More

    ಇಂದು ವಿಶ್ವ ಭೂದಿನ: ಭೂಮಿ ಉಳಿವಿಗೆ ಬೇಕು ಸಾಮೂಹಿಕ ಸಂಕಲ್ಪ

    • ಕೃಷ್ಣರಾಜ್

    ವಿಶ್ವ ಭೂಮಿ ದಿನವನ್ನು ಪ್ರತಿ ವರ್ಷ ಏಪ್ರಿಲ್ 22 ರಂದು ಆಚರಿಸಲಾಗುತ್ತದೆ. ಭೂಮಿಯ ಮಹತ್ವ, ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಮತ್ತು ಪರಿಸರ ಸಂರಕ್ಷಣೆ ಅಗತ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ಅದರ ರಕ್ಷಣೆಗೆ ಪ್ರೇರಣೆ ನೀಡಲು ಈ ದಿನ ಪ್ರಯತ್ನಿಸುತ್ತದೆ. ಪರಿಸರ ವ್ಯವಸ್ಥೆಗಳಿಲ್ಲದೆ ಭೂಮಿಯನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸುವ ಮೂಲಕ ಪರಿಸರ ವ್ಯವಸ್ಥೆಯ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಅಂತ್ಯವಿಲ್ಲದ ಜಗತ್ತು ಜೀವನೋಪಾಯಕ್ಕಾಗಿ ಭೂಮಿಯನ್ನು ಅವಲಂಬಿಸಿದೆ ಎಂಬುದು ಗೊತ್ತಿರುವಂಥದ್ದೇ. ಭೂಮಿ ಒಂದು ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಬಂಡವಾಳವಾಗಿದೆ. ಭೂಮಿ ಬಹು ಮುಖ್ಯ ನೈಸರ್ಗಿಕ ಸಂಪನ್ಮೂಲವಾಗಿದ್ದು, ಇದು ದೇಶದ ಸಾಮಾಜಿಕ, ಅರ್ಥಿಕ ಮತ್ತು ಪರಿಸರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

    ವಿಶ್ವದ ಆರ್ಥಿಕತೆ ಭೂಮಿಯೊಂದಿಗೆ ಬೆಸೆದುಕೊಂಡಿದೆ. ಏಕೆಂದರೆ ನೈಸರ್ಗಿಕ ಸಂಪನ್ಮೂಲಗಳನ್ನು ಹೊರತೆಗೆಯಬೇಕು, ಸಂಸ್ಕರಿಸಬೇಕು. ಆದರೆ, ಪರಿಸರದ ಬಗ್ಗೆ ಸಾಕಷ್ಟು ಗಮನ ಹರಿಸದೆ ಆರ್ಥಿಕ ಬೆಳವಣಿಗೆಯನ್ನು ಮುಂದುವರಿಸುತ್ತಿರುವುದು ಸುಸ್ಥಿರ ಅಭಿವೃದ್ಧಿಯ ವಿರುದ್ಧವಾಗಿದೆ. ಇಂಥ ಅಭಿವೃದ್ಧಿ ಮಾದರಿ ಪರಿಸರಕ್ಕೆ, ಇಡೀ ಭೂಮಿಗೆ ಮಾರಕ. ಭೂಮಿ ಅಕ್ಷಯ ಅಥವಾ ನಿರಂತರವಾಗಿ ಲಭ್ಯವಿರುವ ಸಂಪನ್ಮೂಲವಾಗಿದ್ದರೂ, ಅದರ ಸೇವೆಗಳು ಷರತ್ತುಬದ್ಧವಾಗಿ ನವೀಕರಿಸಬಹುದಾದ ಸಂಪನ್ಮೂಲಗಳಾಗಿವೆ. ಫಲವತ್ತಾದ ಭೂಮಿ, ಅರಣ್ಯ ಮತ್ತು ಅಂತರ್ಜಲ ಷರತ್ತುಬದ್ಧವಾಗಿ ನವೀಕರಿಸಬಹುದಾದ ಸಂಪನ್ಮೂಲಗಳಾಗಿವೆ.

    ಹೀಗಿದೆ ಭಾರತದ ಸ್ಥಿತಿ: ವಿಶ್ವದ ಒಟ್ಟು ಭೂಪ್ರದೇಶದ ಶೇಕಡ 2.4ರಷ್ಟು ಹೊಂದಿರುವ ಭಾರತ ವಿಶ್ವದ ಜನ ಸಂಖ್ಯೆಯ ಶೇಕಡ 18ನ್ನು ಪೋಷಿಸುತ್ತಿದೆ. ಭಾರತದಲ್ಲಿ ಕೃಷಿ ಭೂಮಿಯ ತಲಾ ಲಭ್ಯತೆ 0.12 ಹೆಕ್ಟೇರ್ ಆಗಿದ್ದರೆ, ವಿಶ್ವದ ತಲಾ ಕೃಷಿ ಭೂಮಿ ಲಭ್ಯತೆ 0.29 ಹೆಕ್ಟೇರ್ ಆಗಿದೆ. ಭಾರತದಲ್ಲಿ ಶೇ.51.09 ಭೂಮಿಯನ್ನು ಸಾಗುವಳಿ ಮಾಡಲಾಗುತ್ತಿದೆ. ಉಳಿದಂತೆ, ಶೇ.21.81 ಅರಣ್ಯ ಮತ್ತು ಶೇ.3.92 ಹುಲ್ಲುಗಾವಲು ಹೊಂದಿದೆ. ಸುಮಾರು ಶೇ.12.34ರಷ್ಟು ನಿರ್ವಿುಸಿದ ಪ್ರದೇಶಗಳು ಮತ್ತು ಸಾಗುವಳಿ ಮಾಡದ ಭೂಮಿ ಇದೆ. ಒಟ್ಟು ಭೂಮಿಯಲ್ಲಿ ಶೇ.5.17 ಕೃಷಿ ಮಾಡದ ತ್ಯಾಜ್ಯವಾಗಿದ್ದು, ಇತರ ರೀತಿಯ ಭೂಮಿ ಶೇ.4.67ರಷ್ಟಿದೆ.

    ಭಾರತದಲ್ಲಿ ಭೂಮಿಯನ್ನು ಆರ್ಥಿಕ ಕಾರಣಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಕಲುಷಿತಗೊಳಿಸಲಾಗುತ್ತಿದೆ. ನವೀಕರಿಸಲಾಗದ ಸಂಪನ್ಮೂಲಗಳಾದ ಕಲ್ಲಿದ್ದಲು, ಕಬ್ಬಿಣದ ಅದಿರು, ಪಳೆಯುಳಿಕೆ ಇಂಧನಗಳನ್ನು ಅಪಾರ ಪ್ರಮಾಣದಲ್ಲಿ ಹೊರತೆಗೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಹೆಚ್ಚುತ್ತಲೇ ಸಾಗಿರುವುದು ಕಳವಳಕಾರಿ ಸಂಗತಿ. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ಫಲವತ್ತಾದ ಭೂಮಿ ಕಲುಷಿತಗೊಳ್ಳುತ್ತಿದೆ. ಮಳೆಕಾಡಿನ ಅರಣ್ಯನಾಶ ಕಾಫಿ ಮತ್ತು ಚಹಾದಂತಹ ತೋಟ, ಬೆಳೆಗಳಿಗೆ ದಾರಿ ಮಾಡಿಕೊಟ್ಟಿದೆ.

    ಮಣ್ಣಿನ ಸಾವಯವ ಘಟಕವು ಮಣ್ಣಿನ ಸೂಕ್ಷಾ್ಮಣು ಜೀವಿಗಳಿಂದ ಎಲೆಗಳು ಮತ್ತು ಇತರ ಸಸ್ಯ ವಸ್ತುಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ. ಕೃಷಿಯಲ್ಲಿ ರಾಸಾಯನಿಕಗಳ ಅತಿ ಹೆಚ್ಚು ಬಳಕೆಯಿಂದ ಇದನ್ನು ಸಂಪೂರ್ಣವಾಗಿ ನಾಶಗೊಳಿಸಲಾಗಿದೆ. ಭೂಮಿಯ ದುಸ್ಥಿತಿಗೆ ಹಲವು ಪ್ರಮುಖ ಕಾರಣಗಳಿವೆ. ಭೂಮಿಯ ಪರಿಸರ ಸೇವೆಗಳನ್ನು ಮೌಲ್ಯೀಕರಿಸಲಾಗದ ಮಾರುಕಟ್ಟೆಯ ವೈಫಲ್ಯ. ಮಾರುಕಟ್ಟೆ ರಹಿತ ಪ್ರಯೋಜನ ಗಳನ್ನು ಆಗಾಗ್ಗೆ ನಿರ್ಲಕ್ಷಿಸಲಾಗುತ್ತದೆ, ಖನಿಜಗಳ ಗಣಿಗಾರಿಕೆಗಾಗಿ ಕಾಡುಗಳನ್ನು ನಾಶಮಾಡಲಾಗಿದೆ, ಅರಣ್ಯ ಭೂಮಿಯನ್ನು ಕಡಿಮೆ ಬೆಲೆಗೆ ಅಂದಾಜು ಮಾಡಲಾಗುತ್ತದೆ.

    ಅರಣ್ಯನಾಶಕ್ಕೆ ಮತ್ತೊಂದು ಪ್ರಮುಖ ಕಾರಣ ಸರ್ಕಾರದ ನೀತಿ ವೈಫಲ್ಯ. ಅರಣ್ಯನಾಶವನ್ನು ಉದ್ದೇಶಪೂರ್ವಕವಾಗಿ ಅಥವಾ ಪರೋಕ್ಷವಾಗಿ ಪ್ರೋತ್ಸಾಹಿಸುವ ಸರ್ಕಾರದ ನೀತಿ ಅಪಾಯಕಾರಿ. ಸರ್ಕಾರಗಳು ಅರಣ್ಯ ವಲಯಕ್ಕೆ ಪೂರಕ ನೀತಿಯನ್ನು ರೂಪಿಸಲು ವಿಫಲವಾಗಿದ್ದು, ಭೂ ಬಳಕೆಯನ್ನು ನಿರ್ಧರಿಸುವಲ್ಲಿ ಮಾತ್ರ ಪ್ರಭಾವಶಾಲಿಯಾಗಿವೆ. ಪರಿಸರ ರಕ್ಷಣೆಗೆ ಎರಡನೇ ದರ್ಜೆಯ ಪ್ರಾಶಸ್ತ್ಯ ನೀಡಲಾಗುತ್ತಿದೆ. ಸರ್ಕಾರದ ನೀತಿಗಳು ಮಾರುಕಟ್ಟೆಯ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಪರಿಣಾಮ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಅಲ್ಲದೆ, ಪರಿಸರ ಸಂರಕ್ಷಣೆ ಸಂಸ್ಥೆಗಳು ಕೂಡ ಜೀವವೈವಿಧ್ಯತೆಯ ಪರಿಸರೀಯ ಮೌಲ್ಯಗಳನ್ನು ನಿರ್ಧಾರ ಮಾಡುವಲ್ಲಿ ವಿಫಲವಾಗಿವೆ.

    ಸಾಂಸ್ಥಿಕ ವೈಫಲ್ಯ ಪರಿಸರ ನಾಶಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಸರಿಯಾದ ಆಸ್ತಿ ಹಕ್ಕುಗಳ ಕೊರತೆ, ಅಸಮರ್ಥತೆ ಮತ್ತು ಸಾಂಸ್ಥಿಕ ವೈಫಲ್ಯ, ಭ್ರಷ್ಟ ಆಡಳಿತ, ರಾಜಕೀಯ ಅಸ್ಥಿರತೆ ಮತ್ತು ಸಾರ್ವಜನಿಕ ಅಧಿಕಾರದ ಅನುಪಸ್ಥಿತಿಯಿಂದ ಪರಿಸರ ನಾಶದ ಪ್ರಕ್ರಿಯೆ ಇನ್ನಷ್ಟು ವೇಗ ಪಡೆದುಕೊಂಡಿದೆ. ಮರಳು ದಂಧೆ, ರಾಜಕಾಲುವೆ ಅತಿಕ್ರಮಣ, ಅರಣ್ಯ ಭೂಮಿ ಮತ್ತು ಹುಲ್ಲುಗಾವಲು ಅತಿಕ್ರಮಣ ದಂಥ ಕೃತ್ಯಗಳು ಹೆಚ್ಚುತ್ತಲೇ ಇವೆ. ಜಾಗತಿಕವಾಗಿ ನಾಲ್ಕು ವಿಧದ ಆಸ್ತಿ ಹಕ್ಕುಗಳ ನಿಯಮಗಳು ಅಸ್ತಿತ್ವದಲ್ಲಿವೆ. ಇವುಗಳ ಮೂಲಕವೂ ಭೂಮಿಗೆ ಹಾನಿ ಒದಗುತ್ತಿದೆ.

    ಖಾಸಗಿ ಆಸ್ತಿ: ಸಂಪನ್ಮೂಲದ ಹಕ್ಕುಗಳು ಮತ್ತು ಮಾಲೀಕತ್ವವನ್ನು ಒಬ್ಬ ವ್ಯಕ್ತಿಗೆ ನೀಡಲಾಗುತ್ತದೆ. ವ್ಯಕ್ತಿಗಳ ಗುಂಪು ಅಥವಾ ನಿಗಮ, ಇದರಿಂದಾಗಿ ಮಾಲೀಕರಿಗೆ ಇತರರನ್ನು ಹೊರಗಿಡುವ ಹಕ್ಕಿದೆ. ಆದರೆ ಭೂಮಿಯನ್ನು ಅತಿಯಾಗಿ ವಾಣಿಜ್ಯ ಮತ್ತು ಆರ್ಥಿಕ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ಸಂಪನ್ಮೂಲ ಬರಿದು ಮಾಡಲಾಗುತ್ತಿದೆ.

    ರಾಜ್ಯ ಆಸ್ತಿ: ಸರ್ಕಾರಕ್ಕೆ ಇರುವ ಸಂಪನ್ಮೂಲ ಮಾಲೀಕತ್ವ. ಆದರೆ ರಾಜ್ಯ ಆಸ್ತಿಯನ್ನು ರಾಜಕೀಯ ಪಟ್ಟಭದ್ರ ಶಕ್ತಿಗಳು ಕಬಳಿಸುತ್ತಿವೆ ಮತ್ತು ರಾಜ್ಯ ಸರ್ಕಾರಗಳು ಅತಿಕ್ರಮಣ ಮಾಡಿದ ಭೂಮಿಯನ್ನು ಸಕ್ರಮಗೊಳಿಸುತ್ತಿವೆ.

    ಸಾಮಾನ್ಯ ಆಸ್ತಿ: ಮಾಲೀಕತ್ವ ಮತ್ತು ನಿರ್ವಹಣೆ ಒಂದು ಸಮುದಾಯಕ್ಕೆ ಸೇರಿರುವುದು. ಇದು ಹೆಚ್ಚು ಹುಲ್ಲುಗಾವಲು ಪ್ರದೇಶ ಹೊಂದಿದೆ. ಕರ್ನಾಟಕದಲ್ಲಿ ಇದರ ಲಭ್ಯತೆ ಕಡಿಮೆ ಯಾಗಿದೆ. ಹಾಗಾಗಿ, ಭೂ ರಹಿತ ಕಾರ್ವಿುಕರ ಆದಾಯ ಕಡಿಮೆಯಾಗಿದೆ.

    ಮುಕ್ತ ಪ್ರವೇಶ: ಸಂಪನ್ಮೂಲ ಬಳಕೆಗಾಗಿ ಪ್ರವೇಶ ಅನಿಯಂತ್ರಿತವಾಗಿದೆ. ಉದಾಹರಣೆಗೆ ಸಮುದ್ರದಲ್ಲಿ ಮೀನು ಹಿಡಿಯುವುದು ಮತ್ತು ಅದರ ಬಳಕೆ ಹೆಚ್ಚಾಗಿದೆ. ಇದು ಕಾಮನ್ ಪ್ರಾಪರ್ಟಿ ದುರಂತಕ್ಕೆ ಕಾರಣವಾಗಿದೆ. ಭೂಮಿಯನ್ನು ಅವುಗಳ ಪರಿಸರ ವ್ಯವಸ್ಥೆಯ ಸೇವೆಗಳನ್ನು ಅರ್ಥಮಾಡಿಕೊಳ್ಳದೆ ಆರ್ಥಿಕ ಬಳಕೆಗೆ ತರಲಾಗುತ್ತಿದೆ. ಇದರಿಂದಾಗಿ, ಭೂಮಿಯ ಲಭ್ಯತೆ ಕಡಿಮೆಯಾಗಿದೆ. ಭೂಮಿ ಎಂಬುದು ಬಂಡವಾಳಶಾಹಿಗಳ ಆಸ್ತಿಯಾಗಿದೆ ಮತ್ತು ಅವರೇ ಅದರ ಶಾಶ್ವತ ಮಾಲೀಕರಾಗುತ್ತಾರೆ. ಇದರಿಂದ ದೀರ್ಘಾವಧಿಯಲ್ಲಿ ಕೃಷಿ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ ಹಾಗೂ ಶ್ರೀಮಂತರು ಮತ್ತು ಬಡವರ ನಡುವೆ ಆದಾಯ ಅಸಮಾನತೆಯನ್ನು ಭಾರತದಂಥ ಬಡ ರಾಷ್ಟ್ರದಲ್ಲಿ ಹೆಚ್ಚಿಸುತ್ತದೆ.

    ಅರಣ್ಯನಾಶ ಮತ್ತು ಮಣ್ಣಿನ ಸವೆತ ಹೆಚ್ಚಾಗಿರುವುದರಿಂದ ಪ್ರಾಣಿಗಳಿಗೆ ಆಹಾರ ಸಿಗುತ್ತಿಲ್ಲ. ಇದರ ಪರಿಣಾಮವಾಗಿ ಕೆಲವು ಪ್ರಬೇಧಗಳು ಅಳಿವಿನ ಅಪಾಯದಲ್ಲಿವೆ. ಮರದ ಹೊದಿಕೆ (ಹಸಿರು ಹೊದಿಕೆ) ಕಡಿಮೆಯಾದ ಕಾರಣ ಮಳೆಚಕ್ರದಲ್ಲಿಯೂ ಅಸಮತೋಲನ ಉಂಟಾಗಿದೆ. ಇದರಿಂದ ಬಹಳಷ್ಟು ವ್ಯತಿರಿಕ್ತ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಉದಾಹರಣೆಗೆ, ಜಾಗತಿಕ ತಾಪಮಾನ ಏರಿಕೆ, ಹಸಿರುಮನೆ ಪರಿಣಾಮ, ಅನಿಯಮಿತ ಮಳೆ ಮತ್ತು ಇತರ ಅಸಮತೋಲನಗಳನ್ನು ಎದುರಿಸಬೇಕಾಗಿದೆ. ಭೂ ಕುಸಿತಗಳು ಹೆಚ್ಚಾಗಿ ಪ್ರವಾಸಿತಾಣಗಳು ಆಕರ್ಷಣೆ ಕಳೆದುಕೊಳ್ಳುತ್ತಿವೆ. ಇದು ರಾಜ್ಯ ಸರ್ಕಾರಗಳ ಆದಾಯ ನಷ್ಟಕ್ಕೆ ಕಾರಣವಾಗುತ್ತಿದೆ.

    ನೈಸರ್ಗಿಕ ಸಂಪನ್ಮೂಲಗಳ ಸಂಸ್ಕರಣೆಯತ್ತ ಗಮನ ಹರಿಸುವುದು ಭೂ ಮಾಲಿನ್ಯವನ್ನು ತಡೆಯುವ ಉತ್ತಮ ಕ್ರಮವಾಗಿದೆ. ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತುಂಬ ಕಡಿಮೆ ಮಾಡುವುದು, ಜೈವಿಕ ಕೀಟನಾಶಕ ಹಾಗೂ ರಸಗೊಬ್ಬರಗಳನ್ನು ನಿಗದಿತ ಪ್ರಮಾಣದಲ್ಲಿ ಬಳಸುವುದು, ಸಾವಯವ ಕೃಷಿಗೆ ಪ್ರಾಮುಖ್ಯ ನೀಡುವುದು ಸೇರಿದಂತೆ ಅವಶ್ಯಕ ಕ್ರಮಗಳನ್ನು ಭೂ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮತ್ತು ಜನರು ಕೈಗೊಳ್ಳಬೇಕಿದೆ. ಅಲ್ಲದೆ, ಭೂಮಾಲೀಕತ್ವ ಎಲ್ಲರಿಗೂ ಸಿಗುವಂತೆ ಮಾಡಿ ಆದಾಯದ ಅಸಮಾನತೆ ಕಡಿಮೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು, ಕಾರ್ಯೋನ್ಮುಖರಾಗಲು ಇದು ಸಕಾಲ.

    (ಲೇಖಕರು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯಲ್ಲಿ (ಐಸೆಕ್) ಪ್ರಾಧ್ಯಾಪಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts