

ಮುಜಫ್ಫರ್ಪುರ : ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ, 17 ವರ್ಷದ ಯುವಕನನ್ನು ಹುಡುಗಿಯ ಮನೆಯವರು ಥಳಿಸಿ ಸಾಯಿಸಿ, ಆತನ ಮರ್ಮಾಂಗವನ್ನು ಕತ್ತರಿಸಿ ಹಾಕಿರುವ ಭೀಕರ ಘಟನೆ ಬಿಹಾರದಿಂದ ವರದಿಯಾಗಿದೆ. ಮುಜಫ್ಫರ್ಪುರ ಜಿಲ್ಲೆಯ ರೇಪುರ ರಾಮಪುರಷಾ ಗ್ರಾಮದ ನಿವಾಸಿಯಾಗಿದ್ದ ಸೌರಭ್ ಕುಮಾರ್ ಕೊಲೆಯಾದ ದುರ್ದೈವಿ.
ಜುಲೈ 23 ರ ರಾತ್ರಿ ಸೌರಭ್ ಕುಮಾರ್ ಪಕ್ಕದ ಸೊರ್ಬರ ಗ್ರಾಮದಲ್ಲಿನ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಆಕೆಯ ಮನೆಗೆ ಹೋಗಿದ್ದ. ಸರಿರಾತ್ರಿಯಲ್ಲಿ ಮನೆಗೇ ಪ್ರವೇಶ ಮಾಡಿದ ಆತನ ಬಗ್ಗೆ ಕೋಪಗೊಂಡ ಹುಡುಗಿಯ ಮನೆಯವರು ಅವನನ್ನು ನಿರ್ದಯವಾಗಿ ಥಳಿಸಿ ಗಂಭೀರವಾಗಿ ಗಾಯಗೊಳಿಸಿದರು ಎನ್ನಲಾಗಿದೆ.
ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಆತ ಬದುಕುಳಿಯಲಿಲ್ಲ. ಕಾಂತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಶಂಕಿತ ಆರೋಪಿ ಸುಶಾಂತ್ ಪಾಂಡೆ ಎಂಬುವವನನ್ನು ಬಂಧಿಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಆತನ ಕುಟುಂಬದವರಿಗೆ ಒಪ್ಪಿಸಲಾಯಿತು.
ಈ ಘೋರ ಕೃತ್ಯದಿಂದ ನೋವುಂಡ ಮೃತನ ಕುಟುಂಬದವರು, ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದ್ದಲ್ಲದೆ, ಮೃತನ ಅಂತ್ಯಕ್ರಿಯೆಯನ್ನು ಅವರ ಮನೆಯ ಎದುರಿಗೇ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತನ ಮೂವರು ಸಂಬಂಧಿಕರು ಪೊಲೀಸರು ಬಂಧಿಸಿದ್ದಾರೆ. ಗ್ರಾಮದಲ್ಲಿ ಉಂಟಾಗಿರುವ ಉದ್ರಿಕ್ತ ಪರಿಸ್ಥಿತಿಯಿಂದಾಗಿ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. (ಏಜೆನ್ಸೀಸ್)