More

    ಮಹಿಳೆಯರು ಮೂಢನಂಬಿಕೆಯಿಂದ ದೂರವಿರಿ: ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಭಿಮತ

    ಮಂಡ್ಯ: ಮಹಿಳೆಯರು ವೈಜ್ಞಾನಿಕ ಆಲೋಚನೆಗಳೊಂದಿಗೆ ಮೂಢನಂಬಿಕೆಗಳನ್ನು ದೂರವಿರಬೇಕಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.
    ನಗರದ ಸರ್ಕಾರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ, ಯುವ ರೆಡ್‌ಕ್ರಾಸ್ ಘಟಕ ಹಾಗೂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ ಎಂಬ ನಾಣ್ನುಡಿ ಸತ್ಯವನ್ನು ಅರಿಯಬೇಕಿದೆ. ಆಧುನಿಕ ಯುಗದಲ್ಲಿ ವೈಜ್ಞಾನಿಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದರು.
    ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುತ್ತಾ ಜನಸಂಖ್ಯೆ ಹೆಚ್ಚಳಿಂದ ಆಗುವ ಲಾಭ ಮತ್ತು ನಷ್ಟವನ್ನು ಅರಿಯಲಾಗುತ್ತಿದೆ. ಜಗತ್ತಿನಲ್ಲಿ ಜನಸಂಖ್ಯೆಯನ್ನು ಮಾನವ ಸಂಪತ್ತು ಎಂದು ಪರಿಗಣಿಸಲಾಗಿದೆ. ಅವುಗಳನ್ನು ಬಳಸಿಕೊಂಡು ಅಭಿವೃದ್ದಿಯತ್ತ ಸಾಗುವ ವೈಜ್ಞಾನಿಕ ಚಿಂತನೆಗಳು ಚರ್ಚೆಗೆ ಬರುತ್ತಿವೆ. ಜಗತ್ತಿನ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರು ಜಾಗೃತರಾಗಬೇಕಿದೆ. ಜತೆಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಾಧನೆ ಮಾಡಬೇಕಿದೆ ಎಂದು ಹೇಳಿದರು.
    ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕ ಕೆ.ಟಿ.ಹನುಮಂತು ಮಾತನಾಡಿ, ಹೆಚ್ಚುತ್ತಿರುವ ವಿಶ್ವ ಜನಸಂಖ್ಯೆ ಮಾನವನ ಉಳಿವಿಗೆ ಬೆದರಿಕೆಯಾಗುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಜನಸಂಖ್ಯೆಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕ ಹಿತಾಸಕ್ತಿಗಳನ್ನು ಪರಿಹರಿಸಲು ಮತ್ತು ಜನರಿಗೆ ಶಿಕ್ಷಣ ನೀಡುವ ಉದ್ದೇಶದಿಂದ 1987ರಲ್ಲಿ ವಿಶ್ವದ ಜನಸಂಖ್ಯೆಯು 500 ಕೋಟಿ ತಲುಪಿದಾಗ ದಿನ ಅಸ್ತಿತ್ವಕ್ಕೆ ಬಂದಿತು ಎಂದು ನುಡಿದರು.
    2017ರಲ್ಲಿ ವಿಶ್ವದ ಜನಸಂಖ್ಯೆಯು ಸುಮಾರು 700 ಕೋಟಿ ಆಗಿತ್ತು. 2023ರಲ್ಲಿ 804 ಕೋಟಿ ಎಂದು ವರದಿಯಾಗಿದೆ. ಅಧಿಕ ಜನಸಂಖ್ಯೆಯ ಕಾರಣ, ವಿಶ್ವದ ನೈಸರ್ಗಿಕ ಸಂಪನ್ಮೂಲಗಳು ಸಮರ್ಥನೀಯ ದರದಲ್ಲಿ ಪ್ರತಿದಿನ ಕ್ಷೀಣಿಸುತ್ತಿವೆ. ಲಿಂಗಾನುಪಾತದ ಸಮಸ್ಯೆಯಿಂದ ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ ಎಂದು ಮಂಡ್ಯ ಜಿಲ್ಲೆಯಲ್ಲಿ ದೇವರ ಮೊರೆಯೋಗಿ ಪಾದಯಾತ್ರೆಯು ನಡೆದಿದೆ. ಕೃಷಿಕ ಕುಟುಂಬಸ್ಥರಿಗೆ ಮದುವೆ ಯಾಗಲು ಹೆಣ್ಣುಮಕ್ಕಳು ಸಿಗುತ್ತಿಲ್ಲ ಎನ್ನುವುದು ಆತಂಕಕಾರಿ ಬೆಳವಣಿಗೆ. ಪ್ರಸ್ತುತ ವಿಶ್ವದ ಜನಸಂಖ್ಯೆ 7.8 ಬಿಲಿಯನ್ ಇದೆ. ಚೀನಾ ದೇಶವನ್ನು ಭಾರತ ಹಿಂದಿಕ್ಕಿದೆ. ಪ್ರಕೃತಿಯಲ್ಲಿ ಜೀವರಾಶಿಗಳು ಬದುಕಲಿಕ್ಕೆ ಇರುವುದೊಂದೆ ಭೂಮಿ. ಅನ್ಯ ಗ್ರಹಗಳಲ್ಲಿ ಬದುಕಲು ಸಂಶೋಧನೆಗಳು ನಡೆಯುತ್ತಿವೆ. ಸಧ್ಯಕ್ಕೆ ಭೂಮಿಯೊಂದೇ ಆಧಾರ. ವೈವಿಧ್ಯಮಯ ಜೀವರಾಶಿಗಳೊಂದಿಗೆ ಮನುಷ್ಯ ಬದುಕು ನಡೆಸಬೇಕಿದೆ ಎಂದು ನುಡಿದರು.
    ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಎನ್.ಜಿ.ವೇಣುಗೋಪಾಲ್ ವಿಶ್ವ ಜನಸಂಖ್ಯಾ ದಿನಾಚರಣೆ ಬಗ್ಗೆ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಪ್ರೊ.ಆರ್.ದಶರಥ, ಯುವ ರೆಡ್‌ಕ್ರಾಸ್ ಘಟಕದ ಡಾ.ಸಂತೋಷ್‌ಕುಮಾರ್, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವರದರಾಜೇಗೌಡ, ಪ್ರೊ.ಮಹೇಶ್, ಡಾ.ಮಂಗಳಾ, ಡಾ.ಆಶಾ, ರೆಡ್‌ಕ್ರಾಸ್‌ನ ಶಿವಲಿಂಗಯ್ಯ, ರಾಮು, ಜಗದೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts