More

    ಯಕ್ಷಗಾನ ಕಲಾವಿದರ ಸಂಬಳಕ್ಕೆ ಕುತ್ತು

    ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ

    ಕರಾವಳಿಯಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳಿಂದ ಹೊರಡುವ ಮೇಳಗಳ ಆಡಳಿತ, ತಿರುಗಾಟಕ್ಕೆ ಮೊದಲೇ ಕಲಾವಿದರ ಜತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಸಂಬಳ ನೀಡಿಲ್ಲ. ಇದೀಗ ಕೆಲಸವೂ ಇಲ್ಲ, ಸಂಬಂಳವೂ ಇಲ್ಲ ಎಂಬ ಸ್ಥಿತಿಯಲ್ಲಿ ಕಲಾವಿದರು ದಿನಗಳೆಯುವಂತಾಗಿದೆ.

    ಕಳೆದ ವರ್ಷ ಸ್ಪಂದಿಸಿದ್ದ ಸಂಘ, ಸಂಸ್ಥೆಗಳು: ಕಳೆದ ಬಾರಿ ಲಾಕ್‌ಡೌನ್ ಘೋಷಣೆಯಾಗಿ ತಿರುಗಾಟ ನಿಂತದ್ದು ತಿರುಗಾಟದ ಕೊನೆಯ ಘಳಿಗೆಯಲ್ಲಿ. ಆ ಸಂದರ್ಭ ಸಂಘ, ಸಂಸ್ಥೆಗಳು ನೆರವಿಗೆ ಬಂದಿದ್ದರಿಂದ ಕಲಾವಿದರಿಗೆ ಅಷ್ಟೊಂದು ಆರ್ಥಿಕ ಕಷ್ಟ ಬಂದಿರಲಿಲ್ಲ. ಆದರೆ ಈ ಬಾರಿ ಎರಡು ತಿಂಗಳು ಯಕ್ಷಗಾನ ಪ್ರದರ್ಶನ ಸ್ಥಗಿತಗೊಂಡು ಕಲಾವಿದರು ಮನೆಗೆ ಮರಳಿದ್ದಾರೆ. ಯಕ್ಷಗಾನ ಮೇಳಗಳ ತಿರುಗಾಟ ನಿಂತರೂ, ಹರಕೆ ಆಟವಾದ್ದರಿಂದ ಮುಂದಿನ ವರ್ಷ ಮುಂದುವರಿಯುತ್ತದೆ. ಒಪ್ಪಂದ ಪತ್ರದಂತೆ ನಿಕ್ಕಿಯಾದ ಸಂಬಳ ನೀಡಬೇಕು. ಇಲ್ಲದಿದ್ದರೆ ದೇವಸ್ಥಾನದ ಮುಂದೆ ಕೂರಬೇಕಾಗುತ್ತದೆ. ಅಂತಹ ಆರ್ಥಿಕ ಸ್ಥಿತಿಯಲ್ಲಿದ್ದೇವೆ ಎಂದು ಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ.

    ಏನಿದು ಅಗ್ರಿಮೆಂಟ್?
    ಮೇಳದ ಆಡಳಿತ ಮತ್ತು ಕಲಾವಿದರ ಅಗ್ರಿಮೆಂಟ್ ಪ್ರಕಾರ, 6 ತಿಂಗಳ ಅವಧಿಯಲ್ಲಿ ಒಂದು ಮೇಳದಲ್ಲಿರುವ ಕಲಾವಿದರು ಇನ್ನೊಂದು ಮೇಳಕ್ಕೆ ಹೋಗಬಾರದು. ಅತಿಥಿ ಕಲಾವಿದರಾಗಿಯೂ ಸೇವೆ ಮಾಡುವಂತಿಲ್ಲ. 6 ತಿಂಗಳಲ್ಲಿ ಆರು ದಿನ ರಜೆ. ಉಳಿದಂತೆ ಆರೋಗ್ಯ ಸಮಸ್ಯೆ, ಮನೆ ಸಮಸ್ಯೆ, ಇತರ ಅವಶ್ಯಕತೆಗಳಿಗೆ ರಜೆ ಮಾಡಿದರೆ ಸಂಬಳ ಕಡಿತ. ರಜೆ ವಿಷಯ ಮೇಳದ ಯಜಮಾನರಿಗೆ ತಿಳಿಸದಿದ್ದರೆ, ಡಬ್ಬಲ್ ಸಂಬಳ ಕಟ್. ಕಲಾವಿದರ ಗೈರಲ್ಲಿ ಇನ್ನೊಬ್ಬ ಕಲಾವಿದ ವೇಷ ಮಾಡಿದರೆ, ಆತನಿಗೆ ಹೆಚ್ಚುವರಿ ಸಂಭಾವನೆಯೂ ಇಲ್ಲ. ಇನ್ನು ಆರು ತಿಂಗಳ ತಿರುಗಾಟದಲ್ಲಿ, ಹಲವು ನೆಪವೊಡ್ಡಿ 10 ಸಾವಿರ ರೂ.ಗಿಂತ ಹೆಚ್ಚು ಮೊತ್ತವನ್ನು ಕಲಾವಿದರಿಂದ ಪೀಕಲಾಗುತ್ತದೆ ಎಂಬ ಆರೋಪವೂ ಇದೆ. ಕಲಾವಿದ ನಿವೃತ್ತವಾದರೆ ಅಥವಾ ಅನಾರೋಗ್ಯ ಮುಂತಾದ ಸಮಸ್ಯೆಯಿಂದ ಬಳಲಿದರೆ ಬೀದಿಗೆ ಬರುವ ಸ್ಥಿತಿಯಿದೆ.

    ಪ್ಯಾಕೇಜ್ ನೀಡಿದ ಪಾವಂಜೆ ಮೇಳ
    ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಮೇಳ ಮಾತ್ರ ಕಲಾವಿದರಿಗೆ ಪ್ಯಾಕೇಜ್ ನೀಡಿದೆ. ಕಳೆದ ಲಾಕ್‌ಡೌನ್ ಸಮಯದಲ್ಲಿಯೂ ಕಲಾವಿದರಿಗೆ ಪ್ಯಾಕೇಜ್ ನೀಡಲಾಗಿತ್ತು. ಅಕ್ಕಿ, ಬೇಳೆ ಜತೆಗೆ ನಗದನ್ನೂ ನೀಡಿದ್ದರು. ದಕ್ಷಿಣ ಕನ್ನಡ, ಉಡುಪಿ ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಕಲಾವಿದರಿಗೂ ಸಹಾಯ ನಿಡಲಾಗಿತ್ತು. ಪಾವಂಜೆ ಮೇಳ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿಲ್ಲ. ಆದರೂ, ಮೊದಲ ವರ್ಷದ ತಿರುಗಾಟ ಕರೊನಾ ಹಿನ್ನೆಲೆಯಲ್ಲಿ ನಿಂತರೂ, ಕಲಾವಿದರ ಅಗ್ರಿಮೆಂಟ್ ಪ್ರಕಾರ ಕೊಡಬೇಕಾದ ಹಣ ಸಂದಾಯವಾಗಿತ್ತು.

    ಶ್ರೀಘ್ರ ಸಂದನೆ, ಸಚಿವ ಭರವಸೆ
    ಕಲಾವಿದರ ಸ್ಥಿತಿ ಗಮನಕ್ಕೆ ಬಂಂದಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಜಯವಾಣಿಗೆ ತಿಳಿಸಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನದ ಮೇಳಗಳಲ್ಲಿ ಅಗ್ರಿಮೆಂಟ್ ಪ್ರಕಾರ ಕಲಾವಿದರಿಗೆ ಸಂಬಳ ನೀಡಿಲ್ಲ. ಜೀವನ ಕಷ್ಟವಾಗುತ್ತಿದೆ ಎಂದು ಕಲಾವಿದರು ಮನವಿ ಮಾಡಿದ್ದಾರೆ. ಕಮಿಷನರ್ ಜತೆ ಮಾತನಾಡಿ, ಆದೇಶ ಹೊರಡಿಸಿ ನ್ಯಾಯಯುತ ತೀರ್ಮಾನ ತೆಗೆದುಕೊಳ್ಳುತ್ತೇನೆ. ಕಲಾವಿದರಿಗೆ ಹಾಗೂ ಹೊರೆ ಕೆಲಸಗಾರರಿಗೆ ನೀಡುತ್ತಿದ್ದ ಸಹಾಯಧನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.

    ತಿರುಗಾಟಕ್ಕೆ ಮೊದಲೇ ವೇತನ ನಿಗದಿಯಾಗಿ ಒಪ್ಪಂದಕ್ಕೆ ಸಹಿ ಹಾಕುತ್ತೇವೆ. ಕರೊನಾ ಕಾಟದಿಂದ ಮೇಳದ ತಿರುಗಾಟ ನಿಂತರೆ ಅಗ್ರಿಮೆಂಟ್ ಪ್ರಕಾರ ಕಲಾವಿದರಿಗೆ ಪೂರ್ಣವೇತನ ನೀಡುವುದು ನ್ಯಾಯ. ಅವರು ದಿನಗೂಲಿಯಂತೆ ವೇತನ ನೀಡುವುದಾದರೆ ಅಗ್ರಿಮೆಂಟ್ ಅಗತ್ಯವೇ ಇಲ್ಲ. ಕೆಲಸ ಮಾಡಿದರೆ ಸಂಬಳ, ರಜೆ ಮಾಡಿದರೆ ಇಲ್ಲ ಎನ್ನಲು ಕಲಾವಿದರು ಕಾರ್ಮಿಕರಲ್ಲ.
    ಸಚಿನ್ ಕುಮಾರ್, ವೃತ್ತಿಪರ ಯಕ್ಷಗಾನ ಕಲಾವಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts