More

    ಸಾರಿಗೆ ವ್ಯವಸ್ಥೆ ಇಲ್ಲದೆ ಕಾರ್ಮಿಕರ ಪರದಾಟ, ಅರೆಬರೆ ಲಾಕ್‌ಡೌನ್ ತಂದ ಪೀಕಲಾಟ ಜೀವನಕ್ಕಾಗಿ ಕಾಲ್ನಡಿಗೆ ಅನಿವಾರ್ಯ

    ದೊಡ್ಡಬಳ್ಳಾಪುರ: ಅರೆಬರೆ ಲಾಕ್‌ಡೌನ್‌ನಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ದಿಗ್ಬಂಧನ ಸಮಯದಲ್ಲಿ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್, ಕಾರ್ಖಾನೆ ಹಾಗೂ ಕಂಪನಿಗಳಿಗೆ ಕೆಲಸಕ್ಕೆ ಬರುವ ಉದ್ಯೋಗಿಗಳ ಸಮಸ್ಯೆ ಕೇಳುವವರಿಲ್ಲದಂತಾಗಿದೆ.

    ವಾರದ ಲಾಕ್‌ಡೌನ್‌ನಿಂದ ಬೆಳಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೆ ವಾಹನಗಳ ಓಡಾಟಕ್ಕೆ ಅನುಮತಿ ನೀಡಿರುವುದರಿಂದ ಗಾರ್ಮೆಂಟ್ಸ್ ಮತ್ತು ಕಂಪನಿಗಳನ್ನೇ ನಂಬಿಕೊಂಡಿರುವ ಮಹಿಳಾ ಉದ್ಯೋಗಿಗಳೂ ಸೇರಿ ಸಾವಿರಾರು ಮಂದಿ ಆಟೋಗಳಲ್ಲಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಆದರೆ, ಸಂಜೆ ವೇಳೆಗೆ ನಗರ ಲಾಕ್ ಆಗುವುದರಿಂದ ಆಟೋಗಳೂ ಸಂಚರಿಸುವುದಿಲ್ಲ. ಇದರಿಂದ ಸಾರಿಗೆ ವ್ಯವಸ್ಥೆ ಇಲ್ಲದೆ ಕಾರ್ಮಿಕರು ಪರದಾಡುವಂತಾಗಿದೆ.

    ದುಪ್ಪಟ್ಟು ಹಣ ವಸೂಲಿ: ಲಾಕ್‌ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಆಟೋ ಚಾಲಕರು ಬೆಳಗ್ಗೆ 7ರಿಂದ 10ರವರೆಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಕೆಲಸಕ್ಕೆ ಹೋಗಲೇಕಾದ ಅನಿವಾರ್ಯತೆಯಿಂದ ಕೇಳಿದಷ್ಟು ಕೊಡಲೇಬೇಕಿದೆ.

    ಕರೊನಾ ಭಯವೇ ಇಲ್ಲ: ಆಟೋಗಳಲ್ಲಿ ಪರಸ್ಪರ ಅಂತರ ಇಲ್ಲದಂತಾಗಿದೆ. ಆಟೋಗಳಲ್ಲಿ 10-12 ಕಾರ್ಮಿಕರ ಓಡಾಟ ಸಾಮಾನ್ಯವಾಗಿದೆ. ಇದರಿಂದಲೇ ಕರೊನಾ ಛಾಯೆ ದೊಡ್ಡಬಳ್ಳಾಪುರದಲ್ಲಿ ದೊಡ್ಡದಾಗುತ್ತಲೇ ಇದೆ.

    ಜೀವನದ ಬಂಡಿ ಸಾಗಲು ಕೆಲಸ ಅನಿವಾರ್ಯ. ಗಾರ್ಮೆಂಟ್ಸ್‌ಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ಲಾಕ್‌ಡೌನ್‌ನಿಂದ ಕೆಲಸವೂ ಇಲ್ಲದಂತಾಗಿದೆ. ಈಗಿರುವ ಕೆಲಸ ಉಳಿಸಿಕೊಳ್ಳಲು ಕಾಲ್ನಡಿಗೆ ಅನಿವಾರ್ಯ.
    ಮಧು, ಗಾರ್ಮೆಂಟ್ಸ್ ಉದ್ಯೋಗಿ

    ಸಾರಿಗೆ ಸಮಸ್ಯೆ ಕುರಿತು ತಾಲೂಕು ಆಡಳಿತದೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಕರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರ ಹಿತ ಕಾಪಾಡದ ಕೈಗಾರಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.
    ಪ್ರದೀಪ್, ಕಾರ್ಮಿಕ ನಿರೀಕ್ಷಕ, ದೊಡ್ಡಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts