More

    ಕದ್ರಿ ದೇವಳದಲ್ಲಿ ಸೂರ್ಯ ನಮಸ್ಕಾರ

    ಮಂಗಳೂರು: ಯೋಗ ಹಾಗೂ ಸೂರ್ಯನಮಸ್ಕಾರದ ಮಹತ್ವವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ರಥಸಪ್ತಮಿ ಅಂಗವಾಗಿ ಭಾನುವಾರ ಮುಂಜಾನೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಳದ ಪ್ರಾಂಗಣದಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ ಹಮ್ಮಿಕೊಳ್ಳಲಾಯಿತು.
    ಮಂಗಳೂರಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 350ಕ್ಕೂ ಅಧಿಕ ಯೋಗಬಂಧುಗಳು ಸೂರ್ಯ ನಮಸ್ಕಾರ ಮಾಡಿದರು.

    ಸೂರ್ಯ ನಮಸ್ಕಾರ ಭಾರತೀಯ ಯೋಗ ಪದ್ಧತಿಯಲ್ಲಿ ಬರುವ ಮಹತ್ವದ ಭಾಗ. ಹಟ ಯೋಗದಲ್ಲಿ ಬರುವ ಈ ವ್ಯಾಯಾಮ 12 ವಿವಿಧ ಯೋಗಾಸನಗಳ ಒಂದು ಗುಚ್ಛ ಅಥವಾ ಸರಣಿ. ಓಂ ಮಿತ್ರಾಯ ನಮಃ, ಓಂ ರವಯೇ ನಮಃ, ಓಂ ಸೂರ್ಯಾಯ ನಮಃ ಎಂಬ ಸೂರ್ಯನ ಬೀಜ ಮಂತ್ರವನ್ನು ಉಚ್ಚರಿಸುತ್ತ ಸೂರ್ಯ ನಮಸ್ಕಾರ ಮಾಡಲಾಗುತ್ತದೆ. ಸೂರ್ಯೋದಯ ಕಾಲದಲ್ಲಿ ಮಾಡುವ ಸೂರ್ಯನಮಸ್ಕಾರದಿಂದ ದೈಹಿಕ, ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎನ್ನುತ್ತಾರೆ ಪ್ರತಿಷ್ಠಾನದ ಕಾರ್ಯದರ್ಶಿ ಧನಂಜಯ ಕೊಟ್ಟಾರಿ.

    16 ವರ್ಷಗಳಿಂದ ಪ್ರತಿಷ್ಠಾನ ನಗರದ 22 ಶಾಖೆಗಳ ಮೂಲಕ ಯೋಗಾಸನವನ್ನು ಪಸರಿಸುತ್ತಾ ಬಂದಿದೆ. 14 ವರ್ಷಗಳಿಂದ ಕದ್ರಿ ದೇವಳದ ಪ್ರಾಂಗಣದಲ್ಲಿ ರಥಸಪ್ತಮಿಯಂದು ಸಾಮೂಹಿಕ ಸೂರ್ಯ ನಮಸ್ಕಾರ ಆಯೋಜಿಸುತ್ತಿದೆ. ರಥಸಪ್ತಮಿ ಸೂರ್ಯ ದೇವರ ಜನ್ಮದಿನವಾಗಿದ್ದು ಆ ಬಳಿಕ ಸೂರ್ಯನ ಚಲನೆಯ ದಿಕ್ಕೂ ಬದಲಾಗುತ್ತದೆ. ರಥಸಪ್ತಮಿಯ ಬಳಿಕ ರಾತ್ರಿ ಕಡಿಮೆಯಾಗಿ ಹಗಲು ಜಾಸ್ತಿಯಾಗುತ್ತದೆ, ಇದೊಂದು ಪ್ರಮುಖ ಘಟ್ಟವಾದ್ದರಿಂದ ಸೂರ್ಯನಮಸ್ಕಾರಕ್ಕೆ ಮಹತ್ವ ಇದೆ ಎಂದು ಅವರು ವಿವರಿಸುತ್ತಾರೆ.
    ಸೂರ್ಯ ನಮಸ್ಕಾರದಲ್ಲಿ ಮಹಿಳೆಯರು, ವೃದ್ಧರು, ಮಕ್ಕಳೂ ಭಾಗವಹಿಸಿದ್ದರೆ, ದೂರದ ಮುಂಬೈ, ಶಿವಮೊಗ್ಗದಿಂದಲೂ ಯೋಗಬಂಧುಗಳು ಆಗಮಿಸಿದ್ದು ವಿಶೇಷವಾಗಿತ್ತು.

    ಸೂರ್ಯ ನಮಸ್ಕಾರ ಬಳಿಕ ನಡೆದ ಸಮಾರಂಭದಲ್ಲಿ ಮಂಗಳೂರು ವಿವಿ ಯೋಗವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೃಷ್ಣ ಶರ್ಮ, ಮನೋರೋಗ ತಜ್ಞ ಡಾ.ರವೀಶ್ ತುಂಗ, ಸ್ಥಳೀಯ ಕಾರ್ಪೊರೇಟರ್ ಮನೋಹರ ಶೆಟ್ಟಿ ಶುಭ ಹಾರೈಸಿದರು. ಪ್ರತಿಷ್ಠಾನದ ಅಧ್ಯಕ್ಷ ಏಕನಾಥ ಬಾಳಿಗ, ಉಪಾಧ್ಯಕ್ಷ ಯೋಗೀಶ್ ಶೆಟ್ಟಿ, ಕಾರ್ಯದರ್ಶಿ ಧನಂಜಯ ಕೊಟ್ಟಾರಿ ನೇತೃತ್ವ ವಹಿಸಿದ್ದರು. ತಾರಾನಾಥ ಕೊಟ್ಟಾರಿ ನಿರ್ವಹಿಸಿದರು. ಲತಾರಾವ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts