ಯಲಬುರ್ಗಾ: ಸಾಮಾಜಿಕ ನಾಟಕದಲ್ಲಿ ಮೂಡಿ ಬರುವ ಒಳ್ಳೆಯ ಸನ್ನಿವೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯುವ ಕಾಂಗ್ರೆಸ್ ತಾಲೂಕು ಕಾರ್ಯಾಧ್ಯಕ್ಷ ಈಶ್ವರ ಅಟಮಾಳಗಿ ಹೇಳಿದರು.
ತಾಲೂಕಿನ ತಲ್ಲೂರು ಗ್ರಾಮದ ಶ್ರೀ ಶರಣಬಸವೇಶ್ವರ ಜಾತ್ರೋತ್ಸವ ನಿಮಿತ್ತ ಯುವ ನಾಟ್ಯ ಸಂಘ ಏರ್ಪಡಿಸಿದ್ದ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ, ಹಬ್ಬ ಹರಿದಿನಗಳಲ್ಲಿ ಸಾಮಾಜಿಕ ನಾಟಕ ಏರ್ಪಡಿಸಿ ಕಲೆಯ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ನಾಟಕ ಏರ್ಪಡಿಸುವುದರಿಂದ ಪ್ರತಿಯೊಬ್ಬರಲ್ಲಿ ಸಾಮರಸ್ಯ ಭಾವ ಮೂಡುತ್ತದೆ ಎಂದರು.
ಲಿಂಗನಬಂಡಿಯ ಮೌನೇಶ್ವರ ಮಠದ ಶ್ರೀ ಉಳಿವೇಂದ್ರಸ್ವಾಮಿ ಮಾತನಾಡಿ, ನಾಟಕದಿಂದ ಸಮಾಜದಲ್ಲಿನ ಅಂಕುಡೊಂಕು ತಿದ್ದಲ್ಪಡುತ್ತವೆ. ರಂಗಭೂಮಿ ಕಲೆ ಮನುಷ್ಯನ ವ್ಯಕ್ತಿತ್ವ ಬೆಳೆಸುತ್ತದೆ. ಯುವ ಪೀಳಿಗೆ ಶಾಲಾ-ಕಾಲೇಜುಗಳಲ್ಲಿ ರಂಗಭೂಮಿ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಪ್ರಮುಖರಾದ ಓಬಳೆಪ್ಪ ಕುಲಕರ್ಣಿ, ಶರಣಗೌಡ ಪಾಟೀಲ್, ಶರಣಪ್ಪ ತೋಟದ, ಪರಶುರಾಮ ಬತ್ತಿ, ಹನುಮಗೌಡ ಗೌಡ್ರ, ಚನ್ನಬಸವ ಕುಲಕರ್ಣಿ, ಶೀನಪ್ಪ, ಶೇಖಪ್ಪ ಹನುಮಾಪುರ, ಮುದೇಗೌಡ ಲಗಳೂರು ಸೇರಿದಂತೆ ಇತರರಿದ್ದರು.