More

    ತುಮ್ಮರಗುದ್ದಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ: ನರೇಗಾ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಒಲಿದ ಪ್ರಶಸ್ತಿ

    ಯಲಬುರ್ಗಾ: ಕಡತಗಳ ನಿರ್ವಹಣೆ, ಕರವಸೂಲಿ, ನರೇಗಾ ಯೋಜನೆ ಸಮರ್ಪಕ ಅನುಷ್ಠಾನ, ಸಿಸಿ ರಸ್ತೆ, ಚರಂಡಿ, ನಾಲಾ-ಕೆರೆ ಹೂಳು ತೆರವು, ಸಕಾಲಕ್ಕೆ ಕುಡಿವ ನೀರು ಪೂರೈಕೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಂದ ಸಾಧನೆ ಮಾಡಿದ ತಾಲೂಕಿನ ತುಮ್ಮರಗುದ್ದಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.

    ತಾಲೂಕಿನ 22 ಗ್ರಾಪಂ ಪೈಕಿ 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಮ್ಮರಗುದ್ದಿ ಪಂಚಾಯಿತಿ ಆಯ್ಕೆಯಾಗಿ ಗಮನ ಸೆಳೆದಿದೆ. ಈ ಹಿಂದೆ ಬಂಡಿ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿತ್ತು. 2015ರಲ್ಲಿ ಪ್ರತ್ಯೇಕ ಗ್ರಾಪಂಗಳಾಗಿ ದಮ್ಮೂರು, ಮಾರನಾಳ, ತುಮ್ಮರಗುದ್ದಿ ರಚನೆಯಾದವು.

    ತಾಲೂಕು ಕೇಂದ್ರದಿಂದ 5 ಕಿಮೀ ದೂರದಲ್ಲಿರುವ ತುಮ್ಮರಗುದ್ದಿ ಗ್ರಾಮ ಪಂಚಾಯಿತಿಗೆ ಪ್ರಥಮ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಸರ್ಕಾರ ನಿಗದಿಪಡಿಸಿದ ಗುರಿಯೊಂದಿಗೆ ನರೇಗಾ ಯೋಜನೆಯಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದೆ. ಪ್ರಸಕ್ತ ವರ್ಷವೂ ಉದ್ಯೋಗ ಖಾತ್ರಿಯಲ್ಲಿ ಮುಂಚೂಣಿಯಲ್ಲಿದೆ. ಕೋವಿಡ್ ಸಂದರ್ಭದಲ್ಲಿ ನರೇಗಾ ಪರಿಣಾಮಕಾರಿ ಜಾರಿಗೊಳಿಸಿ ಕೂಲಿಕಾರರಿಗೆ ಕೆಲಸ ಕೊಡುವ ಮೂಲಕ ಗುಳೆ ಹೋಗುವುದನ್ನು ತಪ್ಪಿಸಿದೆ. ಅಲ್ಲದೆ ತುಮ್ಮರಗುದ್ದಿ ಗ್ರಾಪಂ ಮೂರು ಹಳ್ಳಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ರೋಗ ರುಜಿನ ಹರಡದಂತೆ ಫಾಗಿಂಗ್, ಬ್ಲೀಚಿಂಗ್ ಪೌಡರ್ ಸಿಂಪಡಿಸುವುದರ ಜತೆಗೆ ಜನ ಜಾಗೃತಿ ಮೂಡಿಸುತ್ತಿದೆ. ಹೀಗೆ ಗ್ರಾಪಂಗೆ ಸಂಬಂಧಿಸಿದ ಹಲವು ಕಾರ್ಯನಿರ್ವಹಣೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದರಿಂದ ಗಾಂಧಿ ಪುರಸ್ಕಾರ ಅರಸಿ ಬಂದಿದೆ.

    ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ, ನರೇಗಾದಡಿ ವಿವಿಧ ಅಭಿವೃದ್ಧಿ ಕಾಮಗಾರಿ ಆರಂಭಿಸಿ ಕೂಲಿಕಾರರಿಗೆ ಕೆಲಸ ಸೇರಿದಂತೆ ಉತ್ತಮ ಕಾರ್ಯಕ್ಕೆ ಪ್ರಶಸ್ತಿ ದೊರೆತಿರುವುದು ಖುಷಿ ತಂದಿದೆ. ಸಾಧನೆಗೆ ಗ್ರಾಪಂ ಆಡಳಿತ ಮಂಡಳಿಯ ಸಹಕಾರ, ಅಧಿಕಾರಿಗಳ ಮಾರ್ಗದರ್ಶನ ಸಾಷ್ಟಿದೆ. ಇನ್ನಷ್ಟು ಅಭಿವೃದ್ಧಿ ಕೈಗೊಳ್ಳಲು ಪ್ರಶಸ್ತಿ ಪ್ರೇರಣೆಯಾಗಿದೆ.
    | ಸೋಮಪ್ಪ ಪೂಜಾರ ಪಿಡಿಒ, ತುಮ್ಮರಗುದ್ದಿ ಗ್ರಾಪಂ

    ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದು ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದೆ. ನನ್ನ ಅಧಿಕಾರ ಅವಧಿಯಲ್ಲಿ ಪ್ರಶಸ್ತಿ ದೊರಕಿರುವುದು ಹೆಮ್ಮೆ ಎನ್ನಿಸುತ್ತಿದೆ. ಪಿಡಿಒ ಹಾಗೂ ಸಿಬ್ಬಂದಿ ಪ್ರಾಮಾಣಿಕ ಕೆಲಸದಿಂದ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ.
    | ನಿಂಗವ್ವ ಬಾಳಪ್ಪ ತಳವಾರ ಅಧ್ಯಕ್ಷೆ, ತುಮ್ಮರಗುದ್ದಿ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts