More

    ಕ್ರೀಡಾಭಿವೃದ್ಧಿಗೆ ಯೋಜನೆ ಸಿದ್ಧ

    ಚಿಕ್ಕಮಗಳೂರು: ಸಾಕಷ್ಟು ಕೊರತೆಗಳ ನಡುವೆ ನರಳುತ್ತಿರುವ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯದೊಂದಿಗೆ ಕಾಯಕಲ್ಪ ದೊರೆಯುವ ನಿರೀಕ್ಷೆ ಜಿಲ್ಲೆಯ ಕ್ರೀಡಾಸಕ್ತರಲ್ಲಿ ಹುಟ್ಟು ಹಾಕಿದ್ದು, ಸುಮಾರು 23.82 ಕೋಟಿ ರೂ. ವೆಚ್ಚದ ಯೋಜನೆಗಳು ಸರ್ಕಾರದ ಮುನ್ನೆಲೆಗೆ ಬಂದಿವೆ.

    ನಗರದಲ್ಲಿರುವ ಅತ್ಯಂತ ಹಳೆಯದಾದ ಜಿಲ್ಲಾ ಆಟದ ಮೈದಾನ, ಶತಮಾನೋತ್ಸವ ಕ್ರೀಡಾಂಗಣಗಳ ಅಭಿವೃದ್ಧಿ ಜತೆಗೆ ಕಲ್ಯಾಣನಗರದ ಏಳು ಎಕರೆಯಲ್ಲಿ ಉದ್ದೇಶಿಸಿರುವ ಕ್ರೀಡಾಂಗಣ ನಿರ್ವಣಕ್ಕೆ ಯೋಜನೆ ರೂಪುಗೊಂಡಿವೆ.

    ಜಿಲ್ಲಾ ಆಟದ ಮೈದಾನದ ವೇದಿಕೆ ಬಲಭಾಗದಲ್ಲಿರುವಂತೆ ಎಡಭಾಗದಲ್ಲೂ ಮತ್ತೊಂದು ಪ್ರೇಕ್ಷಕರ ಗ್ಯಾಲರಿ ನಿರ್ವಿುಸುವ ಚಿಂತನೆ ನಡೆದಿದ್ದು, ಗ್ಯಾಲರಿ ಸೇರಿ ಮೈದಾನ ಸುತ್ತ ಕಾಂಪೌಂಡ್ ನಿರ್ವಣಕ್ಕೆ ಸರ್ಕಾರಕ್ಕೆ 1.31 ಕೋಟಿ ರೂ. ಪ್ರಸ್ತಾವನೆ ಕಳುಹಿಸಿದ್ದು ಅನುಮೋದನೆ ನಿರೀಕ್ಷೆಯಲ್ಲಿದೆ.

    ಶತಮಾನೋತ್ಸವ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್​ಗೆ ಅನುಕೂಲವಾಗುವಂತೆ 400 ಮೀಟರ್ ಓಟದ ಸಿಂಡರ್ ಟ್ರ್ಯಾಕ್ ಅಳವಡಿಸಲಾಗಿದೆ. ಹಿಂದೆ ಅಳವಡಿಸುವಾಗಲೇ ಅದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೆ ಅದನ್ನು ಪರಿಗಣಿಸದೆ ಟ್ರ್ಯಾಕ್ ನಿರ್ವಿುಸಲಾಯಿತು. ಆದರೆ ಈ ಟ್ರ್ಯಾಕ್​ಗೆ ರಾಷ್ಟ್ರೀಯ ಓಟಗಾರರ ಸಮ್ಮತಿ ಇಲ್ಲ. ಹೀಗಾಗಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುವ ಅಗತ್ಯವಿದ್ದು, ಇದಕ್ಕೆ 8.50 ಕೋಟಿ ರೂ. ಅಗತ್ಯವಿದೆ. ಹೀಗಾಗಿ ಈ ಕ್ರೀಡಾಂಗಣದ ಅಭಿವೃದ್ಧಿಗೆ ಇಲಾಖೆ 1.61 ಕೋಟಿ ರೂ. ಪ್ರಸ್ತಾವನೆ ಸಿದ್ಧಪಡಿಸಿ ಕಳುಹಿಸಿದ್ದು, ಕ್ರೀಡಾ ಸಚಿವಾಲಯ ಒದಗಿಸಬೇಕಿದೆ.

    ಇನ್ನೊಂದು ಕ್ರೀಡಾಂಗಣ: ಕಲ್ಯಾಣನಗರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದ 7 ಎಕರೆ ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡೆಗೆ ಪೂರಕವಾದ ಕೋರ್ಟ್ ಹಾಗೂ ಕಟ್ಟಡಗಳನ್ನು ನಿರ್ವಿುಸಲು ಇಲಾಖೆ ಚಿಂತನೆ ನಡೆಸಿದೆ. ಇಲ್ಲಿ ಪ್ರೇಕ್ಷಕರ ಗ್ಯಾಲರಿ, ಬಾಸ್ಕೆಟ್​ಬಾಲ್ ಮತ್ತು ಷಟಲ್ ಬ್ಯಾಡ್ಮಿಂಟನ್ ಕೋರ್ಟ್ ಸೇರಿದಂತೆ ಒಳಾಂಗಣ ಕ್ರೀಡೆಗೆ ಸೂಕ್ತವಾದ ಸೌಲಭ್ಯ ನಿರ್ವಿುಸುವ ಯೋಜನೆ ರೂಪಿಸಲಾಗಿದೆ.

    ಜಿಲ್ಲೆಯಲ್ಲಿ 8 ತಾಲೂಕುಗಳಲ್ಲಿ 5ರಲ್ಲಿ ಮಾತ್ರ ಕ್ರೀಡಾಂಗಣವಿದ್ದು, ಮೂಡಿಗೆರೆ ಕ್ರೀಡಾಂಗಣದ ಅಭಿವೃದ್ಧಿಗೆ 1.20 ಕೋಟಿ ರೂ. ಮಂಜೂರಾಗಿದೆ. ಅಲ್ಲಿನ ಬಸ್ ನಿಲ್ದಾಣದ ಹಿಂಭಾಗದಲ್ಲೇ ಈ ಕ್ರೀಡಾಂಗಣ ಸುಸಜ್ಜಿತಗೊಳ್ಳಲಿದೆ. ಕಡೂರು ಮತ್ತು ಎನ್.ಆರ್.ಪುರ ಕ್ರೀಡಾಂಗಣಗಳ ಅಭಿವೃದ್ಧಿಗೆ ತಲಾ 50 ಲಕ್ಷ ರೂ. ಹಣದ ಅಗತ್ಯವಿದೆ. ಅಜ್ಜಂಪುರದಲ್ಲಿ ದಾನಿಗಳು ಒದಗಿಸಿರುವ ಶೆಟ್ರು ಸಿದ್ದಪ್ಪ ಆಟದ ಮೈದಾನವನ್ನು ಶಿಕ್ಷಣ ಇಲಾಖೆಯಿಂದ ಯುವಜನ ಸೇವಾ ಇಲಾಖೆಗೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ತರೀಕೆರೆ, ಕೊಪ್ಪ, ಶೃಂಗೇರಿಯಲ್ಲಿ ಕ್ರೀಡಾಂಗಣಕ್ಕೆ ಜಾಗ ಹುಡುಕಲಾಗುತ್ತಿದೆ.

    ಕೋಚ್ ನೇಮಕ ಬಾಕಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಗರದ ಕೇಂದ್ರ ಕಚೇರಿ ಮೇಲ್ಭಾಗದಲ್ಲಿ 5 ರಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಕ್ರೀಡಾ ವಸತಿ ನಿಲಯವಿದ್ದು, ಇಲ್ಲಿ 50 ಮಕ್ಕಳಿಗೆ ಅವಕಾಶವಿದೆ. ಆ ಮಕ್ಕಳನ್ನು ವಾಲಿಬಾಲ್, ಅಥ್ಲೆಟಿಕ್ಸ್ ಮತ್ತು ಜೂಡೋ ಕ್ರೀಡೆಗಳಲ್ಲಿ ಪರಿಣಿತರನ್ನಾಗಿಸುವ ಉದ್ದೇಶವಿದ್ದರೂ ವಾಲಿಬಾಲ್ ಕೋಚ್ ಮಾತ್ರ ಇದ್ದು, ಅವರೇ ಈ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇಲ್ಲಿಗೆ ನೇಮಿಸಿದ್ದ ಅಥ್ಲೆಟಿಕ್ ಮತ್ತು ಜೂಡೋ ಕೋಚ್​ಗಳನ್ನು ಮತ್ತೆ ಬೆಂಗಳೂರಿಗೆ ನಿಯೋಜಿಸಲಾಗಿದೆ. ಹಾಗಾಗಿ ವಿದ್ಯಾರ್ಥಿಗಳ ಸಾಧನೆಗೆ ಅಡ್ಡಿಯಾಗಿದೆ. ಇಲಾಖೆ ಕಚೇರಿ ಪಕ್ಕದಲ್ಲೇ ಈಜುಕೊಳವಿದ್ದು ನಿತ್ಯ ಸಾಕಷ್ಟು ಆಸಕ್ತರು ಇದನ್ನು ಅವಲಂಬಿಸಿದ್ದಾರೆ. ಅದರ ನೆಲಹಾಸು ಬದಲಿಸಬೇಕಿದ್ದು, ಅದಕ್ಕೆ ಕನಿಷ್ಠ 20 ಲಕ್ಷ ರೂ. ಒದಗಿಸಬೇಕಿದೆ.

    ಕ್ರೀಡಾ ವಸತಿ ನಿಲಯಕ್ಕೆ ಪ್ರಸ್ತಾವನೆ: ಇಲಾಖೆ ಕಚೇರಿ ಸನಿಹದಲ್ಲೇ ಇನ್ನೊಂದು ಕ್ರೀಡಾ ವಸತಿ ನಿರ್ವಿುಸಲು ಪ್ರಸ್ತಾವನೆ ಸಿದ್ಧಗೊಂಡಿದ್ದು, ಸರ್ಕಾರ ಸಮ್ಮತಿಸಿದರೆ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ನಿಲಯಗಳು ರೂಪುಗೊಳ್ಳಲಿವೆ. ಜತೆಗೆ ಆಯಾ ಕ್ರೀಡೆಗೆ ಸಂಬಂಧಿಸಿದ ಕೋಚ್​ಗಳ ನೇಮಕವಾದರೆ ಎಳವೆಯಲ್ಲೇ ಉತ್ತಮ ಕ್ರೀಡಾಪ್ರತಿಭೆಗಳು ಅರಳಲಿವೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ.

    ಸಿಬ್ಬಂದಿ ಕೊರತೆ ಈ ಇಲಾಖೆಯನ್ನು ಸಹ ಕಾಡುತ್ತಿದ್ದು, ಇಲಾಖೆಯ ಸಹಾಯಕ ನಿರ್ದೇಶಕರ ಜತೆಗೆ ಓರ್ವ ಗುಮಾಸ್ತ ಮಾತ್ರ ಕಾಯಂ ಹುದ್ದೆಯಲ್ಲಿದ್ದಾರೆ. ಮಿಕ್ಕ 12 ಜನರು ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 4ನೇ ದರ್ಜೆಯ ಕಾಯಂ ಹುದ್ದೆಗೂ ನೇಮಕಾತಿ ಆಗಿಲ್ಲ. ನಿವೃತ್ತಿಯಾದವರನ್ನೇ ಹೊರ ಗುತ್ತಿಗೆಯಲ್ಲಿ ಮುಂದುವರಿಸಲಾಗಿದೆ.

    ಜಿಲ್ಲೆಗೆ ಯುವಭವನ ಬೇಕು: ಜಿಲ್ಲೆಯಲ್ಲಿ ಯುವ ಸಮೂಹದ ಚಟುವಟಿಕೆಗೆ ಪೂರಕವಾಗಿ ಯುವಭವನ ನಿರ್ವಣಗೊಳ್ಳಬೇಕಿದೆ. ಕಲ್ಯಾಣನಗರದಲ್ಲಿರುವ ಕ್ರೀಡಾಂಗಣದೊಳಗೇ ಇದರ ನಿರ್ಮಾಣ ಚಿಂತನೆ ನಡೆದಿದೆ. ಸುಮಾರು 500 ಮಂದಿ ಕುಳಿತುಕೊಳ್ಳುವ ಸಭಾಂಗಣ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಂದರ್ಭ ಯುವ ಸಮೂಹಕ್ಕೆ ವಸತಿ ಕಲ್ಪಿಸಲು 20 ಕೊಠಡಿಗಳು ಈ ಭವನ ಹೊಂದಿರಬೇಕೆನ್ನುವ ಆಶಯವಿದೆ.

    ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಯವರಿಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಖಾತೆ ಸಚಿವ ಸ್ಥಾನ ಸಿಕ್ಕಿದ ಸಂದರ್ಭ ಅಲ್ಲಿ ಯುವಭವನ ನಿರ್ವಣಗೊಂಡಿವೆ. ಇದೀಗ ಸಚಿವ ಸಿ.ಟಿ.ರವಿ ಅವರಿಗೆ ಈ ಅವಕಾಶ ದೊರಕಿರುವುದರಿಂದ ಈ ಜಿಲ್ಲೆಗೂ ಸುಮಾರು 10 ಕೋಟಿ ರೂ. ವೆಚ್ಚದ ಭವನ ನಿರ್ವಣದ ನಿರೀಕ್ಷೆ ಹುಟ್ಟಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts