More

    ಬಾರದ ಶೌಚಗೃಹದ ಸಹಾಯಧನ

    ಯಳಂದೂರು: 20ಕ್ಕೂ ಹೆಚ್ಚು ಬಡ ಕುಟುಂಬಗಳು ವೈಯಕ್ತಿಕ ಶೌಚಗೃಹ ನಿರ್ಮಿಸಿ 4 ವರ್ಷ ಕಳೆದರೂ ಸ್ವಚ್ಛ ಭಾರತ್ ಯೋಜನೆಯಡಿ ನೀಡುವ ಸಹಾಯಧನಕ್ಕಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದ್ದಾರೆ.

    ಸರ್ಕಾರವು ಪ್ರತಿಯೊಂದು ಮನೆಯಲ್ಲಿ ಕಡ್ಡಾಯವಾಗಿ ಶೌಚಗೃಹ ಹೊಂದುವ ಮೂಲಕ ಗ್ರಾಮಗಳನ್ನು ಬಯಲು ಶೌಚಮುಕ್ತ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ಆದರೆ ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಹಳ್ಳಿ ಗ್ರಾಮದ ಉಪ್ಪಾರ ಬಡಾವಣೆಯ 20ಕ್ಕೂ ಹೆಚ್ಚು ಶೌಚಗೃಹ ಫಲಾನುಭವಿಗಳು ಕಳೆದ 4 ವರ್ಷದಿಂದ ನಿರ್ಮಿಸಿರುವ ಶೌಚಗೃಹದ ಸಹಾಯಧನಕ್ಕೆ ಅಲೆದಾಡುತ್ತಿದ್ದಾರೆ. ಈ ಬಗ್ಗೆ ಪಿಡಿಒ, ಇಒ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

    ಕಳೆದ 4 ವರ್ಷದಿಂದ ಕಂದಹಳ್ಳಿ ಗ್ರಾಮದ ಉಪ್ಪಾರ ಬಡಾವಣೆಯ ನಿವಾಸಿಗಳಾದ ಜ್ಯೋತಿ ಬಿ.ಮಾದೇಶ್, ಸವಿತಾ ಶಂಕರ್, ಸುನೀತಾ, ಮಹೇಶ್, ಚಿಕ್ಕತಾಯಮ್ಮ ಸೇರಿದಂತೆ ಇತರರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಸ್ವಚ್ಛ ಭಾರತ್ ಯೋಜನೆ ಮೂಲಕ 12 ಸಾವಿರ ರೂ.ಸಹಾಯಧನಕ್ಕೆ ಅರ್ಜಿ ಸಲ್ಲಿಸಿ, ಸಾಲ ಮಾಡಿ ತಮ್ಮ ಮನೆ ಬಳಿ ಶೌಚಗೃಹ ನಿರ್ಮಿಸಿದ್ದರು. ಬಹುತೇಕರು ಅವಿದ್ಯಾವಂತರು. ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲ. ಇದರಿಂದ ಸಹಾಯಧನಕ್ಕಾಗಿ ಅಲೆದಾಡುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕಿದೆ.

    ಘೋಷಣೆಗೆ ಮಾತ್ರ ಸಿಮೀತ: ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಹಳ್ಳಿ, ದುಗ್ಗಹಟ್ಟಿ, ಮೆಲ್ಲಹಳ್ಳಿ, ವೈ.ಕೆ. ಮೋಳೆ ಗ್ರಾಮಗಳಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡಿದ್ದರೂ ವೈಯಕ್ತಿಕ ಶೌಚಗೃಹ ಬಳಕೆ ಮಾಡುತ್ತಿಲ್ಲ. ಕೆರೆ, ಕಾಲುವೆ, ಹಳ್ಳ ಕೊಳ್ಳದ ಸ್ಥಳಗಳಲ್ಲಿ ಬಯಲು ಮಲ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ರೋಗ ರುಜಿನಗಳು ಬರುತ್ತವೆ. ರಾಷ್ಟ್ರೀಯ ಹೆದ್ದಾರಿ 209ರ ಬಳಿಯಲ್ಲಿರುವ ಕಂದಹಳ್ಳಿ ಗ್ರಾಮದಲ್ಲಿ ರಸ್ತೆ, ಕೆರೆಯ ಬದಿಯಲ್ಲಿ ಮಹಿಳೆಯರು, ಮಕ್ಕಳು ಹೆಚ್ಚಾಗಿ ಬಯಲು ಪ್ರದೇಶವನ್ನು ಅವಲಂಬಿಸುತ್ತಿದ್ದಾರೆ. ಕೆಲವರು ಶೌಚಗೃಹ ನಿರ್ಮಿಸಲು ಹಿಂದೇಟು ಹಾಕುತ್ತಿದ್ದರೆ, ಇದ್ದವರು ಬಳಕೆ ಮಾಡುತ್ತಿಲ್ಲ. ಹಾಗಾಗಿ, ಶೌಚಗೃಹ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ.

    ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷೃ: ಸರ್ಕಾರದಿಂದ ಸಹಾಯ ಧನ ಸಿಗುತ್ತದೆ ಎಂದು ಜನರು ಸಾಲ ಮಾಡಿಕೊಂಡು ಕಟ್ಟಿಸಿರುವುದು ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಈ ಕೂಡಲೇ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛ ಭಾರತ್ ಯೋಜನೆ ಮೂಲಕ ನಿರ್ಮಿಸಿರುವ ಶೌಚಗೃಹ ಸಹಾಯಧನ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಾಗಿದೆ.

    ಶೌಚಗೃಹ ನಿರ್ಮಿಸಿ 4 ವರ್ಷ ಕಳೆದರೂ ಸಂಬಂಧಪಟ್ಟ ದುಗ್ಗಹಟ್ಟಿ ಪಂಚಾಯಿತಿ ಅಧಿಕಾರಿಗಳು ಅನುದಾನ ಬಂದಿಲ್ಲ ಎಂದು ಹೇಳುತ್ತಾರೆ. ಆದರೆ ಸಾಲ ಮಾಡಿ ನಿರ್ಮಿಸಿರುವ ಕಟ್ಟಡ ಅನುದಾನ ನೀಡಲು ಈ ರೀತಿಯ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ಸಂಬಂಧಪಟ್ಟ ಮೇಲಧಿಕಾರಿಗಳು ಸಹಾಯಧನ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಾಗಿದೆ.

    ಬಿ.ಮಾದೇಶ್, ಫಲಾನುಭವಿ, ಕಂದಹಳ್ಳಿ ಗ್ರಾಮ

    ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ಸ್ವಚ್ಛ ಭಾರತ್ ಯೋಜನೆ ಮೂಲಕ ನಿರ್ಮಿಸಿರುವ ಶೌಚಗೃಹದ ಸಹಾಯಧನ ನೀಡಿಲ್ಲದಿರುವ ಬಗ್ಗೆ ಪರಿಶೀಲಿಸಿ, ಅನುದಾನ ನೀಡುವ ನಿಟ್ಟಿನಲ್ಲಿ ತಕ್ಷಣ ಕ್ರಮ ವಹಿಸಲಾಗುವುದು.
    ಬಸವಣ್ಣ, ಪ್ರಭಾರ ಪಿಡಿಒ, ದುಗ್ಗಹಟ್ಟಿ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts