More

    ಯೋಗಾಭ್ಯಾಸ ಹಂತದ ಗಮನೀಯ ಅಂಶಗಳು

    ಯೋಗಾಸನಗಳನ್ನು ಅಭ್ಯಾಸ ಮಾಡುವಾಗ ಬಹು ಮುಖ್ಯವಾಗಿ ಐದು ಅಂಶಗಳನ್ನು ಗಮನಿಸಬೇಕು.

    1. ನಿಧಾನಗತಿ: ಅಭ್ಯಾಸದ ಸಂದರ್ಭದಲ್ಲಿ ಎಷ್ಟು ಸಾಧ್ಯವೋ ಅಷ್ಟು ನಿಧಾನವಾಗಿ ಆಸನಾಭ್ಯಾಸ ಮಾಡಬೇಕು. ವೇಗಕ್ಕೆ ಹಾಗೂ ಘಾತಚಲನೆಗೆ ಇಲ್ಲಿ ಪ್ರಾಧಾನ್ಯತೆಯಿಲ್ಲ.

    2. ಜಾಗೃತ ಮತ್ತು ಸೂಕ್ಷ್ಮಗಮನದ ಅಭ್ಯಾಸ: ಯೋಗಾಸನಾಭ್ಯಾಸದ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಾರದಂತೆ ಶರೀರದ ಯಾವ ಅಂಗಾಂಗಗಳಿಗೂ ಚಲನೆ ಇರುವಂತಿಲ್ಲ. ಪ್ರತಿಯೊಂದನ್ನೂ ಜಾಗೃತವಾಗಿ ಗಮನಿಸುತ್ತ ಅಭ್ಯಾಸ ಮಾಡುತ್ತೇವೆ. ಆ ಚಲನೆಗಳು ಶರೀರದ ಅಂಗಾಂಗಗಳ ಮೇಲೆ ಬೀರುತ್ತಿರುವ ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸುತ್ತ ಅಭ್ಯಾಸ ಮುಂದುವರಿಸುತ್ತೇವೆ. ಶವಾಸನದ ಸಂದರ್ಭದಲ್ಲಿಯೂ ಮನಸ್ಸನ್ನು ಜಾಗೃತವಾಗಿಟ್ಟುಕೊಂಡು ಗಮನಿಸುವ ಅಭ್ಯಾಸ ರೂಢಿಸುತ್ತೇವೆ.

    ಯೋಗಾಭ್ಯಾಸ ಹಂತದ ಗಮನೀಯ ಅಂಶಗಳು3. ಪ್ರಸನ್ನತೆ ಅಭ್ಯಾಸ: ಆಸನಗಳ ಅಭ್ಯಾಸದಲ್ಲಿ ಶರೀರದ ಅಂಗಾಂಗಗಳನ್ನು ಕ್ರಮಬದ್ಧವಾಗಿ ಸಂಕುಚಿತಗೊಳಿಸುವ ವಿಕಸಿತಗೊಳಿಸುವ, ಸೆಳೆತಕ್ಕೊಳಪಡಿಸುವ ಕ್ರಿಯೆ ಸಹಜವೇ. ಆದರೆ ಎಲ್ಲಿಯೂ ಮುಖ ಗಂಟುಹಾಕಿಕೊಂಡು, ಅಯ್ಯೋ ಎಂದು ಉದ್ಗಾರವೆತ್ತುತ್ತ ಅಭ್ಯಾಸವಿಲ್ಲ. ಅಭ್ಯಾಸದ ಅವಧಿಯಲ್ಲಿ ಮೈಕೈಗಳ ಸೆಳೆತದಿಂದ ನೋವುಂಟಾಗುವುದು ಸಹಜವೇ. ಆದರೆ ಆ ನೋವಿಗೆ ಮುಖ ಗಂಟಿಕ್ಕುವ ಬದಲು ಆಹಾ, ಎಷ್ಟು ಚೆನ್ನಾಗಿ ನೋಯುತ್ತಿದೆ ಎಂದು ಗಮನಿಸುತ್ತ ಆ ನೋವನ್ನು ಎಂಜಾಯ್ ಮಾಡಬೇಕು. ಎಂಜಾಯ್ ದಿ ಪೇನ್ ಸೂತ್ರ ಇಲ್ಲಿ ಬಹಳ ಮುಖ್ಯ. ಏಕೆಂದರೆ, ಆ ನೋವನ್ನು ನಾವೇ ಆಯಾ ಭಾಗಗಳಿಗೆ ಉದ್ದೇಶಪೂರ್ವಕವಾಗಿ ಕೊಡುತ್ತಿರುವುದಲ್ಲವೇ? ಆ ನೋವೇ ನಮ್ಮ ರೋಗಮುಕ್ತ ಶರೀರಕ್ಕೆ ಉತ್ತಮ ಟಾನಿಕ್ ಎಂದು ಭಾವಿಸಿ ಅನುಭವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಅರ್ಥಾತ್ ಅಭ್ಯಾಸದ ಸಂದರ್ಭದಲ್ಲಿ ಸದಾ ಪ್ರಸನ್ನತೆ ಇರಲಿ.

    4. ಉಸಿರಾಟದ ಅಭ್ಯಾಸ: ನಮ್ಮ ಶರೀರದ ಪ್ರತಿಯೊಂದು ಅಂಗಾಂಗಗಳ ಚಲನೆಯ ಜೊತೆಗೆ ಉಸಿರಾಟ ವನ್ನು ಸೇರಿಸುವ, ಉಸಿರಾಟವನ್ನು ಗಮನಿಸುವ, ಉಸಿರಾಟದೊಡನೆ ಅಭ್ಯಸಿಸುವ ಅಂಶ ಬಹಳ ಮುಖ್ಯ.

    5. ಅಂತಿಮ ಸ್ಥಿತಿಯನ್ನು ಕಾಯ್ದುಕೊಳ್ಳುವಿಕೆ: ಪ್ರತಿಯೊಂದು ಆಸನದ ಅಂತಿಮ ಹಂತದಲ್ಲಿಯೂ ಸಹಜ ಉಸಿರಾಟದೊಡನೆ ಸ್ಥಿತಿಯನ್ನು ಸ್ವಲ್ಪ ಸಮಯ ಕಾಯ್ದುಕೊಳ್ಳುವುದು ಅತ್ಯವಶ್ಯ.

    ವಯಸ್ಸಾದವರಿಗೆ ಪ್ರಾಣಾಯಾಮ ಅಭ್ಯಾಸ ಆಸನ: ವಯಸ್ಸು ಹೆಚ್ಚಾದಂತೆ ಧ್ಯಾನಾತ್ಮಕ ಭಂಗಿಗಳಲ್ಲಿ ಕುಳಿತುಕೊಳ್ಳಲು ಅಸಾಧ್ಯ ಎನಿಸಬಹುದು. ಹಾಗೆಂದು ಧ್ಯಾನ ಅಥವಾ ಪ್ರಾಣಾಯಾಮದ ಅಭ್ಯಾಸಗಳನ್ನು ಬಿಟ್ಟುಕೊಡಬೇಕೆಂದಿಲ್ಲ. ಸುಖಾಸನದಲ್ಲಿ ತುಂಬ ಹೊತ್ತು ಕೂತಿರಲು ತೊಡಕೆನಿಸಿದರೆ ಪೃಷ್ಠದ ಅಡಿಗೆ ಮೆತ್ತನೆಯ ದಿಂಬನ್ನು ಇಟ್ಟುಕೊಳ್ಳಿ ಅಥವಾ ಕುರ್ಚಿಯೊಂದರಲ್ಲಿ ಕುಳಿತುಕೊಳ್ಳಿ ಎಂಬುದು ಇದು ಸ್ವಾಮಿ ಶಿವಾನಂದರ ಸಲಹೆ.

    ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ಎರಡೂ ಕಾಲುಗಳನ್ನು ನೇರವಾಗಿ, ಸುಖವಾಗಿ ಊರುವುದಕ್ಕೆ ಅನುಕೂಲವಾಗುವಂತೆ ಮೆತ್ತನೆಯ ದಿಂಬನ್ನು ಕಾಲುಗಳ ಕೆಳಗೆ ಇರಿಸಿಕೊಳ್ಳಿ. ಕತ್ತು, ಬೆನ್ನುಮೂಳೆ ಮತ್ತು ತಲೆಯನ್ನು ನೇರವಾಗಿ ಇರಿಸಿಕೊಳ್ಳಿ. ತೋಳುಗಳನ್ನು ಪಕ್ಕೆಲುಬುಗಳಿಗೆ ತಾಗುವಂತೆ ಇಳಿಬಿಟ್ಟು ತೊಡೆಗಳ ಮೇಲೆ ಕೈಗಳನ್ನು ಇರಿಸಿಕೊಳ್ಳಿ. ಆರಾಮವಾಗಿ ಎರಡೂ ಮೂಗಿನ ಹೊಳ್ಳೆಗಳ ಮೂಲಕ ಹತ್ತು ಬಾರಿ ಉಸಿರಾಡಿ.

    ಪ್ರಯೋಜನ: ಇದೊಂದು ನಿರಾಯಾಸ ಧ್ಯಾನಾತ್ಮಕ ಆಸನವಾದ ಕಾರಣ ಮನಸ್ಸು ವಿಶ್ರಾಂತಿಯನ್ನು ಶರೀರ ದೃಢತೆಯನ್ನು ಹೊಂದುತ್ತದೆ. ಕ್ರಮೇಣ ಬೆನ್ನುಮೂಳೆ ಹಾಗೂ ಕುಳಿತುಕೊಳ್ಳುವ ಭಂಗಿ ಬಲಗೊಳ್ಳುತ್ತದೆ. ಮನೋದೈಹಿಕ ಸಾಮರಸ್ಯ ಸಂತುಲನ ನೀಡುತ್ತದೆ. ವಯಸ್ಸಹಜ ಉದ್ವೇಗ ನಿಯಂತ್ರಿಸಿ ಭಾವನಾತ್ಮಕ ಸಂಸ್ಕಾರಕ್ಕೆ ಸಹಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts