More

    ಯುವಪೀಳಿಗೆಗೆ ಮಣ್ಣಿನ ಮಾದರಿ ಪರಿಚಯ ಅಗತ್ಯ

    ರಾಮನಗರ: ತಾಲೂಕಿನ ಕಸಬಾ ಹೋಬಳಿ ಕೇತೋಹಳ್ಳಿಯಲ್ಲಿ ಜೈ ಜವಾನ್- ಜೈ ಕಿಸಾನ್ ಕೃಷಿ ಉತ್ಪನ್ನ ಕೇಂದ್ರದ ಪ್ರಾರಂಭೋತ್ಸವ ಮತ್ತು ಪ್ರಗತಿಪರ ರೈತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.

    ಮಣ್ಣಿನ ಮಹತ್ವದ ಬಗ್ಗೆ ಉಪನ್ಯಾಸ ನೀಡಿದ ಕೃಷಿ ತಜ್ಞ ಸಾಯಿಲ್ ವಾಸು, ಮಣ್ಣಿನಲ್ಲಿ ಸಾವಯವ, ತೇವಾಂಶ, ಜೀವಾಂಶಗಳು ನಿರಂತರವಾಗಿರುವಂತೆ ಮಾಡುವ ಅಂಶವೇ ಹೊದಿಕೆ ಅಂಶವಾಗಿದೆ. ಸಕಲ ಜೀವ ಜಗತ್ತು ನಿಂತಿರುವುದೇ ಭೂಮಿ ಎಂಬ ಶಕ್ತಿಯ ಮೇಲೆ. ಮಣ್ಣಿನ ಪದ ಬಳಕೆಯನ್ನು ವಿರುದ್ದಾರ್ಥಕವಾಗಿ ಜನರು ಬಳಸುತ್ತಾರೆ. ಮಣ್ಣಿನಲ್ಲಿ 3 ಲಕ್ಷ ವಿಧದ ಮಾದರಿಗಳಿವೆ. ಅವುಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಜತೆಗೆ ರಕ್ಷಣೆ ಮಾಡಿ, ನಾಟಿ ದೇಸಿ ಬೀಜಗಳು ಮತ್ತು ಫಲವತ್ತತೆಯ ಬಗ್ಗೆ ವ್ಯಾಮೋಹ ಮೂಡಿಸಬೇಕಿದೆ ಎಂದರು.

    ರೈತರು ಮಣ್ಣಿಗೆ ಸಾವಯವ ಗೊಬ್ಬರ ಸೇರಿಸಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ. ಎರಡು ಬೆಳೆಗಳ ನಡುವೆ ಹಸಿರು ಗೊಬ್ಬರ ಬೆಳೆದು ಉಳುಮೆ ಮಾಡಲು ಮುಂದಾಗಿ, ಆಗ ಮಣ್ಣಿನ ಫಲವತ್ತತೆ ವೃದ್ದಿಸಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

    ಮಾಗಡಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಪ್ರೀತಂ ಮಾತನಾಡಿ, ಬೇಸಾಯದ ಕ್ರಮ, ಮೇವಿನ ತಳಿ ಹೊಸ ತಾಂತ್ರಿಕತೆಯನ್ನು ತಿಳಿಸುವ ನಿಟ್ಟಿನಲ್ಲಿ ಉತ್ಪನ್ನ ಕೇಂದ್ರ ನೆರವಾಗಲಿದೆ. ರಾಜ್ಯದಲ್ಲಿ 721 ಕೃಷಿ ಕೇಂದ್ರಗಳಿದ್ದು, ಅದರ ಜತೆ ಈ ಕೇಂದ್ರವು ಸಹ ರೈತರಿಗೆ ನೆರವು ನೀಡುವ ಆಶಯ ಹೊಂದಿದೆ. ಮುಖ್ಯವಾಗಿ ರೈತರು ಸಾವಿರಾರು ವರ್ಷಗಳಿಂದ ಮಾಡುತ್ತಿರುವ ಕೃಷಿಭೂಮಿ ಫಲವತ್ತತೆ ಕಳೆದುಕೊಳ್ಳಲಿದೆ. ಹಾಗಾಗಿ ಸೂಕ್ಷ್ಮಾಣು ಜೀವಿ ವೈವಿಧ್ಯತೆ ಕಡಿಮೆಯಾಗಿ ಬೆಳೆಗಳಿಗೆ ರೋಗಗಳು ಹರಡುತ್ತವೆ. ರೈತರು ಸಮಗ್ರ ಕೃಷಿಗೆ ಮುಂದಾಗಿ ಎಂದು ಮನವಿ ಮಾಡಿದರು.

    ಎಲ್​ವಿ ಗ್ರೂಪ್ ಮಾಲೀಕ ಪರಮಶಿವಯ್ಯ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆ ಉಪ ನಿರ್ದೇಶಕ ಎಸ್. ಅಶೋಕ್, ಸಹಾಯಕ ಕೃಷಿ ಅಧಿಕಾರಿ ಡಾ. ವನಿತಾ , ಪ್ರಗತಿಪರ ರೈತರಾದ ನಿಜಪ್ಪನದೂಡ್ಡಿ ಸುಂದರೇಶ್, ಗ್ರಾಪಂ ಮಾಜಿ ಸದಸ್ಯ ಚನ್ನಪ್ಪ, ಎಸ್​ಆರ್​ಎಸ್ ರವಿಕುಮಾರ್, ಸಿದ್ದಗಂಗಯ್ಯ ಮತ್ತಿತರರು ಇದ್ದರು. ಪ್ರಗತಿಪರ ರೈತರಾದ ಮಾಯಗಾನಹಳ್ಳಿ ಕಮಲಮ್ಮ, ಮಂಜೇಶ್, ಜಯಕುಮಾರ್, ಮಹದೇವಯ್ಯ, ರಾಮಚಂದ್ರಯ್ಯ, ರೇಣುಕಾ ಪ್ರಸಾದ್ ಹಾಗೂ ಸತೀಶ್ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts