More

    ವಿಶ್ವ ಯೋಗ ದಿನಕ್ಕೆ ಆನ್‌ಲೈನ್ ರೂಪ

    ಹರೀಶ್ ಮೋಟುಕಾನ, ಮಂಗಳೂರು

    ‘ಮನೆಯಲ್ಲೇ ಯೋಗ, ಕುಟುಂಬದೊಂದಿಗೆ ಯೋಗ’
    – ಇದು 2020ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪರಿಕಲ್ಪನೆ. ಕರೊನಾ ಹಾವಳಿ ಪರಿಣಾಮ ಈ ಬಾರಿ ಆನ್‌ಲೈನ್ ಮೂಲಕ ಯೋಗ ದಿನಾಚರಣೆ ನಡೆಸಲು ದೇಶದೆಲ್ಲೆಡೆ ಸಿದ್ಧತೆ ನಡೆದಿದೆ.
    ಜೂನ್ 21ರಂದು ಬೆಳಗ್ಗೆ 7ಕ್ಕೆ ಎಲ್ಲರೂ ಮನೆಯಲ್ಲೇ ಮಾಸ್ಕ್ ಧರಿಸಿ, ದೈಹಿಕ ಅಂತರ ಪಾಲನೆಯೊಂದಿಗೆ ಯೋಗ ದಿನ ಆಚರಿಸಿ ಎಂದು ಆಯುಷ್ ಸಚಿವಾಲಯ ಹೇಳಿದೆ. ಯೋಗ ದಿನದಂದು ಶಿಷ್ಟಾಚಾರದಂತೆ ಯೋಗ ಮಾಡಬೇಕಿದೆ. ಅದಕ್ಕಾಗಿ ಕರಾವಳಿಯಲ್ಲೂ ಯೋಗ ಶಿಕ್ಷಕರು ಆನ್‌ಲೈನ್ ಮೂಲಕ ತರಬೇತಿ ಆರಂಭಿಸಿದ್ದಾರೆ.
    2015 ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದ್ದರು. ಪ್ರತಿವರ್ಷ ವಿಶೇಷ ಪರಿಕಲ್ಪನೆಯೊಂದಿಗೆ ಯೋಗ ದಿನ ಆಚರಿಸಲಾಗುತ್ತಿದೆ. ಜೂನ್ ಆರಂಭದಿಂದಲೇ ಇದಕ್ಕೆ ತರಬೇತಿ, ಸಿದ್ಧತೆಗಳು ಆರಂಭಗೊಳ್ಳುತ್ತವೆ. ಈ ಬಾರಿ ಕರೊನಾ ಕಾರಣ ಮನೆಯಲ್ಲೇ ಯೋಗ ಮಾಡಲು ಸಿದ್ಧತೆಗಳಾಗುತ್ತಿವೆ. ಕೆಲವು ಯೋಗ ಶಿಕ್ಷಕರು ಈ ವರ್ಷ ದೊಡ್ಡಮಟ್ಟದಲ್ಲಿ ಯೋಗ ದಿನ ಆಚರಿಸುವ ಚಿಂತನೆ ಮಾಡಿದ್ದರು. ಕರೊನಾ ಮಹಾಮಾರಿ ಅದಕ್ಕೆ ತಡೆಯಾಗಿದೆ ಎಂದು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಯೋಗಾಸಕ್ತರಿಂದ ಮನೆಯಲ್ಲೇ ಅಭ್ಯಾಸ
    ಕರಾವಳಿಯಲ್ಲೂ ಯೋಗ ಶಿಕ್ಷಕರು ಆನ್‌ಲೈನ್ ಮೂಲಕ ಯೋಗ ತರಬೇತಿ ಆರಂಭಿಸಿದ್ದಾರೆ. ಯೋಗಾಸಕ್ತರು ಮನೆಯಲ್ಲೇ ಕುಳಿತು ಯೋಗ ಅಭ್ಯಾಸ ಮಾಡುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ನಿಯಮ ಪಾಲಿಸಿಕೊಂಡು ಆನ್‌ಲೈನ್ ಮೂಲಕ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಬಹುತೇಕ ಯೋಗ ಶಿಕ್ಷಕರು ಸಜ್ಜಾಗಿದ್ದಾರೆ. ದಿನದಲ್ಲಿ ಮೂರರಿಂದ ನಾಲ್ಕು ತರಗತಿಗಳನ್ನು ಆನ್‌ಲೈನ್ ಮೂಲಕ ನೀಡುತ್ತಿದ್ದಾರೆ. ಇದಕ್ಕೆ ಯೋಗಾಸಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

    ಉಪನ್ಯಾಸ ಸರಣಿ
    ಯೇನೆಪೋಯ ಸಂಸ್ಥೆ ಮತ್ತು ಆವಿಷ್ಕಾರ್ ಯೋಗ ಶಿಕ್ಷಣ ಕೇಂದ್ರ ಜೂನ್ 21ರಂದು ಆನ್‌ಲೈನ್ ಮೂಲಕ ನಿರಂತರ 12 ಗಂಟೆಯ ಯೋಗ ಉಪನ್ಯಾಸ ಸರಣಿ ಆಯೋಜಿಸಿದೆ. ಬೆಳಗ್ಗೆ 8.30ರಿಂದ ರಾತ್ರಿ 8.30ರ ತನಕ ಯೋಗ ವಿಷಯದಲ್ಲಿ 10 ಯೋಗ ಪರಿಣತರು ಪ್ರಾತ್ಯಕ್ಷಿತೆ ಮೂಲಕ ಉಪನ್ಯಾಸ ನೀಡಲಿದ್ದಾರೆ. ಸ್ಥಳೀಯ ಟಿವಿ ಚಾನೆಲ್, ಯೂ ಟ್ಯೂಬ್, ಫೇಸ್‌ಬುಕ್ ಮೂಲಕ ನೇರ ಪ್ರಸಾರ ಆಗಲಿದೆ. ಗರಿಷ್ಠ ಸಂಖ್ಯೆಯ ಪ್ರೇಕ್ಷಕರನ್ನು ತಲುಪುವುದು ನಮ್ಮ ಉದ್ದೇಶ ಎಂದು ಆವಿಷ್ಕಾರ್ ಯೋಗ ಶಿಕ್ಷಣ ಕೇಂದ್ರದ ಶಿಕ್ಷಕ ಕುಶಾಲಪ್ಪ ಜಿ.ಎನ್.ತಿಳಿಸಿದ್ದಾರೆ.

    ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವಭಾವಿಯಾಗಿ ಈಗಾಗಲೇ ಆನ್‌ಲೈನ್ ಮೂಲಕ ಯೋಗ ತರಬೇತಿ ತರಗತಿ ಆರಂಭಿಸಲಾಗಿದೆ. ದಿನದಲ್ಲಿ ನಾಲ್ಕು ತರಗತಿಗಳನ್ನು ನಡೆಸಲಾಗುತ್ತಿದೆ. ‘ಮನೆಯಲ್ಲೇ ಯೋಗ, ಕುಟುಂಬದೊಂದಿಗೆ ಯೋಗ’ ಪರಿಕಲ್ಪನೆಗೆ ಪೂರಕವಾಗಿ ಯೋಗ ದಿನದ ಶಿಷ್ಟಾಚಾರದಂತೆ ಯೋಗ ಪಾಠ ಮಾಡಲಾಗುತ್ತಿದೆ. ಶಿಬಿರಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
    ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ
    ಯೋಗ ಶಿಕ್ಷಕರು, ಮಂಗಳೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts