More

    ತಂದೆಯ ಹದಗೆಟ್ಟ ಆರೋಗ್ಯದ ನಡುವೆಯೂ ಕಾರ್ಮಿಕರ ನೆರವಿಗೆ ಧಾವಿಸಿರುವ ಯೋಗಿ ಆದಿತ್ಯನಾಥ: ವಿವಿಧ ಸಿಎಂಗಳಿಗೆ ಬರೆದಿರುವ ಪತ್ರದಲ್ಲೇನಿದೆ?

    ಉತ್ತರ ಪ್ರದೇಶ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಶ್ತ್ ಅವರ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ಪ್ರಸ್ತುತ ಅವರನ್ನು ದೆಹಲಿಯ ಏಮ್ಸ್‌ನಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿರುವ ಆನಂದ್‌ ಸಿಂಗ್‌ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ ಎಂದು ವರದಿಯಾಗಿದೆ.

    ತಂದೆಯ ಇಂಥ ಆರೋಗ್ಯ ಸ್ಥಿತಿಯ ನಡುವೆಯೂ ತಮ್ಮ ರಾಜ್ಯದ ವಲಸೆ ಕಾರ್ಮಿಕರ ನೆರವಿಗೆ ಧಾವಿಸಿರುವ ಯೋಗಿ ಆದಿತ್ಯನಾಥ ಅವರು, ಉತ್ತರ ಪ್ರದೇಶದಿಂದ ವಲಸೆ ಹೋಗಿರುವ ಕಾರ್ಮಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವಂತೆ ಮಹಾರಾಷ್ಟ್ರ ಮತ್ತು ಹರಿಯಾಣ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈ ಎಲ್ಲಾ ವೆಚ್ಚಗಳನ್ನು ತಮ್ಮ ಸರ್ಕಾರ ಭರಿಸುವುದಾಗಿ ಅವರು ಹೇಳಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಹಲವಾರು ಕಾರ್ಮಿಕರು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಸಿಲುಕಿಕೊಂಡಿದ್ದಾರೆ.

    ಆನಂದ್‌ ಸಿಂಗ್‌ ಅವರ ಆರೋಗ್ಯ ಸ್ಥಿತಿ ನಿನ್ನೆ ತೀವ್ರವಾಗಿ ಹದಗೆಟ್ಟಿತು. ಅವರನ್ನು ಡಯಾಲಿಸಿಸ್‌ಗೆ ಒಳಪಡಿಸಿದ ನಂತರ ಐಸಿಯುಗೆ ಸ್ಥಳಾಂತರಿಸಲಾಗಿದೆ. ಸದ್ಯ ಸ್ಥಿತಿ ಗಂಭೀರವಾಗಿದೆ, ಆರೋಗ್ಯ ಕ್ಷೀಣಿಸುತ್ತಿದೆ ಎನ್ನಲಾಗಿದೆ. ಈ ಹಿಂದೆಯೂ ಕೂಡ ಯೋಗಿ ಅವರ ತಂದೆಯ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು. ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದ ಅವರನ್ನು ಡೆಹ್ರಾಡೂನ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ವಾಪಸ್‌ ಬಂದ ಮೇಲೆ ಸ್ವಲ್ಪ ಸುಧಾರಿಸಿಕೊಂಡಂತೆ ಕಂಡಿದ್ದರೂ ಈಗ ಪುನಃ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

    ವರದಿಗಳ ಪ್ರಕಾರ, ಆನಂದ್ ಸಿಂಗ್ ಬಿಶ್ತ್ ಈ ಮೊದಲು ಅರಣ್ಯ ರೇಂಜರ್ ಆಗಿ ಕೆಲಸ ನಿರ್ವಹಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಕರೊನಾ ವೈರಸ್‌ ಪೀಡಿತರ ಸಂಖ್ಯೆ 1,084ಕ್ಕೆ ಏರಿದ್ದು, 17 ಮಂದಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದಿಂದ ಮಹಾರಾಷ್ಟ್ರ ಹಾಗೂ ಹರಿಯಾಣಕ್ಕೆ ವಲಸೆ ಹೋಗುವ ಕಾರ್ಮಿಕರು ಅಧಿಕವಾಗಿರುವ ಕಾರಣ, ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಯೋಗಿ ಆದಿತ್ಯನಾಥ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts