More

    44 ಮಕ್ಕಳನ್ನು ಹಡೆದವ್ವ ಈ 40 ರ ಮಹಿಳೆ; ಅವಳಿ, ತ್ರಿವಳಿಯ ಜತೆ ನಾಲ್ಕು ಮಕ್ಕಳನ್ನೂ ಒಟ್ಟಿಗೇ ಹೆತ್ತಿದ್ದು ಉಂಟು; ನೀವು ಓದಲೇಬೇಕು ಈಕೆಯ ಸಂಕಟದ ಕತೆಯ…

    ಮರಿಯಮ್​ ನಬಾಟಾಂಜಿ…ಉಗಾಂಡಾದ ಮಹಿಳೆ. 36 ವರ್ಷಕ್ಕೆ 44 ಮಕ್ಕಳನ್ನು ಹೆತ್ತು ಜಗತ್ತೇ ಅಚ್ಚರಿ ಪಡುವಂತೆ ಮಾಡಿದವರು.

    ಮರಿಯಮ್​ ನಬಾಟಾಂಜಿ ತಮ್ಮ 12ನೇ ವರ್ಷದಲ್ಲಿ ತಮಗಿಂತ ನಾಲ್ಕುಪಟ್ಟು ಜಾಸ್ತಿ ವಯಸ್ಸಾದವನನ್ನು ಮದುವೆಯಾಗುತ್ತಾರೆ. ಹಾಗೇ ತಮ್ಮ 13ನೇ ವಯಸ್ಸಿನಲ್ಲಿ ಮೊದಲು ಅವಳಿ ಮಕ್ಕಳನ್ನು ಪಡೆಯುತ್ತಾರೆ.
    ಅಲ್ಲಿಂದ ಶುರುವಾದ ಹೆರಿಗೆ ಪಯಣ 36 ನೇ ವರ್ಷದವರೆಗೂ ಸಾಗಿದ್ದು ಈಗ ಮರಿಯಮ್​ 44 ಮಕ್ಕಳ ಮಹಾತಾಯಿ. ವಿಚಿತ್ರವೆಂದರೆ ಇವರಿಗೆ ಹೆಚ್ಚಿನ ಬಾರಿ ಹುಟ್ಟುವುದು ಅವಳಿಯೋ, ತ್ರಿವಳಿಯೋ ಆಗಿರುತ್ತಿತ್ತು. ಅಲ್ಲದೆ ನಾಲ್ಕು ಮಕ್ಕಳು ಒಟ್ಟಿಗೆ ಜನಿಸಿದ್ದೂ ಇದೆ.

    ಕಳೆದ ನಾಲ್ಕು ವರ್ಷಗಳ ಹಿಂದೆಯೇ ಮರಿಯಮ್​ ಅವರ ಪತಿ ಆಕೆಯನ್ನು ಬಿಟ್ಟು ಹೋಗಿದ್ದಾರೆ. ಅಂದಿನಿಂದಲೂ ತನ್ನ 44 ಮಕ್ಕಳ ಜವಾಬ್ದಾರಿಯನ್ನು ಹೊತ್ತು ಜೀವಿಸುತ್ತಿದ್ದಾರೆ.

    40 ವರ್ಷದ ಈಕೆಯನ್ನು ದೈವೀ ಅಮ್ಮ ಎಂದೇ ಕರೆಯಲಾಗುತ್ತಿದೆ. ಆರು ಬಾರಿ ಅವಳಿ ಮಕ್ಕಳು, ನಾಲ್ಕು ಬಾರಿ ತ್ರಿವಳಿಗಳು ಹಾಗೂ ಮೂರು ಬಾರಿ ನಾಲ್ಕು ಮಕ್ಕಳನ್ನು ಹೆತ್ತಿದ್ದಾರೆ. ಎಲ್ಲ ಸೇರಿ ಒಟ್ಟು 44 ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಪತಿ ಬಿಟ್ಟು ಹೋದ ಮೇಲೆ ಮಕ್ಕಳನ್ನು ಸಾಕಲು ಮರಿಯಮ್​ ದಣಿವರಿಯದೆ ದುಡಿಯುತ್ತಿದ್ದಾರೆ. ಮಕ್ಕಳ ಹೊಟ್ಟೆ-ಬಟ್ಟೆಗೆ, ಔಷಧಿ ಖರ್ಚು ಎಲ್ಲದಕ್ಕೂ ಇವರೇ ಹಣ ಹೊಂದಿಸಬೇಕು. ಕಡು ಬಡತನದ ಮಧ್ಯೆಯೂ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ  ಮಾಡುತ್ತಿದ್ದಾರೆ ಈ ಅಮ್ಮ.

    ಮರಿಯಮ್​ ಕೇಶಾಲಂಕಾರ, ಸಮಾರಂಭಗಳ ಸಿದ್ಧತೆ ಸೇರಿ ಎರಡು ಮೂರು ವಿಧದ ಕೆಲಸಗಳನ್ನು ಮಾಡುತ್ತಾರೆ. ಅದರಿಂದ ಬಂದ ಹಣದಲ್ಲೇ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಅವರ ಶಾಲೆ ಶುಲ್ಕ, ಯೂನಿಫಾರ್ಮ್​, ಆಹಾರಗಳಿಗೆ ಹೆಚ್ಚಿನ ಹಣ ಖರ್ಚಾಗುತ್ತಿದೆ. ಇಷ್ಟಾದರೂ ತನಗೆ ಸಿಗದೆ ಇರುವ ಸೌಕರ್ಯವೆಲ್ಲ ತನ್ನ ಮಕ್ಕಳಿಗೆ ಸಿಗಬೇಕು ಎಂಬುದು ಈ ತಾಯಿಯ ಆಶಯ.

    ಬೆಳೆದು ದೊಡ್ಡವರಾಗಿ ಪದವೀಧರರಾದ ಮಕ್ಕಳ ಫೋಟೋವನ್ನು ಹೆಮ್ಮೆಯಿಂದ ತಮ್ಮ ಮನೆಯ ಗೋಡೆಗೆ ತೂಗಿ ಹಾಕಿಕೊಂಡಿದ್ದಾರೆ. ಮಕ್ಕಳೆಲ್ಲ ಶಿಕ್ಷಣವಂತರಾಗಬೇಕು ಎಂದು ಮರಿಯಮ್​ ಬಯಸುತ್ತಿದ್ದರೂ ಆಕೆಯ 23 ವರ್ಷದ ಮಗನೋರ್ವ ಶಾಲೆಯನ್ನು ಬಿಟ್ಟು ಕುಟುಂಬಕ್ಕೆ ಆಸರೆಯಾಗಲು ನಿರ್ಧರಿಸಿದ್ದಾನೆ.

    ನನ್ನ ಅಮ್ಮ ಕೆಲಸಗಳ ಮಧ್ಯೆ ಕಂಗೆಟ್ಟು ಹೋಗಿದ್ದಾರೆ. ಅವರು ಕಷ್ಟ ಪಡುವುದನ್ನು ನೋಡಲಾಗುತ್ತಿಲ್ಲ. ಹಾಗಾಗಿ ನಾನು ಸಹಾಯಕ್ಕೆ ನಿಲ್ಲಲು ನಿರ್ಧರಿಸಿದ್ದೇನೆ ಎನ್ನುತ್ತಾನೆ ಮಗ ಇವಾನ್​ ಕೈಬುಕಾ.
    ಉಗಾಂಡಾದ ಒಂದು ಪುಟ್ಟ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿರುವ ಮರಿಯಮ್​ ಅವರ ಸ್ಥಿತಿ ನಿಜಕ್ಕೂ ಮರುಕಹುಟ್ಟಿಸುವಂಥದ್ದು.

    ಬಾಲ್ಯದಲ್ಲಿ ಬರೀ ದುಃಖ ಕಂಡಿದ್ದ ಮರಿಯಮ್​
    ಮರಿಯಮ್​ ಅವರ ಬಾಲ್ಯ ತುಂಬ ದುಃಖ, ಕಷ್ಟದಿಂದ ಕೂಡಿತ್ತು. ಆಕೆ ಜನಿಸಿ ಮೂರೇ ದಿನಕ್ಕೆ ತಾಯಿ, ಮಕ್ಕಳು  (ಮರಿಯಮ್​ ಸೇರಿ ಒಟ್ಟು ಆರು ಮಂದಿ) ಹಾಗೂ ಪತಿಯನ್ನು ಬಿಟ್ಟು ಹೋಗಿದ್ದರು. ಬಳಿಕ ಮರಿಯಮ್​ ತಂದೆ ಬೇರೆ ಮದುವೆಯಾದರು. ಆದರೆ ಆ ಮಲತಾಯಿ ಮರಿಯಮ್​ಳ ಸೋದರರಿಗೆಲ್ಲ ವಿಷಕೊಟ್ಟು ಕೊಂದಳು. ಆ ವೇಳೆ ಮರಿಯಮ್ ಸಂಬಂಧಿಕರ ಮನೆಯಲ್ಲಿ ಇದ್ದಿದ್ದರಿಂದ ಅದೃಷ್ಟವಶಾತ್​ ಬದುಕುಳಿದರು.

    ನನಗೆ ಆಗ ಬರೀ ಏಳು ವರ್ಷವಾಗಿತ್ತು. ನನ್ನ ಸೋದರರು ಯಾಕೆ ಸತ್ತುಹೋದರು ಎಂದು ಆಗ ನನಗೆ ಅರ್ಥವಾಗಿರಲಿಲ್ಲ. ಬಳಿಕ ಸಂಬಂಧಿಕರಿಂದ ನನಗೆ ಎಲ್ಲವೂ ಗೊತ್ತಾಯಿತು. ನಾನು ನನ್ನ ಕುಟುಂಬದಿಂದ ಆಗಲೇ ದೂರವಾಗಿ ಬದುಕಲು ಶುರುಮಾಡಿದೆ ಎಂದು ಮರಿಯಮ್ ತಿಳಿಸಿದ್ದಾರೆ.

    ಮರಿಯಮ್​ಗೆ 6 ಮಕ್ಕಳು ಸಾಕು ಎಂದು ಇತ್ತು. ಆದರೆ ಆಕೆಯಲ್ಲಿರುವ ಸಮಸ್ಯೆಯಿಂದ ಹೀಗೆ ಹೆಚ್ಚಿನ ಬಾರಿ ಅವಳಿ, ತ್ರಿವಳಿ, ನಾಲ್ಕು ಮಕ್ಕಳು ಹುಟ್ಟುವ ಮೂಲಕ ಇಷ್ಟೊಂದು ಸಂಖ್ಯೆಯಲ್ಲಿ ಶಿಶುಗಳನ್ನು ಹೆರಬೇಕಾಯಿತು. 23 ವರ್ಷಕ್ಕೆ 25 ಮಕ್ಕಳನ್ನು ಹೊಂದಿದ್ದ ಮರಿಯಮ್​ ತಮ್ಮ ಕೊನೇ ಹೆರಿಗೆಯಲ್ಲಿ ಹುಟ್ಟಿದ್ದ ಅವಳಿಯನ್ನು ಕಳೆದುಕೊಂಡಿದ್ದಾರೆ. ಆ ಮಕ್ಕಳು ಬದುಕಲಿಲ್ಲ.

    ಮರಿಯಮ್​ ಅವರಿಗೆ ಹೆರಿಗೆ ಮಾಡಿಸಿದ ವೈದ್ಯ ಡಾ.ಚಾರ್ಲ್ಸ್​ ಕಿಗ್ಗುಂಡು ಅವರು ಪ್ರತಿಕ್ರಿಯೆ ನೀಡಿದ್ದು, ಮರಿಯಮ್​ಗೆ ಆನುವಂಶಿಕವಾಗಿ ಬಂದ ಸಮಸ್ಯೆಯೊಂದರಿಂದ ಹೀಗೆ ಒಂದು ಬಾರಿಗೆ ಅವಳಿ, ತ್ರಿವಳಿ ಮಕ್ಕಳು ಹುಟ್ಟಿವೆ. ಅಂಡೋತ್ಪತ್ತಿ ಪ್ರಮಾಣ ಹೆಚ್ಚಾಗಿ ಒಂದು ಅವಧಿಯಲ್ಲಿ ಅನೇಕ ಮೊಟ್ಟೆಗಳು ಬಿಡುಗಡೆಯಾಗುವ ಪರಿಣಾಮ ಹೀಗಾಗಿದೆ ಎಂದಿದ್ದಾರೆ.

    ಬಳಿಕ ಬೇರೆ ದಾರಿ ಕಾಣದೆ ಆಕೆಯ ಗರ್ಭಾಶಯವನ್ನು ಒಳಗಿನಿಂದಲೇ ಕತ್ತರಿಸುವ ಮೂಲಕ ಗರ್ಭ ಧರಿಸುವುದನ್ನು ವೈದ್ಯರು ನಿಲ್ಲಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts