More

    ಅಡಕೆ ಮರವೇರಲು ಟ್ರೀ ಸೈಕಲ್ ತಯಾರಿಸಿದ ಚಾರ್ವಾಕದ ಯುವ ಕೃಷಿಕ

    ಪ್ರವೀಣ್‌ರಾಜ್ ಕಡಬ

    ವಾಣಿಜ್ಯ ಬೆಳೆ ಅಡಕೆ ಧಾರಣೆ ಎರುತ್ತಲೇ ಇದ್ದರೂ, ಅಡಕೆಗೆ ಔಷಧ ಬಿಡುವ, ಕೊಯ್ಯುವ ನುರಿತ ಕಾರ್ಮಿಕರ ಸಮಸ್ಯೆ ನೀಗಿಲ್ಲ.

    ದ.ಕ. ಜಿಲ್ಲೆಯ ಕಡಬ ತಾಲೂಕು ಚಾರ್ವಾಕ ಗ್ರಾಮದ ಖಂಡಿಗ (ಕಾಪಿನಕಾಡು) ಎಂಬಲ್ಲಿನ ಯುವ ಕೃಷಿಕ ಭಾಸ್ಕರ, ಮರ ಹತ್ತಲು ನೆರವಾಗುವ ‘ಟ್ರೀ ಸೈಕಲ್’ ಉಪಕರಣವನ್ನು ಆವಿಷ್ಕರಿಸುವ ಮೂಲಕ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಉಪಕರಣವನ್ನು ನಿರ್ಮಿಸಲಾಗಿದೆ. ಭಾಸ್ಕರ್ ಮೂರು ವರ್ಷಗಳ ಹಿಂದೆ ಈ ಉಪಕರಣ ತಯಾರಿಯಲ್ಲಿ ತೊಡಗಿದ್ದಾರೆ. ಮೂರು ವರ್ಷಗಳ ಕಾಲ ಹಲವು ಮಾರ್ಪಾಡು ಮತ್ತು ಲೋಪದೋಷಗಳನ್ನು ಸರಿಪಡಿಸಿ ಈ ಉಪಕರಣವನ್ನು ಎಲ್ಲ ರೀತಿಯ ಪ್ರಯೋಗಕ್ಕೆ ಒಳಪಡಿಸಿ ಯಶಸ್ವಿಯಾಗಿದ್ದಾರೆ. ತಮ್ಮ ತೋಟವಷ್ಟೇ ಅಲ್ಲ, ಇತರ ತೋಟಗಳಲ್ಲೂ ಔಷಧ ಬಿಡುವ ಮತ್ತು ಅಡಕೆ ಕೊಯ್ಯುವ ಕೆಲಸಕ್ಕೆ ಭಾಸ್ಕರ್ ಇದೇ ಉಪಕರಣ ಬಳಸುತ್ತಿದ್ದಾರೆ.

    ಕಾರ್ಯವಿಧಾನ: ಅಡಕೆ ಮರಕ್ಕೆ ಚೈನ್ ಮೂಲಕ ಲಾಕ್ ಮಾಡಿ, ಕೈ ಹಾಗೂ ಕಾಲಿನ ಮೂಲಕ ಈ ಉಪಕರಣವನ್ನು ಉಪಯೋಗಿಸಿ ಮರವನ್ನು ಸಲೀಸಾಗಿ ಹತ್ತಲಾಗುತ್ತದೆ. ಮಾನವ ಶ್ರಮವೇ ಇಲ್ಲಿ ಮುಖ್ಯ. ಇದರ ಉಪಯೋಗವನ್ನು ಅರಿತ ಹಲವು ಕೃಷಿಕರಿಗೆ ಭಾಸ್ಕರ್ ಉಪಕರಣವನ್ನು ನೀಡಿದ್ದಾರೆ. ಉಪಕರಣ ಪಡೆಯಲು ಬರುವ ಕೃಷಿಕನಿಗೆ ತಮ್ಮ ತೋಟದಲ್ಲೇ ತರಬೇತಿ ನೀಡಿದ ಬಳಿಕವೇ ಉಪಕರಣವನ್ನು ಮಾರಾಟ ಮಾಡುತ್ತಾರೆ. ಅಡಕೆ ಮರಗಳಿಗೆ ಸಲೀಸಾಗಿ ಹತ್ತಲು ಉಪಕಾರಿಯಾಗುವ ಈ ಉಪಕರಣದಿಂದ ಅಡಕೆಗೆ ಔಷಧ ಬಿಡುವ, ಅಡಕೆ ಕೊಯ್ಯಬಹುದು. ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರೂ ಈ ಉಪಕರಣವನ್ನು ಬಳಸಬಹುದಾಗಿದೆ.

    ಸಣ್ಣ ಕೃಷಿಕರಿಗೆ ವರ: ತಂದೆ, ತಾಯಿ, ಪತ್ನಿ, ಪುತ್ರನೊಂದಿಗೆ ಚಿಕ್ಕ ಸಂಸಾರದಲ್ಲಿ ವಾಸಿಸುವ ಭಾಸ್ಕರ ಅವರದು ಕೃಷಿ ಕುಟುಂಬ. ಕಾರಣಾಂತರಗಳಿಂದ ಪ್ರಾಥಮಿಕ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಭಾಸ್ಕರ್, ಮುಖ ಮಾಡಿದ್ದು ಕೃಷಿಯ ಕಡೆಗೆ. ಅಡಕೆ ತೋಟ ಹೊಂದಿರುವ ಇವರಿಗೆ ಕಾರ್ಮಿಕರ ಸಮಸ್ಯೆಯ ಅರಿವಿತ್ತು. ಸಕಾಲದಲ್ಲಿ ಔಷಧ ಬಿಡದೆ ಅಡಕೆ ಬೆಳೆ ನಾಶವಾದ ಉದಾಹರಣೆಗಳೂ ಇವೆ. ಇದರಿಂದಾಗಿ ಸಣ್ಣ ಕೃಷಿಕರಿಗೆ ಉಪಕಾರಿಯಾಗಲಿ ಎನ್ನುವ ಕಾರಣಕ್ಕೆ ಈ ಮರ ಹತ್ತುವ ಟ್ರೀ ಸೈಕಲನ್ನು ಅವರು ಸಿದ್ಧಪಡಿಸಿದ್ದಾರೆ.

    ಭಾಸ್ಕರ ಖಂಡಿಗ ಅವರ ಸಂಪರ್ಕ ಸಂಖ್ಯೆ: 9902212501

    ಮರ ಏರುವ ಈ ಉಪಕರಣವನ್ನು ಸದ್ಯ ಹಲವೆಡೆ ಬಳಕೆ ಮಾಡಲಾಗುತ್ತಿದೆ. ಸುಲಭವಾಗಿ ಮರ ಏರಬಲ್ಲ ಮತ್ತು ಅಷ್ಟೇ ಸುರಕ್ಷತೆಯನ್ನು ನೀಡಬಲ್ಲ ಕಾರಣ ಸಣ್ಣ ಕೃಷಿಕರು ತಾವೇ ಅಡಕೆಗೆ ಮದ್ದು ಬಿಡುವ ಮತ್ತು ಕೊಯ್ಯವ ಕೆಲಸ ಮಾಡಬಹುದಾಗಿದೆ. ಕಾರ್ಮಿಕರ ಕೊರತೆ ಎದುರಿಸುತ್ತಿರುವ ಅಡಕೆ ಬೆಳೆಗಾರನಿಗೆ ಈ ಉಪಕರಣ ಉಪಕಾರಿ. ಸದ್ಯಕ್ಕೆ ಅಡಕೆ ಮರ ಏರುವ ವ್ಯವಸ್ಥೆಯನ್ನು ಉಪಕರಣದಲ್ಲಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ತೆಂಗಿನ ಮರ ಏರುವಂತೆಯೂ ಅಭಿವೃದ್ಧಿಪಡಿಸಲಾಗುವುದು.
    | ಭಾಸ್ಕರ್, ಖಂಡಿಗ, ಉಪಕರಣ ತಯಾರಿಸಿದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts