More

    ಒಗ್ಗಟ್ಟಿನಿಂದ ದುಡಿದರೆ ಮತ್ತೆ ಅಧಿಕಾರ ಭಾಗ್ಯ

    ಚಿತ್ರದುರ್ಗ: ಎಸ್‌ಸಿ, ಎಸ್‌ಟಿ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಒಗ್ಗಟ್ಟಾದರೆ ರಾಜ್ಯ, ಕೇಂದ್ರದಲ್ಲಿ ಪಕ್ಷ ಮತ್ತೆ ಅಧಿಕಾರ ಹಿಡಿಯಲು ಸಾಧ್ಯ. ಈ ನಿಟ್ಟಿನಲ್ಲಿ ಜನವರಿ 8 ರಂದು ದುರ್ಗದಲ್ಲಿ ಆಯೋಜಿಸಿರುವ ಎಸ್‌ಸಿ-ಎಸ್‌ಟಿ ಏಕತಾ ಸಮಾವೇಶವನ್ನು ಯಶಸ್ವಿಗೊಳಿಸಬೇಕಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.

    ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಮಸ್ಯೆಗಳ ಪರಿಹಾರದ ಬೀಗದ ಕೈ ರಾಜ ಕೀಯ ಅಧಿಕಾರದಲ್ಲಿದ್ದು, ನಾವೆಲ್ಲರೂ ಒಂದಾಗಬೇಕು. ಸ್ವಾಭಿಮಾನ, ಅಸ್ತಿತ್ವವನ್ನು ಕಾಪಾಡಿಕೊಂಡು ರಾಜಕೀಯ ಶಕ್ತಿ ಪಡೆಯಲೆಂದೇ ಸಮಾವೇಶ ಸಂಘಟಿಸಲಾಗುತ್ತಿದೆ. ಹೈಕಮಾಂಡ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‌ರಾಂ ಹೆಸರಿನಲ್ಲಿ ಪ್ರತ್ಯೇಕ ಸಮಾವೇಶ ಆಯೋಜಿಸಲು ಹೇಳಿತ್ತು. ಅದರ ಬದಲು ಒಂದೇ ಸಮಾವೇಶ ಆಯೋಜಿಸಲು ನಿರ್ಧರಿಸಿದ್ದೇವೆ. ಇಲ್ಲಿ ಪ್ರಕಟಿಸುವ ಘೋಷಣೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದು ಹೇಳಿದರು.

    ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಈ ಸಮಾವೇಶ 2023 ರ ವಿಧಾನಸಭೆ ಹಾಗೂ 2024 ರ ಲೋಕಸಭೆ ಚುನಾವಣೆಗಳಿಗೆ ದಿಕ್ಸೂಚಿ ಆಗಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50-75 ಸಾವಿರ ಎಸ್‌ಸಿ, ಎಸ್‌ಟಿ ಸಮುದಾಯದವರಿದ್ದಾರೆ. ರಾಜ್ಯದಲ್ಲಿ ಕನಿಷ್ಠ 150 ಸೀಟು ಗೆಲ್ಲಬಹುದೆಂದು ರಾಹುಲ್‌ಗಾಂಧಿ ಹೇಳಿದ್ದಾರೆ ಎಂದರು.

    ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಮಾತನಾಡಿ, ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡದಂತೆ ನೋಡಿಕೊಳ್ಳಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ರಕ್ಷಿಸಬೇಕಿದೆ ಎಂದರು.

    ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಈ ದೇಶದ ಶೋಷಿತರು, ಬಡವರು, ಅಲ್ಪಸಂಖ್ಯಾತರಿಗೆ ಗಂಡಾಂತರ ಎದುರಾಗಲಿದೆ ಎಂದರು.
    ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಮಾತನಾಡಿ, ತೊಂದರೆಯಲ್ಲಿರುವ ನಮ್ಮ ಸಮಾಜವನ್ನು ರಕ್ಷಿಸಲು ಅಧಿಕಾರದಿಂದ ಬಿಜೆಪಿಯನ್ನು ಕಿತ್ತೊಗೆಯಬೇಕಿದೆ ಎಂದರು.

    ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಸಮಾವೇಶದ ಯಶಸ್ಸಿಗೆ ದುಡಿಯುತ್ತಿರುವ ತ್ರಿಮೂರ್ತಿಗಳ (ಪರಮೇಶ್ವರ, ಮುನಿ ಯಪ್ಪ, ಸತೀಶ್ ಜಾರಕಿಹೊಳಿ) ಕೈಗಳನ್ನು ಬಲಪಡಿಸಬೇಕಿದೆ. ಮೀಸಲಾತಿ ಉಳಿವು, ಸಂವಿಧಾನ ರಕ್ಷಣೆಗಾಗಿ ನಾವೆಲ್ಲ ಒಗ್ಗಟ್ಟಾಗಬೇಕಿದೆ ಎಂದು ಹೇಳಿದರು.

    ಮಾಜಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಮುಂಬರುವ ಚುನಾವಣೆಗಳಿಗೆ ಈ ಸಮಾವೇಶ ದಿಕ್ಸೂಚಿಯಾಗಬೇಕು ಎಂದರು.

    ಮಾಜಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ನೇರ‌್ಲಗುಂಟೆ ತಿಪ್ಪೇಸ್ವಾಮಿ, ಎ.ವಿ.ಉಮಾಪತಿ, ರಾಜೇಶ್, ರಘುಆಚಾರ್, ಮುಖಂಡರಾದ ಬಿ.ಯೋಗೇಶ್‌ಬಾಬು, ಬಸವಂತಪ್ಪ, ಸವಿತಾರಘು, ಅನಿತಾಕುಮಾರಿ, ಜಿ.ಪಲ್ಲವಿ ಮಾತನಾಡಿದರು.

    ಮಾಜಿ ಸಚಿವ ಶಿವಮೂರ್ತಿನಾಯ್ಕ, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕೆಪಿಸಿಸಿ ಎಸ್. ಟಿ.ವಿಭಾಗದ ಅಧ್ಯಕ್ಷ ಪಾಲಯ್ಯ, ಜಿಲ್ಲಾಧ್ಯಕ್ಷ ಅಂಜಿನಪ್ಪ, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಜಿಲ್ಲೆಯ ಹಾಗೂ ತುಮಕೂರು, ಶಿವಮೊಗ್ಗ ಮತ್ತಿತರ ಜಿಲ್ಲೆಗಳಿಂದ ಆಗಮಿಸಿದ್ದ ಪಕ್ಷದ ಪ್ರಮುಖರು ಇದ್ದರು.
    —-
    ಕೋಟ್
    ನಮ್ಮ ಜಿಲ್ಲೆಗೆ ಸಮಾವೇಶದ ಆತಿಥ್ಯ ದೊರೆತಿದೆ. ದುರ್ಗಕ್ಕೆ ಬರುವಂಥವರೆಲ್ಲರನ್ನೂ ಗೌರವದಿಂದ ನಡೆಸಿಕೊಳ್ಳುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸೋಣ.
    ಬಿ.ಎನ್.ಚಂದ್ರಪ್ಪ, ಮಾಜಿ ಸಂಸದ

    ಸತ್ಯ ಹೇಳಬೇಕೆಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ

    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸುಖಾಸುಮ್ಮನೆ ಜನರ ಆತಂಕಕ್ಕೆ ಕಾರಣವಾಗಬಾರದು. ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ತಿಳಿಸಬೇಕು. ಸೋಂಕು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. 2ನೇ ಅಲೆಯಲ್ಲಾದಂತೆ ಸಾವು-ನೋವುಗಳಿಗೆ ಅವಕಾಶ ಕೊಡಬಾರದು ಎಂದರು.

    ಟಿಕೆಟ್ ಹಂಚಿಕೆ ಪ್ರಕ್ರಿಯೆ ಜಾರಿ
    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿ ಜಿಲ್ಲೆಗೆ ಮುಖಂಡರನ್ನು ಕಳಿಸಿ ವರದಿ ತರಿಸಿಕೊಳ್ಳುತ್ತಿದ್ದಾರೆ. ಕೆಪಿಸಿಸಿ ಚುನಾವಣೆ ಸಮಿತಿಯಲ್ಲಿ ವರದಿಗಳನ್ನು ಚರ್ಚಿಸಿ, ಹೈಕಮಾಂಡ್‌ಗೆ ಕಳಿಸಲಾಗುವುದು. ಚುನಾವಣಾ ಆಯೋಗ ರಾಜ್ಯದಲ್ಲಿ ಏಪ್ರಿಲ್, ಮೇನಲ್ಲ್ಲಿ ವಿಧಾನಸಭೆಗೆ ಚುನಾವಣೆ ನಡೆಸಬೇಕು ಎಂದರು.

    ನಾವು ರಚಿಸಿದ್ದ ನ್ಯಾ.ನಾಗಮೋಹನ್‌ದಾಸ್ ಸಮಿತಿ ವರದಿ ಆಧರಿಸಿ ಬಿಜೆಪಿ ಎಸ್‌ಸಿ, ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಿಸಲು ಮುಂದಾಗಿದೆ. ಆದರೆ ಇದು ಸಂವಿಧಾನ 9 ನೇ ಶೆಡ್ಯೂಲ್‌ಗೆ ಸೇರಿಸದೆ ಬಿಜೆಪಿಯ ನಿರ್ಧಾರಕ್ಕೆ ಫಲ ಸಿಗದು. ಆದ್ದರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಮೀಸಲಾತಿ ಹೆಚ್ಚಿಸಲು ಬಿಜೆಪಿ ಮುಂದಾಗಲಿ. ಜನವರಿ 8 ರಂದು ದುರ್ಗದಲ್ಲಿ ನಡೆಯಲಿರುವ ಎಸ್‌ಸಿ, ಎಸ್‌ಟಿ ಏಕತಾ ಸಮಾವೇಶದಲ್ಲಿ ಪಕ್ಷದ ಮೀಸಲಾತಿ ನಿಲುವು ಪ್ರಕಟಿಸುವುದಾಗಿ ಹೇಳಿದರು.
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts