More

    ರಾಜ್ಯಪಾಲರ ಸಮ್ಮುಖದಲ್ಲಿ ಯುವ ಜನೋತ್ಸವಕ್ಕೆ ಅದ್ದೂರಿ ಚಾಲನೆ: ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ವೇದಿಕೆ

    ನಾಗಮಂಗಲ: ಹೆಚ್ಚು ಬಾರಿ ರಾಜ್ಯಮಟ್ಟದ ಯುವಜನೋತ್ಸವ ಆಯೋಜಿಸಿದ ಹೆಗ್ಗಳಿಕೆ ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ ನಾಲ್ಕನೇ ಯುವಜನೋತ್ಸವಕ್ಕೆ ಐತಿಹಾಸಿಕ ಧಾರ್ಮಿಕ ಕೇಂದ್ರ ತಾಲೂಕಿನ ಆದಿಚುಂಚನಗಿರಿಯಲ್ಲಿ ಮಂಗಳವಾರ ಅದ್ದೂರಿ ಚಾಲನೆ ನೀಡಲಾಯಿತು.

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ ಚಂದ್​ ಗೆಹಲೋತ್​ ಸೇರಿ ಹಲವು ಗಣ್ಯರು ಪಾಲ್ಗೊಂಡರು. ರಾಜ್ಯದ ಎಲ್ಲ ಜಿಲ್ಲೆಗಳಿಂದ 860 ಯುವ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ 100 ಯುವ ಪ್ರತಿಭೆಗಳನ್ನು ಪುದುಚೇರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಆಯ್ಕೆಯಾಗಲಿದ್ದಾರೆ. ಜನಪದಗೀತೆ, ಜನಪದ ನೃತ್ಯ, ಏಕಾಂಕ ನಾಟಕ, ಶಾಸಿಯ ನೃತ್ಯ, ಶಾಸಿಯ ವಾದ್ಯ, ಶಾಸಿಯ ಗಾಯನ ಹಾಗೂ ಆಶುಭಾಷಣ ಸ್ಪರ್ಧೆಗಳು ನಡೆಯಲಿವೆ.

    ರಾಜ್ಯಪಾಲ ಥಾವರ ಚಂದ್​ ಗೆಹಲೋತ್​ ಸೇರಿದಂತೆ ಗಣ್ಯರಿಗೆ ಮಠದ ಆವರಣದಲ್ಲಿ ಪೂರ್ಣಕುಂಭ ಸ್ವಾಗತ ಕೋರಲಾಯಿತು. ನಂತರ ರಾಜ್ಯಪಾಲರು ಕಾಲಭೈರವೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚುಂಚಶ್ರೀಗಳ ಆಶೀರ್ವಾದ ಪಡೆದರು.

    ಮೆರವಣಿಗೆಗೆ ಕೊಡವ ಸಮುದಾಯದ ನೃತ್ಯ, ತೊಗಲು ಗೊಂಬೆ, ಮೂಡಲಪಾಯ ಯಕ್ಷಗಾನ, ಗಾರುಡಿಗೊಂಬೆ, ವೀರಗಾಸೆ, ಪಟದ ಕುಣಿತ, ಪೂಜಾ ಕುಣಿತ, ಡೊಳ್ಳುಕುಣಿತ, ಮತ್ತು ನಾಸಿಕ್​ ಬ್ಯಾಂಡ್​ ಕಲಾತಂಡದ ಪ್ರದರ್ಶನ ಮೆರಗು ನೀಡಿದವು.

    ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಥಾವರ ಚಂದ್​ ಗೆಹಲೋತ್​ ಅವರಿಗೆ ಮೈಸೂರು ಪೇಟಾ ತೊಡಿಸಲಾಯಿತು. ಅವರು ತಮ್ಮ ಭಾಷಣವನ್ನು ಕನ್ನಡದಲ್ಲಿಯೇ ಪ್ರಾರಂಭಿಸಿ ಮೆಚ್ಚುಗೆಗೆ ಪಾತ್ರವಾದರು. ಇದೇ ವೇಳೆ ಯುವ

    ಸಬಲೀಕರಣ ಹಾಗೂ ಕ್ರೀಡೆಗೆ ಸಂಬಂಧಿಸಿದ “ಯುವ ಸೌರಭ’ ಎಂಬ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಂಜೆ ವೇಳೆಗೆ ಸ್ಪರ್ಧೆಗೆ ಚಾಲನೆ ನೀಡಲಾಯಿತು.

    ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಕೆ.ಸಿ.ನಾರಾಯಣಗೌಡ, ವಿ.ಸುನೀಲ್​ಕುಮಾರ್​, ಶಾಸಕರಾದ ಸುರೇಶ್​ಗೌಡ, ಎಂ.ಶ್ರೀನಿವಾಸ್​, ಸರ್ಕಾರದ ಅಪರ ಕಾರ್ಯದರ್ಶಿ ಶಾಲಿನಿ ರಜನೀಶ್​, ರಾಜ್ಯ ಯುವನೀತಿ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಡಾ.ಎಚ್​.ಎನ್​.ಗೋಪಾಲಕೃಷ್ಣ ಇತರರಿದ್ದರು.

    ಜ.5ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ.

    ಯುವಕರ ದೃಷ್ಟಿಕೋನ ಬದಲಾಗದು
    ಜಗತ್ತಿನಲ್ಲಿ ನದಿಗಳ ಮಾರ್ಗ ಬದಲಾವಣೆಯಾಗಬಹುದು. ಆದರೆ ಯುವಕರ ದೃಷ್ಟಿಕೋನ ಎಂದಿಗೂ ಬದಲಾಗುವುದಿಲ್ಲ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭಾರತ ಮತ್ತೊಮ್ಮೆ ವಿಶ್ವಗುರು ಆಗಲಿದೆ. ಭಾರತ ವಿಶ್ವಗುರು ಆಗುವುದರಲ್ಲಿ ಯುವಕರ ಪಾತ್ರ ದೊಡ್ಡದು. ಈ ಹಿಂದೆ ಭಾರತ ವಿಶ್ವ ಗುರುವಾಗಿತ್ತು, ಮುಂದೆಯೂ ಆಗಲಿದೆ. ವಿವೇಕಾನಂದರ ನಂತರ ಯುವ ಸಬಲೀಕರಣವನ್ನು ರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ತುಂಬಾ ಹೆಮ್ಮೆಯ ವಿಚಾರ. ಯುವಕರನ್ನು ಸದ್ಬಳಕೆ ಮಾಡಿದರೆ ಅಭಿವೃದ್ಧಿ ಸಾಧ್ಯ.
    | ಥಾವರ ಚಂದ್​ ಗೆಹಲೋತ್​, ರಾಜ್ಯಪಾಲ

    ಮಾನವ ಸಂಪನ್ಮೂಲ ಸದ್ಬಳಕೆಯಾಗಲಿ
    ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಯುವಜನೋತ್ಸವ ನಡೆಯುತ್ತಿದೆ. ಮಾನವ ಸಂಪನ್ಮೂಲವಿದ್ದೂ ಅದನ್ನು ಉಪಯೋಗಿಸಿಕೊಳ್ಳದಿದ್ದರೆ ಆ ದೇಶ ಎಂದಿಗೂ ಪ್ರಗತಿ ಸಾಧಿಸುವುದಿಲ್ಲ. ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಬಲಿಷ್ಠ ನವಭಾರತ ನಿರ್ಮಾಣ ಮಾಡಬೇಕಿದೆ. ಕನ್ನಡಮ್ಮನ ಮಕ್ಕಳಾಗಿ ಭಾರತಮ್ಮನ ವೇದಿಕೆಯಲ್ಲಿ ಕಲಾಪ್ರದರ್ಶನ ನೀಡಲು ನೀವು ಸಜ್ಜಾಗಿದ್ದೀರಿ. ರಾಷ್ಟ್ರ ಮಟ್ಟ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಂಸತಿ ಪರಂಪರೆ ಬೆಳೆಯುವಂತಾಗಲಿ.
    | ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧ್ಯಕ್ಷರು ಆದಿಚುಂಚನಗಿರಿ ಮಹಾಸಂಸ್ಥಾನ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts