More

    ತಿಂಗಳಲ್ಲಿ ಯಶಸ್ವಿನಿ ಮರು ಜಾರಿ; ವಿಜಯವಾಣಿ ಸಂವಾದದಲ್ಲಿ ಸಚಿವ ಸೋಮಶೇಖರ್ ಮಾಹಿತಿ

    ಬೆಂಗಳೂರು: ರಾಜ್ಯದ ಸಹಕಾರಿ ಕ್ಷೇತ್ರ ಮತ್ತು ರೈತಾಪಿ ವರ್ಗದ ಪಾಲಿಗೆ ಸಂಜೀವಿನಿಯಾಗಿದ್ದ ‘ಯಶಸ್ವಿನಿ’ ಆರೋಗ್ಯ ವಿಮಾ ಯೋಜನೆಯ ಮರು ಜಾರಿಗೆ ಕಾಲ ಕೂಡಿಬಂದಂತಿದೆ. ಸರ್ಕಾರದ ಮಟ್ಟದಲ್ಲಿ ಈ ವಿಚಾರವಾಗಿ ಗಂಭೀರ ಚರ್ಚೆ ನಡೆದಿದ್ದು, ಮೇಲ್ಮನೆ ಚುನಾವಣೆ ಬಳಿಕ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಗುರುವಾರ ವಿಜಯವಾಣಿ ಕಚೇರಿಯಲ್ಲಿ ಸಂವಾದದಲ್ಲಿ ಪಾಲ್ಗೊಂಡ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಈ ಬಗ್ಗೆ ಸುಳಿವು ನೀಡಿದರು. ಯಶಸ್ವಿನಿ ಯೋಜನೆ ಬಗ್ಗೆ ಹೆಚ್ಚಿನ ಒಲವು ಇಟ್ಟುಕೊಂಡಿರುವ ವಿಚಾರವನ್ನು ಮುಕ್ತವಾಗಿ ಹಂಚಿಕೊಂಡ ಅವರು, ಈ ಯೋಜನೆಗೆ ದೊಡ್ಡ ಮೊತ್ತ ಬೇಕಾಗುತ್ತದೆ ಎನ್ನುವುದು ತಪ್ಪು ತಿಳುವಳಿಕೆ ಎಂದರು.

    ಹೊರೆಯಾಗದು: ಸರ್ಕಾರದ ಮಟ್ಟದಲ್ಲಿ ನಡೆದಿರುವ ಪ್ರಾಥಮಿಕ ತಯಾರಿ ಪ್ರಕಾರ ರಾಜ್ಯದ ಲಕ್ಷಾಂತರ ರೈತರಿಗೆ, ಸಹಕಾರಿಗಳಿಗೆ ನೆರವಾಗುವ ಈ ಯೋಜನೆಗೆ 350-400 ಕೋಟಿ ರೂ. ವಾರ್ಷಿಕ ಬೇಕಾಗಬಹುದು. ಉಳಿದ ಪಾಲು ಸದಸ್ಯತ್ವದ ಮೂಲಕ ಸಂಗ್ರಹಿಸುವುದಕ್ಕೆ ಮಾರ್ಗ ಇದ್ದೇ ಇದೆ ಎಂಬ ವಿಶ್ವಾಸವೂ ಇದೆ. ಹೀಗಾಗಿ, ಈ ಮುಂಚಿನ 1200-2000 ಕೋಟಿ ರೂ. ಬೇಕಾಗುತ್ತದೆ ಎಂಬ ಮಾಹಿತಿ ಸರಿಯಲ್ಲ. ಸರ್ಕಾರದ ಬೊಕ್ಕಸದ ಮೇಲೆ ದೊಡ್ಡ ಹೊರೆಯಾಗದು ಎಂದರು.

    ಸರ್ಕಾರದ ಜನಪ್ರಿಯತೆ ಮತ್ತು ವರ್ಚಸ್ಸು ಹೆಚ್ಚಿಸುವಲ್ಲಿ ಕ್ರಾಂತಿಕಾರಕ ಪಾತ್ರ ವಹಿಸಲಿರುವ ಈ ಯೋಜನೆ ಮರು ಜಾರಿ ಬಗ್ಗೆ ಒಂದೊಮ್ಮೆ ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಅಡ್ಡ ಬರದಿದ್ದರೆ ಸಹಕಾರ ಸಪ್ತಾಹದ ವೇಳೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇತ್ತೆಂಬ ವಿಚಾರವನ್ನೂ ಸೋಮಶೇಖರ್ ಪರೋಕ್ಷವಾಗಿ ಬಿಚ್ಚಿಟ್ಟರು.

    ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಯಶಸ್ವಿನಿ ಯೋಜನೆ ಜಾರಿಗೆ ತಂದು ಇದರ ನಿರ್ವಹಣೆಗೆಗಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ರಚಿಸಿದ್ದರು. ಹಳ್ಳಿಹಳ್ಳಿಯಲ್ಲೂ ಯಶಸ್ವಿನಿ ಯಶಸ್ವಿಯಾಗಿ ಫಲ ಹಂಚಿತು. ಇದೀಗ ಎಸ್.ಎಂ.ಕೃಷ್ಣ ಅವರ ರಾಜಕೀಯ ಶಿಷ್ಯ ಸೋಮಶೇಖರ್ ಮರು ಜಾರಿಗೆ ಮುಂದಾಗಿರುವುದು ವಿಶೇಷ.

    ‘ಸಹಕಾರ ಸಚಿವನಾಗಿ ನಾನು ಪ್ರವಾಸ ಮಾಡಿದಲ್ಲೆಲ್ಲ, ಯಶಸ್ವಿನಿ ಬಗ್ಗೆ ಬೇಡಿಕೆ ಇಡುತ್ತಿದ್ದಾರೆ. ಇದನ್ನು ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದೇನೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಇದಕ್ಕೊಂದು ಸ್ಪಷ್ಟ ರೂಪ ಕೊಡಲಿದ್ದೇವೆ’ ಎಂದು ಸೋಮಶೇಖರ್ ತಿಳಿಸಿದರು.

    ಪ್ರಸ್ತುತ ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಯಾಗಲು ರೋಗಿಯು ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿಂದ ಅನುಮತಿ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲ ರೋಗಕ್ಕೂ ಈ ಯೋಜನೆ ಅನ್ವಯವಾಗುತ್ತಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಶಸ್ವಿನಿಯಷ್ಟು ಮುಕ್ತವಾದ ಯೋಜನೆ ಅಗತ್ಯವಿದೆ ಎಂದು ಧ್ವನಿ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವರು ಒತ್ತಾಸೆಯಾದಂತೆ ಕಾಣಿಸಿದೆ.

    ಹೇರಿಕೆಯಿಲ್ಲ: ಕೇಂದ್ರ ಸರ್ಕಾರ ಸಹಕಾರ ಇಲಾಖೆಯನ್ನು ಹೊಸದಾಗಿ ಆರಂಭಿಸಿರುವುದು ಈ ಕ್ಷೇತ್ರದ ಸಮಸ್ಯೆ ಪರಿಹಾರ ಮಾಡುವುದಕ್ಕೆ. ಯಾವುದನ್ನೂ ಹೇರುವುದಿಲ್ಲ ಎಂದು ಖುದ್ದು ಸಹಕಾರಿ ಸಚಿವರೂ ಆದ ಗೃಹ ಸಚಿವ ಅಮಿತ್ ಷಾ ತಮಗೆ ಭರವಸೆ ನೀಡಿದ್ದಾರೆ ಎಂದು ಸೋಮಶೇಖರ್ ಸ್ಪಷ್ಟಪಡಿಸಿದರು.

    ಸಹಕಾರ ಇಲಾಖೆಯಲ್ಲಿ ಆಗಬೇಕಾದ ಸುಧಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲರ ಅಭಿಪ್ರಾಯ ಪಡೆದು ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಸುಭದ್ರ ಸಹಕಾರಿ ಕ್ಷೇತ್ರ ನಮ್ಮ ಉದ್ದೇಶ.

    | ಎಸ್.ಟಿ. ಸೋಮಶೇಖರ್ ಸಹಕಾರ ಸಚಿವ

     

    ಸಚಿವರು ಹೇಳಿದ್ದೇನು?

    1. ಪತ್ತಿನ ಸಹಕಾರ ಸಂಘಗಳು ಅಣಬೆಗಳಂತೆ ಬೆಳೆಯುತ್ತಿದ್ದು ಠೇವಣಿದಾರರ ಹಣಕ್ಕೂ ಖಾತ್ರಿ ಇಲ್ಲ ಎಂಬ ಪರಿಸ್ಥಿತಿ ಇದೆ. ಇದನ್ನೆಲ್ಲ ಹೋಗಲಾಡಿಸಲು ಪತ್ತಿನ ಸಹಕಾರ ಸಂಘಗಳ ನೋಂದಣಿ ಹಂತದಲ್ಲೇ ಪಾರದರ್ಶಕ ಕ್ರಮ ಅಳವಡಿಸುವ ಕೆಲಸ ಶೀಘ್ರ ನಡೆಯಲಿದೆ.
    2. ಅಪೆಕ್ಸ್, ಡಿಸಿಸಿ, ಪ್ಯಾಕ್ಸ್, ಪಟ್ಟಣ ಸಹಕಾರಿ ಬ್ಯಾಂಕ್, ಸೌಹಾರ್ದ ಸಹಕಾರಿಯಲ್ಲಿ ಆಗಬೇಕಾದ ಕೆಲವು ಬದಲಾವಣೆ ಬಗ್ಗೆ ಚರ್ಚೆ ನಡೆದಿದ್ದು, ಜನವರಿಯಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಮುಖ ತಿದ್ದುಪಡಿ ಮಸೂದೆ ಮಂಡಿಸಲಾಗುತ್ತದೆ.
    3. ಮಂಡ್ಯ ಹಾಲು ಒಕ್ಕೂಟ ಮತ್ತು ಶಿವಮೊಗ್ಗ ಡಿಸಿಸಿ ಬ್ಯಾಂಕ್​ನ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಿಐಡಿ ತನಿಖೆ ಮುಗಿಸಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಶೀಘ್ರವೇ ಸಿಎಂ, ಗೃಹ ಸಚಿವರು ಮತ್ತು ನಾನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವವರಿದ್ದೇವೆ.

    ನಾಲ್ಕು ತಿಂಗಳಲ್ಲಿ ಬಿಬಿಎಂಪಿ ಎಲೆಕ್ಷನ್

    ನಾಲ್ಕು ತಿಂಗಳಲ್ಲಿ ಬಿಬಿಎಂಪಿಗೆ ಚುನಾವಣೆ ನಡಸಲೇಬೇಕೆಂದು ಬಿಜೆಪಿ ವರಿಷ್ಠರು ಸೂಚನೆ ನೀಡಿದ್ದು, ಇದಕ್ಕೆ ಸರ್ಕಾರ ಸಮ್ಮತಿಸಿದೆ. ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದೆ ನಾಗರಿಕರು ಸಮಸ್ಯೆ ಎದುರಿಸುತ್ತಿ ದ್ದಾರೆ. ಈ ವಿಚಾರ ಪರಿಗಣಿಸಿ ಹೈಕಮಾಂಡ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ಸಚಿವ ಸೋಮಶೇಖರ್ ಮಾಹಿತಿ ನೀಡಿದರು.

    ಅವರ ಉದ್ದೇಶ ಹೊಸ ರೈತ ಸದಸ್ಯರಿಗೆ ಸಾಲ ಕೊಟ್ಟು ಗ್ರಾಮೀಣ ಪ್ರದೇಶವನ್ನು ಆರ್ಥಿಕವಾಗಿ ಬಲಪಡಿಸುವುದಲ್ಲ, ಆ ಸಂಘಗಳ ಮೂಲಕ ಡಿಸಿಸಿ ಬ್ಯಾಂಕ್​ಗಳ ಮೇಲೆ ಹಿಡಿತ ಸಾಧಿಸುವ ಸ್ವಹಿತಾಸಕ್ತಿ ಇರುವುದು ಗಮನಕ್ಕಿದೆ ಎಂದರು. ಈ ವಿಷಯವಾಗಿ ವಿಜಯವಾಣಿ ಕಳೆದ ವಾರ ವಿಶೇಷ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್, ಒಂದು ಗ್ರಾಮ ಪಂಚಾಯಿತಿಯಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾಕ್ಸ್ ಸ್ಥಾಪನೆಯಾದರೆ ಉದ್ದೇಶ ಈಡೇರಲ್ಲ ಮತ್ತು ಪ್ಯಾಕ್ಸ್ ವ್ಯವಸ್ಥೆ ದುರ್ಬಲವಾಗುತ್ತದೆ ಎಂಬ ಅರಿವಿದೆ. ಅನುಮತಿಗಾಗಿ ಒತ್ತಡ ಇದ್ದರೂ ಸಹ ಅದಕ್ಕೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts