More

    ಎಸ್ಟಿ ಪ್ರಮಾಣ ಪತ್ರ ಅನ್ಯರ ಪಾಲು: ಹೋರಾಟಕ್ಕೆ ಸಿದ್ಧರಾಗಲು ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಕರೆ

    ಯಲಬುರ್ಗಾ: ಅನ್ಯ ಸಮುದಾಯದವರು ಎಸ್ಟಿ ಪ್ರಮಾಣ ಪತ್ರ ಪಡೆಯುತ್ತಿದ್ದು, ಇದರ ವಿರುದ್ಧ ಹೋರಾಡಲು ಸಿದ್ಧರಾಗಿ ಎಂದು ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

    ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಫೆ.8, 9ರಂದು ಜರುಗುವ ವಾಲ್ಮೀಕಿ ಜಾತ್ರೋತ್ಸವ ನಿಮಿತ್ತ ಪಟ್ಟಣದ ಶಾದಿ ಮಹಲ್‌ನಲ್ಲಿ ಸೋಮವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. 2014ರಲ್ಲಿ ರಾಜ್ಯ ಸರ್ಕಾರ ಕುಲಶಾಸ್ತ್ರ ಅಧ್ಯಯನ ಮಾಡಿ ವಾಲ್ಮೀಕಿ ಸಮುದಾಯದ ತಳವಾರ, ಪರಿವಾರ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಜಾರಿ ಮಾಡಿ ಎಂದು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಇದಕ್ಕೆ 2019ರಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿತು. ಸಂವಿಧಾನದ ಕ್ರ.ಸಂ.34ರಲ್ಲಿ ತಳವಾರ ಮತ್ತು ಪರಿವಾರ ವಾಲ್ಮೀಕಿ ಸಮುದಾಯಕ್ಕೆ ಸೇರಿವೆ. ಇವನ್ನು ಹೊರತುಪಡಿಸಿ ಅನ್ಯ ಸಮುದಾಯ ಎಸ್ಟಿ ಪ್ರಮಾಣ ಪತ್ರ ಪಡೆಯುತ್ತಿವೆ. ಎಸ್ಸಿ, ಎಸ್ಟಿ ಒಕ್ಕೂಟದ ಹೋರಾಟ ಸಮಿತಿಯು ರಾಜ್ಯ ಸರ್ಕಾರಕ್ಕೆ 25 ಬೇಡಿಕೆಗಳನ್ನು ಸಲ್ಲಿಸಿದೆ. ಅದರಲ್ಲಿ ಒಂದನ್ನು ಮಾತ್ರ ಈಡೇರಿಸಿದ್ದು 24 ಬಾಕಿ ಇವೆ. ಅವನ್ನು ಶೀಘ್ರವೇ ಈಡೇರಿಸಬೇಕು. ಇಲ್ಲವಾದರೆ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

    ವೈಚಾರಿಕತೆ ಮತ್ತು ಜಾಗೃತಿಗಾಗಿ ಜಾತ್ರೆ ನಡೆಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವರು. ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿದರು.

    ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ಮಾನಪ್ಪ ಪೂಜಾರ, ಮಾಜಿ ಕೃಷಿ ಅಧಿಕಾರಿ ಗುಂಗಾಡಿ ಶರಣಪ್ಪ, ಪ್ರಮುಖರಾದ ಚನ್ನಬಸವ ಕುಲಕರ್ಣಿ, ಕಳಕಪ್ಪ ತಳವಾರ್, ಫಕೀರಪ್ಪ ತಳವಾರ್, ಹಂಚ್ಯಾಳಪ್ಪ ಪೂಜಾರ, ಸಂಜಿವಪ್ಪ ಸಂಗಟಿ, ಶ್ರೀಕಾಂತ ಮಾಲಿಪಾಟೀಲ್, ಹನುಮಗೌಡ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts