More

    ಅಮ್ಮನ ಬೆದರಿಕೆಗೆ ಬಗ್ಗಿ ಜಾಣನಾದ ತಮ್ಮ!: ಶೈಲಜಾ ಕೇಕಣಾಜೆ

    ಅಮ್ಮನೆಂದರೇ ಹಾಗೆ- ವರ್ಣನೆಗೆ ನಿಲುಕದ, ಹೋಲಿಸಲಾಗದ ಜಗತ್ತಿನ ಒಂದು ಪದ. ನವ ಮಾಸ ಉದರದಲ್ಲಿ ಪೋಷಿಸಿ ಅವಳು ತನ್ನೆಲ್ಲ ಪ್ರೀತಿ, ಕನಸುಗಳನ್ನು ಧಾರೆಯೆರೆದು ಮಗುವನ್ನು ಬೆಳೆಸುತ್ತಾಳೆ. ಅವಳ ರಕ್ತ ಮಾಂಸವನ್ನು ಹಂಚಿಕೊಂಡು ಹುಟ್ಟುವ ನಮಗೆ‌, ಅವಳು ಕೊಡುವ ಜನ್ಮ ಎನ್ನುವುದೇ ತಾಯಿ ನೀಡುವ ಅತಿ ದೊಡ್ಡ ಬಳುವಳಿ. ತನ್ನೆಲ್ಲ ಕಷ್ಟ-ಇಷ್ಟಗಳ ನಡುವೆ ಒಡಲ ಕುಡಿಯನ್ನು ಪೊರೆಯುವ ತಾಯಿಯ ಸಹನೆ, ತ್ಯಾಗ, ಮಮತೆ, ಭರವಸೆ ಹಾಗೂ ಕರುಣೆಗಳು ಭೂಮಿ ತೂಕವುಳ್ಳದ್ದು. ಅಮ್ಮನೆಂಬ ಸಂತೋಷದ ಕಡಲನ್ನು ಅರಿಯಲು ಅನುಭವಿಸಿಯೇ ಆಗಬೇಕಷ್ಟೆ.

    ನಾನು ಚಿಕ್ಕವಳಿದ್ದಾಗ ಅಮ್ಮನ ಮೂಲಕವೇ ಬೇಡಿಕೆಗಳು ಅಪ್ಪನನ್ನು ತಲುಪುತ್ತಿದ್ದವು. ತುಂಬು ಕುಟುಂಬದ ದೊಡ್ಡ ಸೊಸೆಯಾಗಿ ಎಲ್ಲವನ್ನೂ ಜಗಳಕ್ಕೆಡೆಯಾಗದಂತೆ ನಿಭಾಯಿಸಿದ ನನ್ನಮ್ಮ ಸದಾ ಮೌನಿಯೇ… ತಮ್ಮನೊಡನೆ ಜಗಳವಾದಾಗ,‌ಕದ್ದು ಮಾವಿನ ಮರಕ್ಕೆ ಕಲ್ಲೆಸೆದಾಗ ಕೆಸರಾಟವಾಡಿ ಮನೆಯೆಲ್ಲ ಓಡಾಡಿದಾಗ ಅಪ್ಪನ ಕೆಂಗಣ್ಣಿನ ರಕ್ಷಣೆಗೆ ಅಮ್ಮನ ಸೆರಗಿತ್ತು.

    ನನಗಿಂತ ಮೂರು ವರ್ಷ ಹಿರಿಯನಾದ ಅಣ್ಣ ಶಾಲೆಗೆ ಸೇರಿದ ಸಂದರ್ಭ.. ಮೊದಲನೆಯ ಮಗನಾದ್ದರಿಂದ ಅಪ್ಪನಿಗೆ ತುಂಬಾ ಮುದ್ದು. ಒಂದು ಫರ್ಲಾಂಗ್ ದೂರವಿದ್ದ ಶಾಲೆಗೆ ದಿನಾ ಕರೆದುಕೊಂಡು ಹೋದರೆ ಅವರು ವಾಪಸ್ ತಿರುಗಿ ಬರುವಾಗ ಅಳುತ್ತ ಮತ್ತೆ ಮನೆಗೆ ಬರುತ್ತಿದ್ದ. ಎಷ್ಟು ಸಂಭಾಳಿಸಿದರೂ ಏನೇನು ಉಪಾಯ ಮಾಡಿದರೂ ಶಾಲೆಯಲ್ಲಿ ಕೂರುತ್ತಲೇ ಇರಲಿಲ್ಲವಂತೆ. ಕೊನೆಗೆ ರೋಸಿ ಹೋಗಿ ಎರಡು ತಿಂಗಳ ಪ್ರಯತ್ನದ ನಂತರ ಅಪ್ಪ ಕೈಚೆಲ್ಲಿ ಕುಳಿತರಂತೆ. ಅಮ್ಮನಿಗೊ ಮನೆಯಲ್ಲಿ ದನಗಳ ಚಾಕರಿ, ಅಡುಗೆ, ಪೂಜಾ ತಯಾರಿ, ನನ್ನ ಪಾಲನೆ ಹೀಗೆ ಹಲವು ಕೆಲಸಗಳು.

    ಆದರೂ‌ ಶಾಲೆಗೆ ಹೋಗದ ಅಣ್ಣನ ಹಠಕ್ಕೆ ಅಮ್ಮ ಅವನ‌ ಭವಿಷ್ಯದ ಬಗ್ಗೆ ಚಿಂತಿತಳಾಗಿ ಒಂದು ದಿನ ಬೆತ್ತ ಕೈಯಲ್ಲಿ ಹಿಡಿದು ಶಾಲೆಗೆ ಹೊರಡಿಸಿ ಅರ್ಧ ದಾರಿಯವರೆಗೆ ಬಿಟ್ಟು, “ಈವತ್ತೆ ಕೊನೆ, ನಾಳೆಯಿಂದ ನೀನಾಗಿಯೇ ಶಾಲೆಯಲ್ಲಿ ಕಲಿಯದಿದ್ದಲ್ಲಿ ತೋಟಕ್ಕೆ ಗೊಬ್ಬರ ಹೊರಲು ಕಳುಹಿಸುತ್ತೇನೆ ಅಷ್ಟೇ..” ಎಂದು ನುಡಿದು ತಿರುಗಿಯೂ ನೋಡದೆ ಬಂದು ಬಿಟ್ಟಿದ್ದಳಂತೆ. ಅಂದಿನಿಂದ ಒಂದು ದಿನವೂ ತಪ್ಪಿಸದೆ ಶಾಲೆಗೆ ಹೋಗಿ ಕಲಿತ ಅಣ್ಣ ಪದವಿಯಲ್ಲಿ ಮೊದಲ ರೇಂಕ್ ಪಡೆದನಲ್ಲದೆ ಈಗ ಪ್ರಸಿದ್ಧ ವಿಶ್ವವಿದ್ಯಾನಿಲಯವೊಂದರಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.

    | ಶೈಲಜಾ ಕೇಕಣಾಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts