More

    ಹೈನೋದ್ಯಮಕ್ಕೆ ಹಲವು ಆಯಾಮ: ಕೆಎಂಎಫ್ ಮಹತ್ವದ ಮೈಲಿಗಲ್ಲು

    |ವಿಲಾಸ ಮೇಲಗಿರಿ ಬೆಂಗಳೂರು
    ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆ ಹಾಗೂ ಮಹಿಳೆಯರು, ಮಕ್ಕಳು ಪೌಷ್ಟಿಕ ಆಹಾರ ಪಡೆಯಲು ಕಾರಣವಾದದ್ದು ಕ್ಷೀರಕ್ರಾಂತಿ. ಕರ್ನಾಟಕದಲ್ಲಿ ಹೈನೋದ್ಯಮ ದಿನೇದಿನೆ ಹೆಮ್ಮರವಾಗಿ ಬೆಳೆಯುತ್ತಿದೆ. ರಾಜ್ಯದ ಹೈನೋದ್ಯಮಕ್ಕೆ ಬೆನ್ನೆಲುಬಾಗಿ ನಿಂತಿರುವುದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್). ಹಾಲಿನ ವಿವಿಧ ಉಪ ಉತ್ಪನ್ನಗಳನ್ನು ತಯಾರಿಸುವ ಮೂಲಕ ಕ್ಷೀರಕ್ರಾಂತಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.

    ದಾಖಲೆಯ ಹಾಲು ಸಂಗ್ರಹಣೆ: ರಾಜ್ಯದಲ್ಲಿ ನಿತ್ಯ ಸರಾಸರಿ 85.39 ಲಕ್ಷ ಲೀಟರ್ ಹಾಲು ಶೇಖರಣೆ ಮಾಡಲಾಗುತ್ತಿದ್ದು, 2024-25ನೇ ಸಾಲಿಗೆ ನಿತ್ಯ 135.53 ಲಕ್ಷ ಲೀ. ಹಾಲು ಶೇಖರಣೆ ಮಾಡುವ ಗುರಿಯನ್ನು ಕೆಎಂಎಫ್ ಹೊಂದಿದೆ. ಕರ್ನಾಟಕ ಹಾಲು ಮಹಾಮಂಡಳ 2020-21 ಸಾಲಿನಿಂದ ಎಲ್ಲ ಹಾಲು ಒಕ್ಕೂಟಗಳಲ್ಲೂ ಗೋವು ಸುರಕ್ಷಾ ಯೋಜನೆ ಪ್ರಾರಂಭಿಸಿದ್ದು, ಪ್ರಸ್ತುತ 7,94,323 ರಾಸುಗಳನ್ನು ಗುಂಪುವಿಮೆಗೆ ಒಳಪಡಿಸಲಾಗಿದೆ.

    ಹೆಣ್ಣು ಕರುಗಳ ಜನನಕ್ಕೆ ಪ್ರೋತ್ಸಾಹ: ಪ್ರಥಮ ಬಾರಿಗೆ ಲಿಂಗ ನಿರ್ಧರಿತ ವೀರ್ಯ ನಳಿಕೆಯನ್ನು ಕೃತಕ ಗರ್ಭಧಾರಣೆಗೆ ಬಳಸಿ ಹೆಣ್ಣು ಕರುಗಳನ್ನು ಪಡೆಯಲು ಉತ್ತೇಜನ ನೀಡಲಾಗುತ್ತಿದೆ. 2021-22ನೇ ಸಾಲಿನಲ್ಲೂ 50 ಸಾವಿರ ವೀರ್ಯ ನಳಿಕೆ ಖರೀದಿಸಿ ಶೇಕಡ 50 ಅನುದಾನದಂತೆ ವೆಚ್ಚವನ್ನು ಭರಿಸಲು 275.00 ಲಕ್ಷ ರೂ. ಕಾಯ್ದಿರಿಸಲಾಗಿದೆ. ಹೈಟೆಕ್ ಬುಲ್ ಫಾರಂ: ಉತ್ಕೃಷ್ಟ ತಳಿಯ ರಾಸುಗಳನ್ನು ಖರೀದಿಸಿ ಅದರಿಂದ ಉತ್ತಮ ತಳಿಯ ಗಂಡು ಕರುಗಳನ್ನು ಪಡೆದು, ಅಂಥ ಗಂಡು ಕರುಗಳನ್ನು ಸಾಕಿ ಅವುಗಳನ್ನು ತಳಿ ಅಭಿವೃದ್ಧಿಗೆ ಬಳಸಲು 510 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಬುಲ್ ಫಾರಂ ಸ್ಥಾಪನೆ ಮಾಡಲಾಗಿದೆ.

    ಪಾರ್ಲರ್ ಸ್ಥಾಪನೆ: ನಂದಿನಿ ಬ್ರ್ಯಾಂಡ್​ ಬಿಲ್ಡಿಂಗ್ ಹಾಗೂ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲು ಮತ್ತು ಉತ್ಪನ್ನಗಳ ಮಾರಾಟ ದೃಷ್ಟಿಯಿಂದ ರಾಜ್ಯಾದ್ಯಂತ ಏಕರೂಪ ವಿನ್ಯಾಸದಲ್ಲಿ 900 ನಂದಿನಿ ಪಾರ್ಲರ್, 735 ಫ್ರಾಂಚೈಸಿ ಮತ್ತು 125 ಶಾಫಿಗಳನ್ನು ತೆರೆಯಲಾಗಿದೆ. ಸುವಾಸಿತ ಹಾಲು: ಹಾಸನದ ಮುಖ್ಯಡೇರಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಯು.ಎಚ್.ಟಿ ಸುವಾಸಿತ ಹಾಲನ್ನು ಪೆಟ್ ಬಾಟಲ್​ನಲ್ಲಿ ಒದಗಿಸುವ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಪ್ರಾಯೋಗಿಕ ಚಾಲನೆ ಪ್ರಗತಿಯಲ್ಲಿದೆ.

    ಚಾಕೋಲೇಟ್ ಮಾರುಕಟ್ಟೆಗೆ: ನಂದಿನಿ ಪ್ರೀಮಿಯಂ ದರ್ಜೆಯ ಚಾಕೊಲೇಟ್​ಗಳನ್ನು ಅಂದಾಜು 30 ಕೋಟಿ ರೂ. ವೆಚ್ಚದಲ್ಲಿ ಕೋ-ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಒದಗಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಮಹಾಮಂಡಳದ ಮಹಾಗುರಿ : ಕರ್ನಾಟಕ ಹಾಲು ಮಹಾಮಂಡಳ 91.07 ಲಕ್ಷ ಕೆ.ಜಿ. ಹಾಲು ಶೇಖರಿಸಿದೆ. ದಿನವಹಿ 100 ಲಕ್ಷ ಕೆ.ಜಿ. ಹಾಲು ಶೇಖರಣೆ ಮಾಡುವಷ್ಟರ ಮಟ್ಟಿಗೆ ಹಾಲು ಉತ್ಪಾದನಾ ಹೆಚ್ಚಳದ ವೇಗವನ್ನು ವೃದ್ಧಿಸಿಕೊಳ್ಳಬೇಕೆಂಬುದು ಮಹಾಮಂಡಳದ ಗುರಿ.

    ಬ್ಯಾಂಕ್ ಸ್ಥಾಪನೆಗೆ ಸಿದ್ಧತೆ: ಹೈನೋದ್ಯಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್​ನಲ್ಲಿ ಘೋಷಣೆ ಮಾಡಿ ಹಣಕಾಸು ಒದಗಿಸಿದ್ದಾರೆ. ಆರ್​ಬಿಐನಿಂದ ಅನುಮತಿ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ರೈಲಿನಲ್ಲೂ ಬ್ರ್ಯಾಂಡಿಂಗ್! ಕೆಎಂಎಫ್ ನಂದಿನಿ ಉತ್ಪನ್ನಗಳನ್ನು ಮೈಸೂರು- ಬೆಂಗಳೂರು, ಶಿವಮೊಗ್ಗ- ಬೆಂಗಳೂರು ಹಾಗೂ ಧಾರವಾಡ- ಬೆಂಗಳೂರು ಮಾರ್ಗದ ಮೂರು ರೈಲುಗಳಲ್ಲಿ ಬ್ರ್ಯಾಂಡಿಂಗ್ ಮಾಡುತ್ತಿದೆ. ವಿಶ್ವ ಹಾಲು ದಿನದ ಅಂಗವಾಗಿ ಎರಡು ತಿಂಗಳ ಕಾಲ ಈ ಬ್ರ್ಯಾಂಡಿಂಗ್ ನಡೆಯಲಿದೆ. ಹೊಸ ಉತ್ಪನ್ನಗಳ ಬಿಡುಗಡೆ ಎಂಟು ಬಗೆಯ ನ್ಯಾಚುರಲ್ಸ್ ಐಸ್​ಕ್ರೀಂ, 3 ಬಗೆಯ ಗ್ರೀಕ್ ಯೋಗರ್ಟ್, ನಂದಿನಿ ರಸ್ಕ್, ನಂದಿನಿ ದೇಸಿ ಹಾಲು, ವಿವಿಧ ಮಾದರಿ ಚೀಸ್, ಸಿರಿಧಾನ್ಯ ಸಿಹಿ ಪೊಂಗಲ್, ಖಾರಾ ಪೊಂಗಲ್ ಮತ್ತು ಸಿರಿಧಾನ್ಯ ಪಾಯಸ ಬಿಡುಗಡೆ ಮಾಡಲಾಗಿದೆ.

    ಕೆಎಂಎಫ್ ವಹಿವಾಟು ವಿಸ್ತರಣೆ ಮಾಡಲಾಗುತ್ತಿದೆ. ಹೈನೋದ್ಯಮದಲ್ಲಿ ತೊಡಗಿದ ರೈತರಿಗೆ ಸಾಕಷ್ಟು ಉತ್ತೇಜನ ನೀಡಲಾಗಿದೆ. ಸದ್ಯದಲ್ಲಿಯೇ ಒಂದು ಕೋಟಿ ಲೀಟರ್ ಹಾಲು ಸಂಗ್ರಹ ಮಾಡಲಿದ್ದೇವೆ. ಎಲ್ಲ ಹಾಲನ್ನು ಬಳಸುತ್ತಿದ್ದು, ಹೊಸ ಉತ್ಪನ್ನಗಳ ಮೂಲಕ ಮಾರುಕಟ್ಟೆ ವಿಸ್ತಾರದ ಕಾರ್ಯ ನಡೆದಿದೆ.
    |ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷ, ಕೆಎಂಎಫ್

    ರಾಜ್ಯಕ್ಕೆ ಆಗಮಿಸಿದ ಮುಂಗಾರು: ಜೂನ್‌ನಲ್ಲಿ ಮಳೆ ಕುಂಠಿತ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts