More

    ಯೋಗಿ ಪ್ರಯಾಣ ವೇಳೆ ಭದ್ರತಾ ವೈಫಲ್ಯ

    – ಹರೀಶ್ ಮೋಟುಕಾನ, ಮಂಗಳೂರು
    ಅತ್ಯುನ್ನತ ಝಡ್ ಪ್ಲಸ್ ಭದ್ರತೆ ಹೊಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾನುವಾರ ಮಂಗಳೂರಿನಿಂದ ಕಾಸರಗೋಡಿಗೆ ಜೀರೋ ಟ್ರಾಫಿಕ್‌ನಲ್ಲಿ ಸಂಚರಿಸುವ ವೇಳೆ ಭದ್ರತಾ ವೈಫಲ್ಯ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಯೋಗಿ ಆದಿತ್ಯನಾಥರು, ರಸ್ತೆ ಮಾರ್ಗವಾಗಿ ಜೀರೋ ಟ್ರಾಫಿಕ್‌ನಲ್ಲಿ ಕಾಸರಗೋಡಿಗೆ ತೆರಳಿ, ವಿಜಯ ಯಾತ್ರೆಯಲ್ಲಿ ಭಾಗವಹಿಸಿ ಸಾಯಂಕಾಲ ಮಂಗಳೂರಿಗೆ ಬಂದು, ರಾತ್ರಿ ವಿಮಾನದ ಮೂಲಕ ವಾಪಸ್ಸಾಗಿದ್ದರು. ಈ ಸಂದರ್ಭ ಭದ್ರತಾ ಲೋಪ ನಡೆದಿದೆ.

    ಮಂಗಳೂರು ವಿಮಾನ ನಿಲ್ದಾಣದಿಂದ ಎನ್‌ಎಸ್‌ಜಿ ಕಮಾಂಡೋಗಳ ಸಹಿತ ಪೊಲೀಸರ ಬಿಗು ಭದ್ರತೆಯಲ್ಲಿ ರಸ್ತೆ ಮಾರ್ಗದಲ್ಲಿ ಕಾಸರಗೋಡಿಗೆ ತೆರಳುವಾಗ ದಾರಿ ಮಧ್ಯೆ ನಗರದ ನಂತೂರು- ಪಂಪ್‌ವೆಲ್ ನಡುವೆ ಖಾಸಗಿ ಸ್ಕಾರ್ಪಿಯೋ ವಾಹನವೊಂದು ಭದ್ರತಾ ವಾಹನಗಳ ಸಾಲಿನಲ್ಲಿ ಸೇರಿಕೊಂಡಿತ್ತು. ಏಳೆಂಟು ಕಿಲೋ ಮೀಟರ್ ಸಾಗಿದರೂ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ತೊಕ್ಕೊಟ್ಟು ತಲುಪುವಾಗ ಹಿಂಬದಿಯಿಂದ ಬರುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಖಾಸಗಿ ವಾಹನ ನಡುವೆ ಸೇರಿಸುವುದು ಗಮನಕ್ಕೆ ಬಂದಿದೆ. ಬಳಿಕ ತಲಪಾಡಿಯಲ್ಲಿ ವಾಹನವನ್ನು ವಶಕ್ಕೆ ಪಡೆಯಲಾಯಿತು.

    ಜಡ್ ಪ್ಲಸ್ ಭದ್ರತೆ ಹೊಂದಿರುವ ಯೋಗಿ ಆದಿತ್ಯನಾಥರ ಭದ್ರತೆಗಾಗಿ ವಿಮಾನ ನಿಲ್ದಾಣದಿಂದ ಹಾದುಹೋಗುವ ರಸ್ತೆಯುದ್ದಕ್ಕೂ ಬೆಳಗ್ಗೆಯಿಂದಲೇ ನೂರಾರು ಪೊಲೀಸರು ರಸ್ತೆ ಬದಿ ನಿಂತಿದ್ದರು. ಯೋಗಿ ರಾತ್ರಿ ಹಿಂತಿರುಗುವ ತನಕ ಸುಮಾರು 8 ಗಂಟೆ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರು. ಪ್ರಮುಖ ವೃತ್ತಗಳಲ್ಲಿ ಐದಕ್ಕಿಂತಲೂ ಅಧಿಕ ಮಂದಿಯನ್ನು ನಿಯೋಜಿಸಲಾಗಿತ್ತು. ಆದರೂ ಸ್ಕಾರ್ಪಿಯೋ ಪೊಲೀಸರ ಕಣ್ಣು ತಪ್ಪಿಸಿ ಸಿಎಂ ಪ್ರಯಾಣಿಸುತ್ತಿದ್ದ ವಾಹನಗಳ ಸಾಲಿನೊಂದಿಗೆ ಸೇರಿಕೊಂಡಿದೆ. ಜೀರೋ ಟ್ರಾಫಿಕ್‌ನಲ್ಲಿ ವಾಹನಗಳು ಸಾಮಾನ್ಯವಾಗಿ 100 ಕಿ.ಮೀ. ವೇಗದಲ್ಲಿ ಸಂಚರಿಸುವಾಗ ಸ್ಕಾರ್ಪಿಯೋ ಸೇರಿಕೊಂಡಿರುವುದು ಅಚ್ಚರಿ ಉಂಟುಮಾಡಿದೆ.

    ದುರುದ್ದೇಶ ಇರಲಿಲ್ಲ: ತಲಪಾಡಿಯಲ್ಲಿ ಸ್ಕಾರ್ಪಿಯೋವನ್ನು ವಶಕ್ಕೆ ಪಡೆದು, ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಸ್ಕಾರ್ಪಿಯೋದಲ್ಲಿದ್ದವರು ಯಾವುದೇ ದುರುದ್ದೇಶದಿಂದ ಬಂದಿಲ್ಲ. ಮಾಹಿತಿ ಇಲ್ಲದೆ ಭದ್ರತಾ ವಾಹನಗಳ ಜತೆ ಸೇರಿಕೊಂಡಿರುವುದು ವಿಚಾರಣೆ ವೇಳೆ ಮನವರಿಕೆಯಾಗಿ ಮೋಟಾರು ವಾಹನ ನಿಯಮ ಉಲ್ಲಂಘನೆ ಕಾಯ್ದೆಯಡಿ ದಂಡ ವಿಧಿಸಿ ಬಿಡಲಾಗಿದೆ. ಸ್ಕಾರ್ಪಿಯೋದಲ್ಲಿ ಇದ್ದವರು ಕೇರಳದವರೆಂದು ಪೊಲೀಸ್ ಮೂಲಗಳು ತಿಳಿಸಿವೆ.

    ಏನಿದು ಜಡ್ ಪ್ಲಸ್?
    ಭಾರತದಲ್ಲಿ ವಿವಿಐಪಿಗಳಿಗೆ ಎಸ್‌ಪಿಜಿ, ಝಡ್ ಪ್ಲಸ್, ಝಡ್, ವೈ ಮತ್ತು ಎಕ್ಸ್ ಕೆಟಗರಿ ಎಂದು ಭದ್ರತೆ ಒದಗಿಸಲಾಗುತ್ತಿದೆ. ಎಸ್‌ಪಿಜಿ ಭದ್ರತೆ ಹಾಲಿ ಪ್ರಧಾನ ಮಂತ್ರಿಗೆ ಮೀಸಲು. ನಂತರದ ಶ್ರೇಣಿಯಲ್ಲಿ ಝಡ್ ಪ್ಲಸ್ ಇರುತ್ತದೆ. ಇದರಲ್ಲಿ 10ಕ್ಕಿಂತಲೂ ಅಧಿಕ ಶಸ್ತ್ರಸಜ್ಜಿತ ಎನ್‌ಎಸ್‌ಜಿ ಕಮಾಂಡೋಗಳ ಸಹಿತ 55 ಭದ್ರತಾ ಸಿಬ್ಬಂದಿ ಇರುತ್ತಾರೆ. ವಿವಿಐಪಿಗಳು ಹೋದಲ್ಲೆಲ್ಲ ಈ ಸಶಸ್ತ್ರ ಭದ್ರತಾ ಸಿಬ್ಬಂದಿ ಹಿಂಬಾಲಿಸುತ್ತಾರೆ. ಯಾವುದೇ ಭದ್ರತಾ ಲೋಪವಾಗದಂತೆ ಹದ್ದಿನ ಕಣ್ಣು ಇಟ್ಟಿರುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts