More

    ಯೋಗಾಭ್ಯಾಸಕ್ಕೆ ಹೆಚ್ಚಿದ ಒಲವು

    ಹರೀಶ್ ಮೋಟುಕಾನ ಮಂಗಳೂರು

    ಲಾಕ್‌ಡೌನ್ ಪರಿಣಾಮ ವಾಕಿಂಗ್, ಸೈಕ್ಲಿಂಗ್ ಮಾಡುವವರ ಮೇಲೂ ತಟ್ಟಿದೆ. ಎಲ್ಲವೂ ಬಂದ್ ಆದ ಕಾರಣ ಈಗ ಬಹುತೇಕ ಮಂದಿ ಯೋಗಾಭ್ಯಾಸದ ಮೊರೆ ಹೋಗಿದ್ದಾರೆ. ಯೋಗ ಶಿಕ್ಷಕರಿಗೆ ಪ್ರತಿದಿನ ಸಲಹೆ ಪಡೆಯುಲು ನೂರಾರು ಕರೆಗಳು ಬರುತ್ತಿರುವುದೇ ಇದಕ್ಕೆ ಸಾಕ್ಷಿ.

    ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯ. ಹಾಗಾಗಿ ವಾಕಿಂಗ್, ಜಿಮ್ ಮಾಡುವಲ್ಲಿಯೂ ಜನ ಸೇರುವುದರಿಂದ ಅವೆಲ್ಲವೂ ಸ್ಥಗಿತಗೊಂಡಿವೆ. ಕೆಲವರು ಮನೆಯ ಪರಿಸರದಲ್ಲಿ ವಾಕಿಂಗ್ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಇನ್ನು ಕೆಲವರು ಮನೆಯೊಳಗೆ ಸರಳ ವ್ಯಾಯಾಮ ಮಾಡುತ್ತಿದ್ದಾರೆ. ಈಗ ಯಾರೂ 25-50 ಕಿ.ಮೀ ದೂರ ಸೈಕ್ಲಿಂಗ್ ಹೋಗುತ್ತಿಲ್ಲ. ಕೆಲವರಷ್ಟೇ ಮನೆಯ ಪರಿಸರಲ್ಲೇ ಅಥವಾ ಒಳ ರಸ್ತೆಗಳಲ್ಲಿ ನಾಲ್ಕೈದು ಕಿ.ಮೀ. ಸೈಕ್ಲಿಂಗ್ ಮಾಡುತ್ತಾರೆ.
    ಪ್ರಸ್ತುತ ದೊಡ್ಡ ಸಮಸ್ಯೆಯಾಗಿರುವುದು ಜಿಮ್‌ಗೆ ಹೋಗುವವರಿಗೆ. ಮನೆಯಲ್ಲಿ ಜಿಮ್‌ಗೆ ಸಂಬಂಧಿಸಿ ಸಲಕರಣೆಗಳು ಇಲ್ಲದವರು ತಮ್ಮ ದೇಹದಾರ್ಢ್ಯತೆ ಉಳಿಸಿಕೊಳ್ಳಲು ಅಸಾಧ್ಯವಾಗಿದೆ. ಜಿಮ್ ಮಾಡುತ್ತಿದ್ದವರು ಏಕಾಏಕಿ ಸ್ಥಗಿತಗೊಳಿಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ನಗರದ ಜಿಮ್ ಸೆಂಟರ್ ಮಾಲೀಕ ಸುಮಂತ್ ಹೇಳುತ್ತಾರೆ.

    ಯೋಗಕ್ಕೆ ಹೆಚ್ಚಿದ ಆಸಕ್ತಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭ ಹೆಚ್ಚು ಸದ್ದು ಮಾಡುತ್ತಿದ್ದ ಯೋಗಕ್ಕೆ ಲಾಕ್‌ಡೌನ್ ಸಂದರ್ಭ ಬೇಡಿಕೆ ಬಂದಿದೆ. ದೈಹಿಕ ಹಾಗೂ ಮಾನಸಿಕ ಸದೃಢತೆ ಕಾಯ್ದುಕೊಳ್ಳಲು ಹಲವರು ಯೋಗಾಭ್ಯಾಸದ ಕಡೆಗೆ ಆಸಕ್ತಿ ತೋರಿಸಿದ್ದಾರೆ.
    ಉಭಯ ಜಿಲ್ಲೆಗಳಲ್ಲಿರುವ ಯೋಗ ಶಿಕ್ಷಕರಿಗೆ ಪ್ರತಿದಿನ ನೂರಾರು ಕರೆಗಳು ಬರುತ್ತಿದ್ದು, ಮಾಹಿತಿ, ಸಲಹೆ ಪಡೆಯುತ್ತಿದ್ದಾರೆ. ಹಿಂದೆ ಯೋಗಾಭ್ಯಾಸ ಮಾಡಿ ಅರ್ಧದಲ್ಲಿ ಬಿಟ್ಟವರು ಈಗ ಮತ್ತೆ ಯೋಗದತ್ತ ಒಲವು ತೋರಿಸಿ ಕರೆ ಮಾಡಿ ಸಲಹೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಅಭ್ಯಾಸ ಮಾಡುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ ಎಂದು ಯೋಗ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಲಾಕ್‌ಡೌನ್ ಜಾರಿಯಾದ ದಿನದಿಂದ ಯೋಗ ತರಗತಿ ಸ್ಥಗಿತಗೊಂಡಿದೆ. ಆನ್‌ಲೈನ್ ತರಗತಿ ಮಾಡುವಂತೆ ಬೇಡಿಕೆ ಇದೆ. ಆದರೆ ಇನ್ನೂ ಆರಂಭಿಸಿಲ್ಲ. ಅಗತ್ಯ ಇದ್ದವರಿಗೆ ಯೋಗಾಭ್ಯಾಸದ ವಿಡಿಯೋ ಕಳುಹಿಸಿ ಸಲಹೆ ನೀಡುತ್ತಿದ್ದೇನೆ. ತರಬೇತಿ ಪಡೆದ ಹೆಚ್ಚಿನ ಮಂದಿ ಯೋಗಾಭ್ಯಾಸ ಮುಂದುವರಿಸುತ್ತಿದ್ದಾರೆ.
    – ಕುಶಾಲಪ್ಪ ಗೌಡ, ಯೋಗ ಶಿಕ್ಷಕ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts