More

    ಕನ್ನಡ ಸಂಸ್ಕೃತಿ ಇಲಾಖೆಗೆ ಹೊಸ ದಿಕ್ಕು: ಯುವ ಸೌರಭ ಉದ್ಘಾಟಿಸಿ ಯೋಗೀಶ ಭಟ್ ಹೇಳಿಕೆ

    ಹೆಬ್ರಿ: ರಾಜ್ಯದಲ್ಲಿ ಕನ್ನಡ ಸಂಸ್ಕೃತಿ ಎಂಬ ಇಲಾಖೆಯೊಂದಿದೆ ಎಂಬುದು ನಾಡಿಗೆ ಹೊಸ ಯೋಚನೆ, ಯೋಜನೆಗಳ ಮೂಲಕ ಪರಿಚಯಿಸಿದವರು ಸಚಿವ ಸುನೀಲ್ ಕುಮಾರ್. ಅವರ ಯೋಚನೆಗಳು ವಿಭಿನ್ನ. ಇಲಾಖೆಯ ದಿಕ್ಕನ್ನೇ ಬದಲಿಸಿ ಜನರ ಹತ್ತಿರ ಸರ್ಕಾರವನ್ನು ತರುವ ಕೆಲಸ ಮಾಡಿದ್ದಾರೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಜವಳಿ ವರ್ತಕರ ಸಂಘದ ಅಧ್ಯಕ್ಷ ಯೋಗೀಶ ಭಟ್ ಹೇಳಿದರು.

    ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಮತ್ತು ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕಾಲೇಜಿನ ದಿ.ರಾಧಾಕೃಷ್ಣ ನಾಯಕ್ ವೇದಿಕೆಯಲ್ಲಿ ಶನಿವಾರ ಯುವ ಸೌರಭ ಯುವ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕನ್ನಡ ಸಂಸ್ಕೃತಿ ಇಲಾಖೆಯ ಹಲವು ಕಾರ್ಯಕ್ರಮಗಳನ್ನು ನಾಡಿನ ಹಬ್ಬದಂತೆ ಆಚರಿಸುವ ಮೂಲಕ ಸಚಿವ ಸುನೀಲ್ ಕುಮಾರ್ ಜನಮನ ಗೆದ್ದಿದ್ದಾರೆ. ಹೆಬ್ರಿ ಕಾಲೇಜಿನಲ್ಲಿ ಯುವ ಸೌರಭ ನಡೆಸುತ್ತಿರುವುದು ನಮ್ಮೂರಿಗೆ ಸಂದ ಗೌರವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸಾದ ರಾವ್ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲದ ವೈಷ್ಣವಿ ಬಳಗದ ಸುಗಮ ಸಂಗೀತ, ಕಾರ್ಕಳ ಶ್ರೀ ನೃತ್ಯಾಲಯದ ಅನನ್ಯ ತಂಡದ ನೃತ್ಯ, ತೆಕ್ಕಟ್ಟೆಯ ವಿನೂಷ ಭಾರದ್ವಾಜ್ ಬಳಗದ ಜಾನಪದ ಗೀತೆ, ಮಂಡ್ಯದ ಕುಂತೂರ್ ಕುಮಾರ್ ತಂಡದ ಪೂಜಾ ಕುಣಿತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವನಿಶಾ ಬಳಗದ ಮಹಿಳಾ ಡೊಳ್ಳುಕುಣಿತ ಮತ್ತು ಹೆಬ್ರಿ ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಷಿತಾ ಬಳಗದಿಂದ ಗೊಂಬೆಮನೆ ನಾಟಕ ಪ್ರದರ್ಶನ ನಡೆಯಿತು.
    ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಎಚ್.ಗುರುದಾಸ ಶೆಣೈ, ನರೇಂದ್ರ ನಾಯಕ್, ಹೆಬ್ರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್ ಮುಂತಾದವರು ಉಪಸ್ಥಿತರಿದ್ದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಉಪನ್ಯಾಸಕರಾದ ಪ್ರದೀಪ್ ಆನಂದ ಶೆಟ್ಟಿ ಸಿರಿಬೈಲ್ ನಿರೂಪಿಸಿ, ಬಾಲರಾಜ ಡಿ.ಬಿ. ವಂದಿಸಿದರು.

    ಸಚಿವ ಸುನೀಲ್ ಕುಮಾರ್ ಭೇಟಿ: ಕಾರ್ಯಕ್ರಮಕ್ಕೆ ಸಚಿವ ಸುನೀಲ್ ಕುಮಾರ್ ಭೇಟಿ ನೀಡಿ, ಕರ್ನಾಟಕದ ಸಂಸ್ಕೃತಿ, ಮೂಲ ಸಂಸ್ಕೃತಿಗಳ ಬಗ್ಗೆ ಜಾಗೃತಿ ಮೂಡಿಸಿ ಬೆಳೆಸುವ ಕಾರ್ಯದಲ್ಲಿ ಯುವಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಹೆಬ್ರಿ ಕಾಲೇಜಿನ ಶೈಕ್ಷಣಿಕ ಸಾಂಸ್ಕೃತಿಕ ಚಟುವಟಿಕೆಗೆ ಸಹಾಯ ಮಾಡುತ್ತಿರುವ ಇಲಾಖೆಗಳನ್ನು ಹಾಗೂ ಸ್ಥಳೀಯ ಗಣ್ಯರಿಗೆ ಅಭಿನಂದನೆ ಸಲ್ಲಿಸಿ, ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮಾದರಿಯಾಗಿ ಬೆಳೆಯಲಿ ಎಂದು ಹಾರೈಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts