More

    ಯಕ್ಷಗಾನಕ್ಕೆ ಕಾಲಮಿತಿ: ಆ ಬದಲಾವಣೆ ಹೀಗಿದ್ದರೆ ಹೇಗೆ?

    ‘ರಾತ್ರಿಯಿಡೀ ನಡೆಯುವ ಯಕ್ಷಗಾನವನ್ನು ಕಾಲಮಿತಿಗೆ ಒಳಪಡಿಸಬೇಕು, ಈಗಿನ ಸಂದರ್ಭದಲ್ಲಿ ಅದೇ ಸೂಕ್ತ’ ಎಂಬ ಅಭಿಪ್ರಾಯವೊಂದು ಹುಟ್ಟಿಕೊಂಡಿದೆ. ಜೊತೆಗೆ ಕಾಲಮಿತಿ ಬೇಕು-ಬೇಡ ಎನ್ನುವ ಚರ್ಚೆಯೂ ಉಂಟಾಗಿದೆ. ಯಕ್ಷಗಾನ ಕಲಾಭಿಮಾನಿಗಳು ಈ ಕುರಿತು ತಮ್ಮ ಅನಿಸಿಕೆಗಳನ್ನು ವಿಜಯವಾಣಿ ಜತೆ ಹಂಚಿಕೊಳ್ಳಬಹುದು. ಆಯ್ದ ಉತ್ತಮ ಬರಹಗಳನ್ನು http://www.vijayavani.net ಹಾಗೂ ವಿಜಯವಾಣಿಯ ಎಲ್ಲ ಡಿಜಿಟಲ್ ಪ್ಲ್ಯಾಟ್​ಫಾರ್ಮ್​ಗಳಲ್ಲೂ ಪ್ರಕಟಿಸಲಾಗುವುದು. ನಿಮ್ಮ ಬರಹ ಸುಮಾರು 300 ಪದಗಳಲ್ಲಿದ್ದರೆ ಸಾಕು. ಯಾರ ನಂಬಿಕೆ ಹಾಗೂ ಭಾವನೆಗೆ ಧಕ್ಕೆ ಬರದಂತೆ ವಿಷಯವನ್ನು ಪ್ರಸ್ತಾಪಿಸಿ. ನಿಮ್ಮ ಬರಹಗಳನ್ನು ಇ-ಮೇಲ್ ಮೂಲಕ ಕಳುಹಿಸಬೇಕಾದ ವಿಳಾಸ, e-mail: [email protected]

    | ಶಶಿಧರ್ ತಲ್ಲೂರಂಗಡಿ ಉಡುಪಿ

    ಅತ್ಯಂತ ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ನಾವಿದ್ದೇವೆ. ಕಾಲಕ್ಕೆ ತಕ್ಕ ಕೋಲ ಕಟ್ಟದೆ ಇದ್ದರೆ ಓಟ ಮುಂದುವರಿಸುವುದು ಕಷ್ಟವೇ ಎನ್ನುವಂತಹ ಪರಿಸ್ಥಿತಿ. ಬದಲಾವಣೆಯ ಗಾಳಿ ಎಲ್ಲೆಡೆ ಜೋರಾಗಿಯೇ ಬೀಸುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯ ಪರ್ವ ನಡೆಯುತ್ತಿದೆ. ಯಾವುದೇ ಒಂದು ಹೊಸ ಪ್ರಯತ್ನವನ್ನು ಒಮ್ಮೆಗೆ ಒಪ್ಪುವುದು ಕಷ್ಟವೇ. ಹಾಗಾಗಿ ಯಾವುದೇ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಆದಾಗ ಪರ-ವಿರೋಧಗಳ ಚರ್ಚೆಯೊಂದಷ್ಟು ಖಂಡಿತ ಇದ್ದೇ ಇರುತ್ತದೆ.

    ಅಂಥ ಏಕೈಕ ಕಲೆ ಯಕ್ಷಗಾನ: ಬದಲಾವಣೆಯ ಬಿರುಗಾಳಿಗೆ ಸಿಲುಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡ ಹಲವಾರು ಕಲಾಪ್ರಾಕಾರಗಳು ನಮ್ಮೆದುರಿಗೆ ಉದಾಹರಣೆಯಾಗಿ ಇರುವಾಗ ಬಹುಶಃ ಕಲಾಪ್ರಪಂಚದಲ್ಲಿ ಆರಂಭದಿಂದಲೂ ಹರಿಯುವ ನದಿಯಂತೆ ಅಗತ್ಯಕ್ಕೆ ಬೇಕಾದಂತೆ ತನ್ನನ್ನು ಮಾರ್ಪಾಡುಗೊಳಿಸುತ್ತ ಮೂಲ ಸ್ವರೂಪಕ್ಕೆ ಕಿಂಚಿತ್ತೂ ತೊಂದರೆಯಾಗದಂತೆ ಪ್ರದರ್ಶನ ಪಡೆಯುತ್ತಿರುವ ಮತ್ತು ಇಂದಿಗೂ ಜನಮಾನಸದಲ್ಲಿ ಮೊದಲಿನಷ್ಟೆ ಉತ್ಸಾಹ-ಪ್ರೀತಿ ಉಳಿಸಿಕೊಂಡಿರುವ ಏಕೈಕ ಕಲೆ ಯಕ್ಷಗಾನ ಎಂದರೆ ತಪ್ಪಾಗಲಿಕ್ಕಿಲ್ಲ.

    ಬದಲಾವಣೆಗೂ ಔನ್ನತ್ಯಕ್ಕೂ ವ್ಯತ್ಯಾಸವಿದೆ. ಕಲೆಯೊಂದು ತನ್ನ ಮೂಲವನ್ನು ಮರೆಯದೆ ಕಾಲಕ್ಕನುಗುಣವಾಗಿ ಗುಣಮಟ್ಟದಲ್ಲಿ ಹೆಚ್ಚಳವಾಗುತ್ತ ಸಾಗಿದಂತೆ ಆ ಕಲೆಯ ಗೌರವ ಹೆಚ್ಚುತ್ತ ಸಾಗುತ್ತದೆ. ಕಳೆದ ಕೆಲವಷ್ಟು ವರ್ಷಗಳಿಂದ ಯಕ್ಷಗಾನ ಕಲೆ ಪ್ರೇಕ್ಷಕರ ಕೊರತೆ ಅನುಭವಿಸುತ್ತಿದೆ. ಅದಕ್ಕೆ ಕಾರಣ ಹಲವಾರು ಇರಬಹುದು. ಆದರೆ ರಾತ್ರಿಯಿಂದ ಬೆಳಗ್ಗಿನವರೆಗೂ ನಿದ್ರೆ ಬಿಡಬೇಕೆಂಬುದು ಪ್ರಧಾನ ಕಾರಣಗಳಲ್ಲಿ ಒಂದು ಎಂಬುದನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ಪ್ರಸ್ತುತ ಕಾಲಘಟ್ಟದ ವೇಗದೊಂದಿಗೆ ಹೊಂದಿಕೊಳ್ಳಲು “ಕಾಲಮಿತಿ” ಎಂಬ ಪರಿಧಿಯೊಳಗೆ ಯಕ್ಷಗಾನ ಬರುವುದು ಸೂಕ್ತವೇ ಸರಿ.

    ಹರಕೆ ಬಯಲಾಟವೆಂದರೆ ಬೆಳಕಿನ ಸೇವೆಯೆಂದೇ ಪ್ರತೀತಿ. ರಾತ್ರಿಯಿಂದ ಬೆಳಗ್ಗಿನವರೆಗೆ ಆಟ ನಡೆದರೆ ಬೆಳಕಿನ ಸೇವೆ ಸಲ್ಲಿಸಿದಂತಾಗವುದು ಎಂದು ಕೆಲವರ ನಂಬಿಕೆ. ಆದರೆ ಕಳೆದ ಕೆಲವಷ್ಟು ವರ್ಷಗಳಿಂದ ಮಂದಾರ್ತಿ ದೇಗುಲದಲ್ಲಿ ಮಳೆಗಾಲದಲ್ಲಿ ಸಂಜೆ 8ರಿಂದ ರಾತ್ರಿ 12ರವರೆಗೆ ಸೇವೆಯ ರೂಪದಲ್ಲಿ ಆಟ ನಡೆಯುತ್ತಿದೆ. ಧರ್ಮಸ್ಥಳ ಮೇಳವೂ ಕಾಲಮಿತಿಯ ಪರಿಮಿತಿಗೆ ಒಳಪಟ್ಟಾಗಿದೆ. ಹಾಗಾಗಿ ಬೆಳಕಿನ ಸೇವೆಯ ವಿಚಾರದಲ್ಲಿ ಹರಕೆ ಮೇಳಗಳಿಗೆ ಕಾಲಮಿತಿ ಒಂದು ಸಮಸ್ಯೆ ಆಗಲಾರದು ಎಂಬುದು ಒಂದು ವಾದವಾದರೆ ಬೆಳಗ್ಗಿನವರೆಗೂ ಆಟ ನಡೆಯಲೇಬೇಕು ಎಂಬುದು ಕೆಲವರ ವಾದ.

    “ಕಾಲಮಿತಿಗೆ ಒಳಪಡಬೇಕಾದ ಆಟವಾದಲ್ಲಿ ಪ್ರದರ್ಶನದ ಸಮಯ ಕಡಿಮೆಯಾಗುತ್ತದೆ. ಅದರಂತೆ ಪ್ರಸಂಗಗಳನ್ನೂ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಈ ರೀತಿ ಪ್ರದರ್ಶನ ನೀಡಲು ಕೆಲವೇ ಕೆಲವು ಮಂದಿ ಕಲಾವಿದರು ಮಾತ್ರ ಸಾಕಾಗುತ್ತದೆ. ಕಲೆಯನ್ನೆ ನಂಬಿದ ಉಳಿದವರ ಪಾಡೇನು?” ಎಂದು ಕಲಾವಿದರೊಬ್ಬರು ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಬಹುಶಃ ಇದು ಯೋಚಿಸಬೇಕಾದ ವಿಚಾರವೇ. ಇನ್ನು ಕಡಿಮೆ ಸಮಯದ ಪ್ರದರ್ಶನಕ್ಕೆ ವೀಳ್ಯವೂ ಕಡಿಮೆ ಮಾಡಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಈಗಿನ ಮೇಳ ನಿರ್ವಹಣೆಯ ಖರ್ಚಿಗೆ ಹೋಲಿಕೆ ಮಾಡಿದರೆ ಕಡಿಮೆ ವೀಳ್ಯದಲ್ಲಿ ಮೇಳ ನಡೆಸುವ ಬಗೆ ಹೇಗೆ?! ಇದನ್ನೂ ಯೋಚಿಸಬೇಕಾದ ಅಗತ್ಯ ಇದೆ.

    ಯಕ್ಷಗಾನಕ್ಕೆ ಕಾಲಮಿತಿ: ಆ ಬದಲಾವಣೆ ಹೀಗಿದ್ದರೆ ಹೇಗೆ?
    ಯಕ್ಷಗಾನ ವೇಷಧಾರಿಯಾಗಿ ಚಿತ್ರನಟ ರಮೇಶ್ ಅರವಿಂದ್

    ಮೊದಲೆಲ್ಲ ರಾತ್ರಿ ಬಸ್ಸಿಗೆ ಆಟ ನೋಡಲು ಬಂದರೆ ಮತ್ತೆ ಬೆಳಿಗ್ಗೆಯೇ ಹಿಂದೆ ಹೋಗಬೇಕಾದ ಪರಿಸ್ಥಿತಿ. ಆದರೆ ಈಗ ಹಾಗಿಲ್ಲ, ವಾಹನವಿಲ್ಲದ ಮನೆಯೇ ಕಡಿಮೆ. ಹಾಗಾಗಿ ಮಧ್ಯರಾತ್ರಿಯ ನಂತರ ಬೆಳಗ್ಗಿನ ಜಾವಕ್ಕೆ ಪ್ರೇಕ್ಷಕರ ಕೊರತೆ ಬಲುವಾಗಿ ಯಕ್ಷಗಾನವನ್ನು ಕಾಡುತ್ತಿದೆ. ಒಂದೊಮ್ಮೆ ಯಕ್ಷಗಾನ ಕಾಲಮಿತಿಗೆ ಒಳಗಾದಲ್ಲಿ ಕಲಾವಿದರು ತಮ್ಮ ಪಾತ್ರ ಮುಗಿಸಿ ಬೈಕ್/ಕಾರ್​​ನಲ್ಲಿ ತಮ್ಮ ಮನೆಗಳಿಗೆ ಹೊರಡುವರು. ಒಂದು ರೀತಿಯಲ್ಲಿ ಇದು ಒಳ್ಳೆಯದಾದರೂ ನಿದ್ರೆ ತೊರೆದು ಕೆಲವೊಮ್ಮೆ ದೂರ ಪ್ರಯಾಣದ ವೇಳೆ ಅಪಘಾತಗಳಾಗುವ ಸಂಭವ ಹೆಚ್ಟು. ಇದನ್ನು ನಿಯಂತ್ರಿಸುವ ಕ್ರಮ ಹೇಗೆ ಈ ಬಗ್ಗೆ ಕೂಡಾ ಯೋಚಿಸಬೇಕಾಗುತ್ತದೆ.

    ಬದಲಾವಣೆ ಹೀಗಿದ್ದರೆ ಹೇಗೆ?: ಬಹುಶಃ ರಾತ್ರಿಯಿಂದ ಬೆಳಗ್ಗಿನವರೆಗೂ ಪ್ರದರ್ಶನ ನಡೆದರೆ ಅಂದರೆ 10ರಿಂದ 5.30 ಸುಮಾರು ಏಳೂವರೆ ಗಂಟೆಗಳ ಕಾಲದ ಪ್ರದರ್ಶನ. ಈಗ ಕಾಲಮಿತಿಗೆ ಒಳಪಡುವ ಆಟವಾದರೆ ಪ್ರದರ್ಶನದ ಒಟ್ಟು ಸಮಯದಲ್ಲಿ ಹೆಚ್ಚು ಬದಲಾವಣೆ ಮಾಡಿದರೆ ರಾತ್ರಿ 8ರಿಂದ ಬೆಳಗ್ಗಿನ ಜಾವ 2ರವರೆಗೆ ಪ್ರದರ್ಶನ ನೀಡಿದರೆ ಸುಮಾರು 6 ಗಂಟೆ ಕಾಲದ ಪ್ರದರ್ಶನ ನೀಡಬಹುದು. ಇಲ್ಲಿ ಪ್ರಸಂಗದ ಕಥೆಯನ್ನೂ ತುಂಡರಿಸಬೇಕಾದ ಅಗತ್ಯವಿಲ್ಲ. ಕಲಾವಿದರ ಸಂಖ್ಯೆಯಲ್ಲಿಯೂ ಯಾವ ಕಡಿತವಿರುವುದಿಲ್ಲ. ಹಣ ಕೊಟ್ಟು ಆಟ ನೋಡುವವರಿಗೆ ಬೇಕಾಗುವಂತೆ ಅಷ್ಟು ಹೊತ್ತಿನ ಪ್ರದರ್ಶನವೂ ಸಿಕ್ಕಂತಾಗುತ್ತದೆ. ಜೊತೆಗೆ ವೀಳ್ಯದಲ್ಲಿಯೂ ಹೆಚ್ಚಿನ ವ್ಯತ್ಯಾಸ ಮಾಡಬೇಕಾದ ಅಗತ್ಯವಿರುವುದಿಲ್ಲ. ಇನ್ನು ರಾತ್ರಿ ಆಟ ನೋಡಿ ಸ್ವಲ್ಪ ನಿದ್ರೆ ಮಾಡಿ ಮರುದಿನ ಕೆಲಸಕ್ಕೆ ಹೋಗುವವರಿಗೂ ಯಾವ ತೊಂದರೆ ಇರುವುದಿಲ್ಲ. ಈ ಎಲ್ಲಾ ಸಾಧ್ಯತೆ-ಭಾಧ್ಯತೆಗಳನ್ನು ನೋಡಿಕೊಂಡು ಯಕ್ಷಗಾನದ ಸಂಘಟಕರು, ಮೇಳಗಳ ಯಜಮಾನರು, ಕಲಾವಿದರು ಜೊತೆಗೆ ಕಲಾಭಿಮಾನಿಗಳು ಒಂದು ನಿರ್ಧಾರಕ್ಕೆ ಬರುವಲ್ಲಿ ಸಮಯವಂತೂ ಸನಿಹ ಬಂದಿದೆ.

    ಯಕ್ಷಗಾನಕ್ಕೆ ಕಾಲಮಿತಿ: ಆ ಬದಲಾವಣೆ ಹೀಗಿದ್ದರೆ ಹೇಗೆ?

    ರಾತ್ರಿ ಇಡೀ ಆಟ ಬೇಕೇ?; ಕಾಲಮಿತಿ ಯಕ್ಷಗಾನ ಸಾಕೇ?

    ಅಂದಿನ ಪರಿಸ್ಥಿತಿಯೇ ಬೇರೆ, ಈಗ ಹಾಗಿಲ್ಲ: ಯಕ್ಷಗಾನಕ್ಕೆ ಕಾಲಮಿತಿ ಒಳಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts