ಮದ್ವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯಕರನಿಗೆ ಬಿಸಿನೀರು ಎರಚಿ, ಬಾಟಲ್​ನಿಂದ ಹಲ್ಲೆ ಮಾಡಿ ಪ್ರೇಯಸಿ ಎಸ್ಕೇಪ್​!

Lover Hot water
Published on

ಬೆಂಗಳೂರು: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಪ್ರಿಯತಮನ ಮೇಲೆ ಬಿಸಿ ನೀರು ಎರಚಿರುವ ಘಟನೆ ನಗರದ ಚಾಮರಾಜಪೇಟೆಯಲ್ಲಿ ನಡೆದಿದೆ.

ಮೇ 25ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಲಬುರಗಿ ಮೂಲದ ಭೀಮಾಶಂಕರ ಆರ್ಯ ಎಂಬಾತನಿಗೆ ಗಾಯವವಾಗಿದೆ. ಕಲಬುರಗಿ ಜಿಲ್ಲೆ ಅಫಜಲಪುರ ಮೂಲದ ಯುವತಿಯಿಂದ ಈ ಕೃತ್ಯ ನಡೆದಿದೆ.

ಮದುವೆ ನಿಶ್ಚಯವಾಗಿತ್ತು

ಗಾಯಾಳು ಭೀಮಾಶಂಕರ ಮತ್ತು ಯುವತಿ ನಡುವೆ ಪ್ರೀತಿ ಹುಟ್ಟಿತ್ತು. ಆದರೆ, ಆರೋಪಿ ಯುವತಿಗೆ ಈ ಮೊದಲೇ ಮದುವೆಯಾಗಿದೆ ಎಂಬ ವಿಚಾರ ಗೊತ್ತಾದ ಬಳಿಕ ಆಕೆಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದ. ಈ ನಡುವೆ ಬೇರೆ ಯುವತಿಯೊಂದಿಗೆ ಭೀಮಾಶಂಕರನಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಯಾಗಿ ಮತ್ತೆ ಬೆಂಗಳೂರಿಗೆ ಬಂದಿದ್ದ.

ಮುಖಕ್ಕೆ ಬಿಸಿನೀರು

ಮೇ 25 ರಂದು ಮಾತನಾಡಬೇಕು ಎಂದು ಭೀಮಾಶಂಕರನನ್ನ ಯುವತಿ ರೂಮಿಗೆ ಕರೆದಿದ್ದಳು. ಸಂಜೆ ಏಳು ಗಂಟೆ ಸುಮಾರಿಗೆ ರೂಮಿಗೆ ಬಂದಿದ್ದನು. ಈ ವೇಳೆ ಮದುವೆಯಾದ ವಿಚಾರ ಪ್ರಸ್ತಾಪಿಸಿದ್ದ. ಇದೇ ಸಂದರ್ಭದಲ್ಲಿ ಸೈಲೆಂಟಾಗಿ ಬಿಸಿ ನೀರು ಕಾಯಿಸಿ ತಂದು ಭೀಮಾಶಂಕರನ ಮುಖಕ್ಕೆ ಎರಚಿ, ಬಿಯರ್ ಬಾಟಲ್​ನಿಂದ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾಳೆ.

ಆರೋಪಿ ಯುವತಿಗಾಗಿ ಹುಡುಕಾಟ

ತೀವ್ರ ಗಾಯಗೊಂಡ ಭೀಮಾಶಂಕರ್​ ಕಿರುಚಾಡ ತೊಡಗಿದ. ಈ ವೇಳೆ ಮನೆ ಮಾಲೀಕ ಸೈಯದ್ ಮನೆಗೆ ಆಗಮಿಸಿ ಗಾಯಾಳು ಭೀಮಾಶಂಕರ್​ನನ್ನು ವಿಕ್ಟೋರಿಯ ಅಸ್ಪತ್ರೆಗೆ ದಾಖಲಿಸಿದ. ಬಿಸಿ ನೀರು ಬಿದ್ದು ಶೇಕಡ 40 ರಿಂದ 50 ರಷ್ಟು ಗಾಯಗಳಾಗಿವೆ. ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಭೀಮಾಶಂಕರನಿಂದ ದೂರು ದಾಖಲಾಗಿದ್ದು, ಆರೋಪಿ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net