟ್‌ಗೆ ಮರಳಲು ಸಜ್ಜಾದ ಯುವರಾಜ್, ಶ್ರೀಶಾಂತ್

    ನವದೆಹಲಿ: ನಿವೃತ್ತಿ ಹಿಂಪಡೆದಿರುವ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತು ನಿಷೇಧ ಶಿಕ್ಷೆ ಮುಗಿಸಿರುವ ವೇಗಿ ಎಸ್. ಶ್ರೀಶಾಂತ್ ದೇಶೀಯ ಕ್ರಿಕೆಟ್‌ನಲ್ಲಿ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಜನವರಿ 10ರಿಂದ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗೆ ಕ್ರಮವಾಗಿ ಪಂಜಾಬ್ ಮತ್ತು ಕೇರಳ ಪ್ರಕಟಿಸಿರುವ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಇವರಿಬ್ಬರು ಟೀಮ್ ಇಂಡಿಯಾದ ಮಾಜಿ ಆಟಗಾರರು ಸ್ಥಾನ ಪಡೆದಿದ್ದಾರೆ. ಇಬ್ಬರೂ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರೆಂಬುದು ಗಮನಾರ್ಹ.

    39 ವರ್ಷದ ಯುವರಾಜ್ ಸಿಂಗ್ 2019ರ ಜೂನ್‌ನಲ್ಲಿ ವಿದಾಯ ಘೋಷಿಸಿದ್ದರು. ಆದರೆ ಈಗ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಪುನೀತ್ ಬಾಲಿ ಮನವಿಯ ಮೇರೆಗೆ ತವರು ರಾಜ್ಯದ ಪರ ದೇಶೀಯ ಕ್ರಿಕೆಟ್‌ಗೆ ಮರಳಲು ನಿರ್ಧರಿಸಿದ್ದಾರೆ. ಅವರು ಭಾರತ ತಂಡದ ಪರ 304 ಏಕದಿನ, 40 ಟೆಸ್ಟ್ ಮತ್ತು 58 ಟಿ20 ಪಂದ್ಯ ಆಡಿದ ಅನುಭವಿಯಾಗಿದ್ದಾರೆ. ನಿವೃತ್ತಿಯ ನಂತರ ಯುವರಾಜ್ ಕೆನಡದ ಗ್ಲೋಬಲ್ ಟಿ20 ಲೀಗ್‌ನಲ್ಲಿ ಆಡಿದ್ದರು.

    ಮತ್ತೊಂದೆಡೆ, 37 ವರ್ಷದ ಶ್ರೀಶಾಂತ್ ಕೂಡ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ನಿಷೇಧ ಶಿಕ್ಷೆ ಮುಗಿಸಿ ಮರಳಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಅವರ ಮೇಲಿನ 7 ವರ್ಷಗಳ ನಿಷೇಧ ಶಿಕ್ಷೆ ಕಳೆದ ಸೆಪ್ಟೆಂಬರ್‌ನಲ್ಲಿ ಅಂತ್ಯಗೊಂಡಿತ್ತು. ಕೇರಳದ 26 ಸಂಭಾವ್ಯರಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಸ್ಥಾನ ಪಡೆದಿದ್ದಾರೆ.

    ಡಿಸೆಂಬರ್ 17ರಿಂದ ಅಲಪುಜಾದಲ್ಲಿ ನಡೆಯಲಿರುವ ಕೇರಳ ಕ್ರಿಕೆಟ್ ಸಂಸ್ಥೆಯ ಟಿ20 ಟೂರ್ನಿಯಲ್ಲೂ ಶ್ರೀಶಾಂತ್ ಆಡಲಿದ್ದಾರೆ. ಶ್ರೀಶಾಂತ್ ಮುಂದಿನ ವರ್ಷದ ಐಪಿಎಲ್ ಮತ್ತು ಟಿ20 ವಿಶ್ವಕಪ್‌ನಲ್ಲೂ ಆಡುವ ಗುರಿ ಇಟ್ಟುಕೊಂಡಿದ್ದಾರೆ.

    ಈ ಸಲ ದೇಶೀಯ ಕ್ರಿಕೆಟ್ ಋತುವಿನಲ್ಲಿ ರಣಜಿ ಟ್ರೋಫಿ ನಡೆಯುವುದು ಅನುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts