More

    ಸಚಿವರ ಪುತ್ರಿ ಸೋಗಲ್ಲಿ ಹನಿಟ್ರ್ಯಾಪ್​ ಯತ್ನ: ಟೆನಿಸ್ ಆಟಗಾರ್ತಿಯ ಖೆಡ್ಡಾದಿಂದ ಬಚಾವಾದ ಯುವ ಕಾಂಗ್ರೆಸ್ ಉಪಾಧ್ಯಕ್ಷ

     ಬೆಂಗಳೂರು: ಕೇಂದ್ರ ಸಚಿವರೊಬ್ಬರ ಪುತ್ರಿಯ ಹೆಸರು ದುರ್ಬಳಕೆ ಮಾಡಿಕೊಂಡು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷನನ್ನು ಹನಿಟ್ರ್ಯಾಪ್​ಗೆ ಕೆಡವಲು ಯತ್ನಿಸಿದ ಪ್ರಕರಣ ಈಗ ಬಯಲಾಗಿದೆ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಯತ್ನ ನಡೆದಿದೆ ಎನ್ನಲಾಗಿದೆ. ರಾಜರಾಜೇಶ್ವರಿನಗರದ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆಂಪರಾಜು ಕೊಟ್ಟ ದೂರಿನ ಮೇಲೆ ಹುಬ್ಬಳ್ಳಿ ಮೂಲದ ವೈಷ್ಣವಿ ಹಾಗೂ ಕನಕಪುರದ ಸಾತನೂರು ಮಂಜು ಎಂಬುವರ ವಿರುದ್ಧ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

    ಟೆನಿಸ್ ಆಟಗಾರ್ತಿ!: ಒಂದು ವರ್ಷದ ಹಿಂದೆ ವೈಷ್ಣವಿ ಫೇಸ್​ಬುಕ್​ ಮೂಲಕ ಕೆಂಪರಾಜು ಸ್ನೇಹ ಬೆಳೆಸಿದ್ದಳು. ‘ತಾನು ಟೆನಿಸ್ ಆಟಗಾರ್ತಿಯಾಗಿದ್ದು, ಹೊರದೇಶಗಳಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಹೋಗಬೇಕು. ತಾವು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಂದು ಗೊತ್ತಾಯಿತು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಿ’ ಎಂದು ಸಹಾಯ ಕೇಳಿ ಪರಿಚಯಿಸಿಕೊಂಡಿದ್ದಳು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಕೆಂಪರಾಜು ಹುಬ್ಬಳ್ಳಿಗೆ ತೆರಳಿದ್ದ ವೇಳೆ ವೈಷ್ಣವಿಯೂ ಜೊತೆಯಲ್ಲಿ ಪ್ರಚಾರ ಮಾಡಿದ್ದಳು. ಇದಾದ ನಂತರವೂ ಫೋನ್​ನಲ್ಲಿ ಸಂಪರ್ಕದಲ್ಲಿದ್ದಳು. ಕೆಂಪರಾಜು ಜತೆ ವೈಷ್ಣವಿ ಓಡಾಡುವುದನ್ನು ಗಮನಿಸಿದ್ದ ಕನಕಪುರದ ಸಾತನೂರು ಮಂಜು, 4 ತಿಂಗಳ ಹಿಂದೆ ವೈಷ್ಣವಿಯನ್ನು ಪರಿಚಯಿಸಿಕೊಂಡಿದ್ದ. ಕೆಂಪರಾಜುವನ್ನು ಬುಟ್ಟಿಗೆ ಹಾಕಿಕೊಂಡು, ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ಕಳುಹಿಸಬೇಕು. ಇಲ್ಲವಾದರೆ ತೊಂದರೆ ಕೊಡುತ್ತೇನೆ ಎಂದು ಬೆದರಿಸಿದ್ದ. ಇದೇ ಕಾರಣಕ್ಕೆ ವೈಷ್ಣವಿ ಟೆಲಿಗ್ರಾಮ್ ಆಪ್​ನಲ್ಲಿ ಕೇಂದ್ರ ಸಚಿವರ ಪುತ್ರಿ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಕೆಂಪರಾಜುವನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಯತ್ನಿಸಿದ್ದಳು.

    ಟೆಲಿಗ್ರಾಂನಲ್ಲಿ ಸಂದೇಶ: 3 ತಿಂಗಳ ಹಿಂದೆ ಅನಾಮಿಕ ಫೋನ್ ನಂಬರ್​ನಿಂದ ಟೆಲಿಗ್ರಾಂನಲ್ಲಿ ‘ಮೇ ಐ ನೋ, ಹೂ ಈಸ್ ದಿಸ್’ ಎಂಬ ಸಂದೇಶವನ್ನು ಕಳುಹಿಸಿದ್ದಳು. ಇದಕ್ಕೆ ತಾವು ಯಾರು? ಏನಾಯಿತು ಎಂದು ಪ್ರತಿಕ್ರಿಯಿಸಿ ಸಂದೇಶ ಕಳುಹಿಸಿದಾಗ, ‘ನಿಮ್ಮ ನಂಬರ್ ಟೆಲಿಗ್ರಾಂನಲ್ಲಿ ದೊರಕಿತು. ಅದಕ್ಕಾಗಿ ಹೆಸರನ್ನು ಕೇಳಿದೆ’ ಎಂದು ಉತ್ತರಿಸಿದ್ದಳು. ಪ್ರತಿಯಾಗಿ ಕೆಂಪರಾಜು ತನ್ನ ಪರಿಚಯ ಮಾಡಿಕೊಂಡಾಗ, ಆಕೆ, ತಾನು ಕೇಂದ್ರ ಸಚಿವರ ಪುತ್ರಿ ಎಂದು ಪರಿಚಯಿಸಿಕೊಂಡಿದ್ದಳು. ಅಲ್ಲದೆ, ಟೆಲಿಗ್ರಾಂ ಡಿಪಿಗೆ ಕೇಂದ್ರ ಸಚಿವರ ಜತೆಗಿದ್ದ ಫೋಟೋ ಹಾಕಿದ್ದಳು. ಇದಾದ ಬಳಿಕ ಕೇಂದ್ರ ಸಚಿವರ ಕುಟುಂಬದ ಫೋಟೋ ಹಾಗೂ ಪುತ್ರಿಯ ವೈಯಕ್ತಿಕ ಫೋಟೋಗಳನ್ನು ಅಪ್​ಲೋಡ್ ಮಾಡುವ ಮೂಲಕ ನಂಬಿಕೆ ಗಳಿಸಲು ಯತ್ನಿಸಿದ್ದಳು.

    ಅನುಮಾನ ಮೂಡಿತ್ತು: ಟೆಲಿಗ್ರಾಂ ಆಪ್​ನಲ್ಲಿ ಬರುತ್ತಿದ್ದ ಸಂದೇಶ ಹಾಗೂ ಫೋಟೋಗಳ ಬಗ್ಗೆ ಕೆಂಪರಾಜುಗೆ ಅನುಮಾನ ಮೂಡಿತ್ತು. ಈ ವಿಚಾರವನ್ನು ವೈಷ್ಣವಿ ಬಳಿಯೇ ವಿಚಾರಿಸಿದ್ದ. ಆಗ ವೈಷ್ಣವಿ, ‘ಹೌದು, ಇದು ಕೇಂದ್ರ ಸಚಿವರ ಪುತ್ರಿಯ ಫೋನ್ ನಂಬರ್. ಆಕೆ ನನಗೆ ಗೊತ್ತು. ಆಕೆ ಸರಿಯಿಲ್ಲ’ ಎಂದಿದ್ದಳು. ಇದಾದ ಬಳಿಕವೂ ಟೆಲಿಗ್ರಾಂನಲ್ಲಿ ಪ್ರತಿದಿನ ಸಂದೇಶಗಳು ಬರುತ್ತಿದ್ದವು. ‘ಯಶವಂತಪುರದಲ್ಲಿ ನಮ್ಮ ಮನೆ ಇದೆ. ನಾನು ಅಲ್ಲಿಗೆ ಬರುತ್ತೇನೆ, ನೀವು ಬನ್ನಿ. ಇಬ್ಬರೂ ಮಾತನಾಡೋಣ’ ಎಂದು ಸಂದೇಶ ಕಳುಹಿಸಿದ್ದಳು. ವಿಡಿಯೋ ಕರೆ ಮಾಡುವಂತೆ ಹೇಳಿದರೆ, ‘ಈ ಹಿಂದೆ ಕೆಲವರ ಜತೆ ವಿಡಿಯೋ ಕರೆಯಲ್ಲಿ ಮಾತನಾಡಿದ್ದೇನೆ. ರೆಕಾರ್ಡ್ ಇಟ್ಟುಕೊಂಡು ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ, ವಿಡಿಯೋ ಕರೆ ಮಾಡುವುದಿಲ್ಲ’ ಎಂದು ಸಬೂಬು ಹೇಳಿದ್ದಳು. ಇದಾದ ಬಳಿಕ ಕೆಂಪರಾಜು ಆಕೆಯ ನಂಬರ್ ಬ್ಲಾಕ್ ಮಾಡಿದ್ದರು.

    ತಪ್ಪೊಪ್ಪಿಕೊಂಡ ಆರೋಪಿ: ಕೆಂಪರಾಜು ಖುದ್ದು ಸಚಿವರ ಪುತ್ರಿಯ ಫೇಸ್​ಬುಕ್ ಖಾತೆಗೆ ಸಂದೇಶ ಕಳುಹಿಸಿ, ನನ್ನ ವಾಟ್ಸ್​ಆಪ್ ಮತ್ತು ಟೆಲಿಗ್ರಾಂಗೆ ಸಂದೇಶ ಕಳುಹಿಸುತ್ತಿರುವುದು ತಾವೇನಾ? ಎಂದು ವಿಚಾರಿಸಿದ್ದಾರೆ. ಆಗ ಆಕೆ, ‘ನಾನು ಯಾವುದೇ ಸಂದೇಶ ಕಳುಹಿಸಿಲ್ಲ. ನೀವು ಪೊಲೀಸರಿಗೆ ದೂರು ಕೊಡಿ ಎಂದಿದ್ದರು. ಈ ವಿಚಾರ ವೈಷ್ಣವಿ ಮುಂದೆ ಪ್ರಸ್ತಾಪಿಸಿ ಪೊಲೀಸರಿಗೆ ದೂರು ಕೊಡುವ ವಿಚಾರ ತಿಳಿಸಿದಾಗ ಆಕೆ ಇದನ್ನೆಲ್ಲ ತಾನೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

    | ಯಂಕಣ್ಣ ಸಾಗರ್

    ನಿಗೂಢವಾಗಿಯೇ ಉಳಿದ ನಟಿಯ ಜಾಲಿರೈಡ್ ಕೇಸ್: ನಟಿ ಶರ್ವಿುಳಾ ಮಾಂಡ್ರೆ ಮುಖಕ್ಕೆ ಸರ್ಜರಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts