More

    ಸಮರ್ಪಕವಾಗಿ ಕೆಲಸ ಮಾಡಿ: ಡಿಸಿ ನಾಗರಾಜ್ ಸೂಚನೆ

    ಚಿಕ್ಕಬಳ್ಳಾಪುರ: ಅದ್ದೂರಿ ಚಿಕ್ಕಬಳ್ಳಾಪುರ ಉತ್ಸವದ ಯಶಸ್ವಿ ಆಚರಣೆಗೆ ಜವಾಬ್ದಾರಿ ವಹಿಸಿರುವ ಸಮಿತಿಗಳು ಸಮರ್ಪಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳ ಪ್ರದರ್ಶನ ಹಾಗೂ ಮೆರವಣಿಗೆ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಜಿಲ್ಲಾ ಕೇಂದ್ರದಲ್ಲಿ ಜ.7ರಿಂದ ಜ.14 ರವರೆಗೆ 7 ದಿನಗಳ ಕಾಲ ಉತ್ಸವ ನಡೆಯಲಿದೆ. ಇದಕ್ಕೆ ಆಯಾ ಇಲಾಖೆಗಳ ಯೋಜನೆಗಳ ಕುರಿತು ಪರಿಸರ ಸ್ನೇಹಿವಾಗಿ ಮತ್ತು ಆಕರ್ಷಕ ಸ್ತಬ್ಧಚಿತ್ರಗಳ ಮೆರವಣಿಗೆ ಹಾಗೂ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
    ಉತ್ಸವಕ್ಕೆ ಸಂಬಂಧಿಸಿದಂತೆ ಜ.2ರಿಂದ ಹೊನಲು ಬೆಳಕಿನ ಪಂದ್ಯಾವಳಿಗಳು ಪ್ರಾರಂಭವಾಗಲಿದ್ದು, ನಗರದ ಜೂನಿಯರ್ ಕಾಲೇಜಿನ ಆವರಣದಲ್ಲಿ ವಾಲಿಬಾಲ್, ಕಬಡ್ಡಿ, ಥ್ರೋಬಾಲ್, ಹಗ್ಗಜಗ್ಗಾಟ ಅಂಕಣಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮಹೇಶ್ ಕುಮಾರ್ ಮಾತನಾಡಿ, ಇತ್ತೀಚೆಗೆ ನಗರ ಪ್ರದೇಶದ ವ್ಯಾಪ್ತಿಯಲ್ಲಿನ ಜನರಿಗೆ ಆರೋಗ್ಯ ಸೇವೆ ಒದಗಿಸಲು ನಮ್ಮ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಬಗ್ಗೆ ಸ್ತಬ್ಧಚಿತ್ರ ಪ್ರದರ್ಶನ ಮೆರವಣಿಗೆ ಕೈಗೊಳ್ಳಲಾಗುವುದು ಎಂದರು.
    ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳ ಸ್ತಬ್ಧಚಿತ್ರಗಳ ಪ್ರದರ್ಶನದ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್ ಮತ್ತಿತರರು ಇದ್ದರು.

    ಕಾರ್ಯಕ್ರಮದ ಸ್ಥಳ ಪರಿಶೀಲನೆ
    ಚಿಕ್ಕಬಳ್ಳಾಪುರ ಉತ್ಸವದ ವೇದಿಕೆ ಸ್ಥಳವನ್ನು ಜಿಪಂ ಸಿಇಒ ಪಿ.ಶಿವಶಂಕರ್ ಪರಿಶೀಲಿಸಿದರು. ತಾಲೂಕಿನ ಸೂಲಾಲಪ್ಪದಿನ್ನೆಯ ಕೆ.ವಿ.ಕ್ಯಾಂಪಸ್ ಬಳಿ ಇರುವ ಖಾಸಗಿ ಜಾಗದಲ್ಲಿ ವೇದಿಕೆ ನಿರ್ಮಾಣಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ಸಿನಿಮಾ ಕಲಾವಿದರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ವಿವಿಧ ವಸ್ತು ಪ್ರದರ್ಶನಗಳು, ಆಹಾರ ಮೇಳ, ಆರೋಗ್ಯ ಮೇಳ, ಫಲಪುಷ್ಟ ಪ್ರದರ್ಶನ, ಊರ ಹಬ್ಬ, ಗಾಳಿಪಟ ಸ್ಪರ್ಧೆ, ಕುಸ್ತಿ ಸ್ಪರ್ಧೆ, ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲಿಸಿ, ಸಿಬ್ಬಂದಿಗೆ ಸಲಹೆ ಸೂಚನೆ ನೀಡಿದರು. ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಶಿವಕುಮಾರ್, ಜಿಲ್ಲಾ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ತೇಜಸ್ ಮತ್ತಿತರರು ಇದ್ದರು.

    ವಾಹನ ನಿಲುಗಡೆ ಸಮಿತಿ ಸಭೆ
    ಉತ್ಸವ ಆಚರಣೆಯ ವೇಳೆ ಜನ ಮತ್ತು ವಾಹನ ದಟ್ಟಣೆಯ ನಿಯಂತ್ರಣ, ಸುಗಮ ಸಂಚಾರಕ್ಕೆ ಡಿವೈಎಸ್ಪಿ ವಾಸುದೇವ್ ನೇತೃತ್ವದ ವಾಹನ ನಿಲುಗಡೆ ಸಮಿತಿ ರಚಿಸಲಾಯಿತು. ವೇದಿಕೆ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸುವ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಗಳ ನಿಗದಿ, ಜನದಟ್ಟಣೆಯಲ್ಲಿ ನೂಕು ನುಗ್ಗಲಾಟಗಳಿಗೆ ಅವಕಾಶ ನೀಡದಿರಲು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚರ್ಚಿಸಲಾಯಿತು. ಡಿವೈಎಸ್ಪಿ ಸೂಕ್ತ ಸ್ಥಳಗಳನ್ನು ಪರಿಶೀಲನೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts